ವಿರೋಧ ಪಕ್ಷದವರು ನೀಡಿದಕ್ಕಿಂತ ಹೆಚ್ಚಿನ ಹಣವನ್ನು ನಮ್ಮ ಕ್ಷೇತ್ರದಲ್ಲಿ ನೀಡಬೇಕು, ಇದರ ಬಗ್ಗೆ ಅಜ್ಜ ತಿಳಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಇದರ ಬಗ್ಗೆ ಚುನಾವಣಾ ಆಯೋಗ ಕ್ರಮವನ್ನು ಕೈಗೊಂಡು, ಕಣ್ಗಾವಲು ಸಮಿತಿ ರಚಿಸಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಶಿವುಯಾದವ್ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಳಕಾಲ್ಮೂರಿನಲ್ಲಿ ಇತ್ತೀಚೆಗೆ ನಡೆದ ಬಿಜೆಪಿಯ ಸಭೆಯಲ್ಲಿ ಮೋರ್ಚಾ ಅಧ್ಯಕ್ಷ್ಯ ತಿಪ್ಪೇಸ್ವಾಮಿ ಸಭೆಯಲ್ಲಿ ಈ ಮಾತುಗಳನ್ನು ಆಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಹಣ ಇಲ್ಲದಿದ್ದರೆ ನಡೆಯುವುದಿಲ್ಲ ವಿರೋಧ ಪಕ್ಷದವರು 500 ರೂ. ನೀಡಿದರೆ ನಾವು ಅದಕ್ಕಿಂತ ಹೆಚ್ಚಾಗಿ ನೀಡಬೇಕಿದೆ. ವಿರೋಧ ಪಕ್ಷದವರು ಏನು ನೀಡದಿದ್ದರೂ ಸಹಾ ನಾವುಗಳು 100 ರೂ.ಗಳನ್ನಾದರೂ ನೀಡಬೇಕಿದೆ ಎಂದು ಅಜ್ಜ ಹೇಳಿದ್ದಾರೆ ಎಂಬ ಮಾಹಿತಿ ನೀಡುವ ವಿಡಿಯೋ ಇತ್ತಿಚೆಗೆ ಎಲ್ಲಾ ಕಡೆ ವೈರಲ್ ಆಗಿದೆ. ಈಬಗ್ಗೆ ಇದುವರೆಗೂ ಸಹಾ ಚುನಾವಣಾ ಆಯೋಗ ಏನು ಕ್ರಮ ಕೈಗೊಂಡಿಲ್ಲ, ಇದು ಚುನಾವಣಾ ಆಯೋಗವನ್ನು ತಲುಪಿಲ್ಲವೇ ಅಥವಾ ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆಯೇ? ಎಂಬ ಅನುಮಾನ ಮೂಡಿಸುವಂತಿದೆ ಎಂದು ಪ್ರಶ್ನಿಸಿದರು.
ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಹಠದಲ್ಲಿರುವ ಬಿಜೆಪಿ ವಾಮ ಮಾರ್ಗದಲ್ಲಿ ಗೆಲುವನ್ನು ಸಾಧಿಸಲು ಹೊರಟಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇದರ ಬಗ್ಗೆ ಚುನಾವಣಾ ಆಯೋಗ ಗಮನ ನೀಡಬೇಕಿದೆ. ಬಿಜೆಪಿ ಪದಾಧಿಕಾರಿಗಳ ಮೇಲೆ ನಿಗಾ ಇರಿಸಲು ಕಣ್ಗಾವಲು ಸಮಿತಿ ರಚಿಸಬೇಕು, ವೀಡಿಯೋದಲ್ಲಿ ಮಾತನಾಡಿರುವ ತಿಪ್ಪೇಸ್ವಾಮಿ ಮತ್ತು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕು, ಇದರ ಬಗ್ಗೆ ಕೂಲಂಕಷವಾಗಿ ತನಿಖೆಯಾಗಬೇಕು ಎಂದು ಒತ್ತಾಯಿಸಿದ ಅವರು, ಇಲ್ಲಿಗೆ ಎಲೆಕ್ಟೋರಲ್ ಬಾಂಡ್‌ನಿಂದ ಬಂದ ಹಣ ಇಲ್ಲಿಗೆ ಬರುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಎಚ್ಚೆತ್ತುಕೊಳ್ಳಬೇಕಿದೆ ಎಂದು ಶಿವುಯಾದವ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸೈಯದ್ ವಲಿ ಖಾದ್ರಿ ರವೀಶ್ ಭಾಗವಹಿಸಿದ್ದರು.
