ಬೆಂಗಳೂರಿನ ವೈಟ್‌ಫೀಲ್ಡ್ ಐಟಿಪಿಎಲ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕೃತ ಸ್ಪಷ್ಟನೆ ನೀಡಿದ್ದು, ಪರಿಶೀಲಿಸದ ಸುದ್ದಿಗಳು ಪ್ರಕರಣದ ಪರಿಣಾಮಕಾರಿ ತನಿಖೆಗೆ ಅಡ್ಡಿಯಾಗುತ್ತದೆ ಹಾಗೂ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ತೊಡಕುಂಟುಮಾಡುತ್ತದೆ. ಈ ನಿಟ್ಟಿನಲ್ಲಿ ಅಧಿಕೃತ ಮಾಹಿತಿ ಪ್ರಕಟಿಸಿ ಸಹಕರಿಸಬೇಕು ಎಂದು ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಎನ್‌ಐಎ, “ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದ ತನಿಖೆಯ ಭಾಗವಾಗಿ, ಸ್ಫೋಟ ನಡೆಸಿದ ಆರೋಪಿಗಳನ್ನು ಎನ್‌ಐಎ ಗುರುತಿಸಿದೆ. ಈ ಆರೋಪಿಗಳ ಪೈಕಿ ಒಬ್ಬ ಮುಸ್ಸಾವಿರ್ ಹುಸೇನ್ ಶಾಜಿಬ್ ಹಾಗೂ ಮತ್ತೊಬ್ಬನನ್ನು ಅಬ್ದುಲ್ ಮಥೀನ್ ತಾಹಾ ಎಂದು ಗುರುತಿಸಿದೆ. ಈ ಇಬ್ಬರೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು” ಎಂದು ಹೇಳಿದೆ.
ಮುಂದುವರೆದು, “ಈ ತನಿಖೆಯ ಭಾಗವಾಗಿ ಚಿಕ್ಕಮಗಳೂರಿನ ಖಾಲ್ಸಾದ ಮುಜಾಮ್ಮಿಲ್ ಶರೀಫ್ ಪ್ರಮುಖ ಆರೋಪಿಗಳಿಗೆ ಲಾಜಿಸ್ಟಿಕ್ಸ್ ಬೆಂಬಲ ನೀಡಿದ್ದನು. ಆತನನ್ನು ಎನ್‌ಐಎ ಮಾರ್ಚ್ 26ರಂದು ಬಂಧಿಸಿದೆ. ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸಿದೆ. ಇನ್ನು ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚುವ ಮತ್ತು ಬಂಧಿಸುವ ಪ್ರಯತ್ನಗಳ ಭಾಗವಾಗಿ ಮಾ.29 ರಂದು ಆರೋಪಿಗಳನ್ನು ಹುಡುಕಿ ಕೊಟ್ಟವರಿಗೆ ಹತ್ತು ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಲಾಗಿತ್ತು” ಎಂದು ಎನ್‌ಐಎ ತಿಳಿಸಿದೆ.
“ಎನ್‌ಐಎ ಅಧಿಕಾರಿಗಳ ತಂಡವು ಕರ್ನಾಟಕ, ತಮಿಳುನಾಡು ಹಾಗೂ ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ಶೋಧ ನಡೆಸಿದೆ. ಪ್ರಕರಣದ ಸಾಕ್ಷ್ಯ ಮತ್ತು ಮಾಹಿತಿ ಸಂಗ್ರಹಿಸಲು ತಲೆಮರೆಸಿಕೊಂಡಿರುವ ಮತ್ತು ಬಂಧಿತ ಆರೋಪಿಗಳ ಕಾಲೇಜು ಮತ್ತು ಶಾಲಾ ಸಮಯದ ಸ್ನೇಹಿತರು ಸೇರಿದಂತೆ ಎಲ್ಲ ಪರಿಚಯಸ್ಥರನ್ನು ಕರೆಸಿ ವಿಚಾರಣೆ ನಡೆಸುತ್ತಿದೆ” ಎಂದು ಮಾಹಿತಿ ನೀಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಿರಾಕಲ್ ಡ್ರಿಂಕ್ಸ್ ಕಟ್ಟಡದಲ್ಲಿ ಅಗ್ನಿ ಅವಘಡ: 10ಕ್ಕೂ ಹೆಚ್ಚು ಉದ್ಯೋಗಿಗಳು ಸಿಲುಕಿರುವ ಶಂಕೆ
“ಪ್ರಕರಣವು ಭಯೋತ್ಪಾದಕ ಘಟನೆಯಾಗಿರುವುದರಿಂದ, ಸಾಕ್ಷಿಗಳ ಗುರುತಿನ ಯಾವುದೇ ಮಾಹಿತಿಯು ತನಿಖೆಗೆ ಅಡ್ಡಿಯಾಗುವುದರ ಜತೆಗೆ ವ್ಯಕ್ತಿಗಳನ್ನು ಕರೆಸುವ ಅಪಾಯವನ್ನು ಉಂಟುಮಾಡಬಹುದು. ಹಾಗಾಗಿ, ಪರಿಶೀಲಿಸದ ಸುದ್ದಿಗಳು ಪ್ರಕರಣದ ಪರಿಣಾಮಕಾರಿ ತನಿಖೆಗೆ ಅಡ್ಡಿಯಾಗುತ್ತವೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಎಲ್ಲರ ಸಹಕಾರ ನೀಡಬೇಕು” ಎಂದು ಎನ್‌ಐಎ ಕೋರಿದೆ.