ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಹಿಂದಿನ ರಾಜಮನೆತನದ 9 ವಂಶಸ್ಥರನ್ನು ಕಣಕ್ಕಿಳಿಸಿದೆ. ಅವರಲ್ಲಿ ಐದು ಮಂದಿ ಹೊಸದಾಗಿ ರಾಜಕೀಯ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಮೈಸೂರಿನ ಯದುವೀರ್ ಒಡೆಯಾರ್ ಮತ್ತು ಕೃಷ್ಣನಗರದ ಅಮೃತಾ ರಾಯ್ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ.
ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಲ್ಲಿ ಟಿಎಂಸಿಯ ಮೊಹುವಾ ಮೊಯಿತ್ರಾ ಅವರ ವಿರುದ್ಧ ಈ ಹಿಂದೆ ಕೃಷ್ಣನಗರವನ್ನು ಆಳಿದ್ದ ರಾಜಮನೆತನದ ‘ರಾಜಮಾತಾ’ ಅಮೃತಾ ರಾಯ್ ಅವರನ್ನು ಬಿಜೆಪಿ ಕಳಕ್ಕಿಳಿಸಿದೆ. ಅಮೃತಾ ರಾಯ್ ಅವರು 18ನೇ ಶತಮಾನದ ರಾಜ ರಾಜಾ ಕೃಷ್ಣಚಂದ್ರ ರಾಯ್ ಅವರ ನಾಡಿಯಾ ಕುಟುಂಬಕ್ಕೆ ಸೇರಿದವರು.
ಲಭ್ಯವಿರುವ ದಾಖಲೆಗಳ ಪ್ರಕಾರ, ಕೃಷ್ಣಚಂದ್ರ ರಾಯ್ ಅವರು 1728 ರಿಂದ 1782 ರವರೆಗೆ ಆಳ್ವಿಕೆ ನಡೆಸಿದ್ದರು. 1757ರಲ್ಲಿ ನಡೆದ ಪ್ಲಾಸಿ ಕದನದ ಸಮಯದಲ್ಲಿ ನವಾಬ್ ಸಿರಾಜ್ ಉದ್ ದೌಲಾ ವಿರುದ್ಧ ಬ್ರಿಟಿಷರ ಪರವಾಗಿ ಕೃಷ್ಣಚಂದ್ರ ರಾಯ್ ಹೋರಾಡಿದ್ದರು. ಆ ಯುದ್ಧದಲ್ಲಿ ಬ್ರಿಟಿಷರಿಗೆ ಬೆಂಬಲ ನೀಡಿ, ಬಂಗಾಳಿ ಭಾಷೆಯನ್ನು ಉಳಿಸಿದ್ದರು ಎಂದು ಹೇಳಲಾಗಿದೆ.
ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ ಮೊಹುವಾ ಮೊಯಿತ್ರಾ ಮೇಲಿದ್ದು, ಅವರನ್ನು ಸಂಸತ್ನಿಂದ ಉಚ್ಛಾಟನೆ ಮಾಡಲಾಗಿದೆ. ಇದೀಗ, ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ನಾನು ಅಭ್ಯರ್ಥಿಯಾರೆಂದು ನೋಡುವುದಿಲ್ಲ. ನನ್ನ ಹೋರಾಟ ಬಿಜೆಪಿ ವಿರುದ್ಧ. ಆ ಪಕ್ಷದಿಂದ ಯಾರೇ ಕಣಕ್ಕಿಳಿದರೂ, ಹೋರಾಡುತ್ತೇನೆ. ಬಿಜೆಪಿಗೆ ಚುನಾವಣೆಯಲ್ಲಿ ನನ್ನ ಗೆಲುವು ಉತ್ತರವಾಗಲಿದೆ ಎಂದು ಮೊಯಿತ್ರಾ ಹೇಳಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಬದಲಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. 2023ರ ಡಿಸೆಂಬರ್ನಲ್ಲಿ ನಡೆದ ಸಂಸತ್ ಅಧಿವೇಶನದ ವೇಳೆ ಪ್ರತಾಪ್ ಸಿಂಹ ನೀಡಿದ್ದ ಪಾಸ್ ಪಡೆದವರು ಸಂಸತ್ಗೆ ನುಗ್ಗಿ, ಗಲಾಟೆ ಮಾಡಿದ್ದರು. ಆ ಕಾರಣದಿಂದಲೆ ಪ್ರತಾಪ್ ಸಿಂಹ ಟಿಕೆಟ್ ಕಳೆದುಕೊಂಡಿದ್ದರೆ ಎಂಬ ಮಾತುಗಳಿವೆ.
ಇನ್ನು, ಯದುವೀರ್ ಅವರು ಮೈಸೂರು ಒಡೆಯರ್ ರಾಜ ಮನೆತನದವರು. ಅವರ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕೂಡ 1984, 1989, 1996 ಹಾಗೂ 1999ರಲ್ಲಿ ಕಾಂಗ್ರೆಸ್ನಿಂದ ಸಂಸದರಾಗಿದ್ದರು. 2015ರಲ್ಲಿ ಶ್ರೀಕಂಠದತ್ತ ಒಡೆಯರ್ ಅವರ ಪತ್ನಿ ಪ್ರಮೋದಾ ದೇವಿ ಅವರು ಯದುವೀರ್ ಅವರನ್ನು ದತ್ತು ಪಡೆದಿದ್ದರು ಮತ್ತು ಅವರನ್ನು ತಮ್ಮ ವಾರಸುದಾರನೆಂದು ಘೋಷಿಸಿದ್ದರು.
ಪೂರ್ವ ತ್ರಿಪುರಾ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದೆ ರೇವತಿ ವರ್ಮಾ ಅವರ ಬದಲಿಗೆ ತ್ರಿಪುರಾದ ಮಾಣಿಕ್ಯ ವಂಶದವರಾದ ಕೃತಿ ಸಿಂಗ್ ದೆಬ್ಬರ್ಮಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಒಡಿಶಾದಲ್ಲಿ, ಕಾಲಹಂಡಿ ರಾಜ ಕುಟುಂಬದ ಮಾಳವಿಕಾ ಕೇಶರಿ ದೇವ್ ಮತ್ತು ಪಟ್ನಾಗಢ-ಬೋಲಂಗೀರ್ ರಾಜಮನೆತನದ ಸಂಗೀತಾ ಕುಮಾರಿ ಸಿಂಗ್ ದೇವ್ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.
ರಾಜಸ್ಥಾನದ ಮೇವಾರ್ನ ರಾಜಮನೆತನದ ಸೊಸೆ ಮಹಿಮಾ ಸಿಂಗ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಅವರು ರಾಜಸ್ಥಾನದ ರಾಜಸಮಂದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅಲ್ಲದೆ, ರಾಜಸ್ಥಾನದ ಸಿಂಧಿಯಾ ರಾಜಮನೆತನದವರಾದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂಧರಾ ರಾಜೆ ಅವರ ಪುತ್ರ ದುಶ್ಯಂತ್ ಸಿಂಗ್ ಅವರು ಜಲಾವರ್-ಬರಾನ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ದುಶ್ಯಂತ್ ಸಿಂಗ್ ಅವರು ಅದೇ ಕ್ಷೇತ್ರದಲ್ಲಿ ನಾಲ್ಕು ಬಾರಿ ಸ್ಪರ್ಧಿಸಿ, ಸಂಸದರಾಗಿದ್ದಾರೆ.
ಪಂಜಾಬ್ನ ಪಟಿಯಾಲಾ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಪ್ರಣೀತ್ ಕೌರ್ ಕೂಟ ಪಟಿಯಾಲ ರಾಜಮನೆತನಕ್ಕೆ ಸೇರಿದವರು.
ಮಧ್ಯಪ್ರದೇಶದ ಗುನಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಗ್ವಾಲಿಯರ್ ರಾಜಮನೆತನದ ಕುಟುಂಬದವರು. ಕಾಂಗ್ರೆಸ್ನಲ್ಲಿದ್ದ ಅವರು ತಮ್ಮ 27 ಬೆಂಬಲಿಗರೊಂದಿಗೆ ಬಿಜೆಪಿ ಸೇರಿದ್ದರು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ, ಬಿಜೆಪಿ ಅಧಿಕಾರಕ್ಕೇರಲು ನೆರವಾಗಿದ್ದರು. ಬಳಿಕ, ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆಮಾಡಲಾಗಿತ್ತು. ಇದೀಗ, ಬಿಜೆಪಿ ಟಿಕೆಟ್ನಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
“ರಾಜಕುಟುಂಬದ ಹಿನ್ನೆಲೆಯುಳ್ಳ ಸದಸ್ಯರು ರಾಜಕೀಯದಲ್ಲಿ ಪಾಲ್ಗೊಳ್ಳುವುದು ಭಾರತೀಯ ರಾಜಕೀಯದಲ್ಲಿ ಹೊಸದೇನಲ್ಲ. ಆದರೆ, ಈ ಬಾರಿ, ರಾಮಮನೆತನದವರನ್ನೇ ಬಿಜೆಪಿ ಹೆಕ್ಕಿ ಆಯ್ಕೆ ಮಾಡಿರುವುದು ಗಮನಾರ್ಹ” ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಮಾಹಿತಿ ಮೂಲ: ಟಿಎನ್ಐಇ