ದೆಹಲಿ ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧಿತರಾಗಿರುವ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರನ್ನು ತಿಹಾರ್ ಜೈಲಿನಲ್ಲಿ ವಿಚಾರಣೆ ನಡೆಸಲು ಸಿಬಿಐ ಮುಂದಾಗಿದೆ. ಸಿಬಿಐ ನಿರ್ಧಾರವನ್ನು ವಿರೋಧಿಸಿ ಕವಿತಾ ಅವರು ಕೋರ್ಟ್‌ನಲ್ಲಿ ಶನಿವಾರ ಅರ್ಜಿ ಸಲ್ಲಿಸಿದ್ದಾರೆ.
ಕವಿತಾ ಅವರನ್ನು ತಿಹಾರ್ ಜೈಲಿನಲ್ಲಿ ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಸಿಬಿಐ ಮನವಿ ಮಾಡಿತ್ತು. ಸಿಬಿಐ ಮನವಿಯನ್ನು ಪುರಸ್ಕರಿಸಿದ್ದ ಕೋರ್ಟ್, ಶುಕ್ರವಾರ ಅನುಮತಿ ನೀಡಿದೆ.
ಕವಿತಾ ಪರವಾಗಿ ಅರ್ಜಿ ಸಲ್ಲಿಸಿರುವ ವಕೀಲ ನಿತೇಶ್ ರಾಣಾ, “ಸಿಬಿಐ ಕಾನೂನು ಪ್ರಕ್ರಿಯೆಯನ್ನು ಉಲ್ಲಂಘಿಸುತ್ತಿದೆ. ನ್ಯಾಯಾಲಯದಿಂದ ಅನುಕೂಲಕರ ಆದೇಶವನ್ನು ಪಡೆಯಲು ಸಿಬಿಐ ಸತ್ಯವನ್ನು ಬಹಿರಂಗಪಡಿಸಿಲ್ಲ. ಇದು ನನಗೆ ತೀವ್ರ ಆತಂಕವನ್ನು ಉಂಟುಮಾಡಿದೆ” ಎಂದು ಹೇಳಿದ್ದಾರೆ.
“ಕವಿತಾ ಪರವಾದ ವಾದ ಕೇಳುವವರೆಗೂ ಆದೇಶವನ್ನು ಹಿಂಪಡೆಬೇಕು” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ನ್ಯಾಯಾಲಯವು ಕವಿತಾ ಅವರ ಮನವಿಯನ್ನು ಶನಿವಾರದ ನಂತರ ಆಲಿಸುವ ಸಾಧ್ಯತೆಯಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾರ್ಚ್ 15 ರಂದು ಕವಿತಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಕಳೆದ ಮಂಗಳವಾರ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಗುರುವಾರ (ಏಪ್ರಿಲ್ 4) ತನ್ನ 16 ವರ್ಷದ ಮಗನ ಪರೀಕ್ಷೆಯ ಕಾರಣಕ್ಕಾಗಿ ಮಧ್ಯಂತರ ಜಾಮೀನು ನೀಡುವಂತೆ ಕವಿತಾ ಮನವಿ ಮಾಡಿದ್ದರು. ಪರೀಕ್ಷೆಯ ವೇಳೆ ಮಗನಿಗೆ ತಾಯಿಯ ನೈತಿಕ ಮತ್ತು ಭಾವನಾತ್ಮಕ ಬೆಂಬಲದ ಅಗತ್ಯ ಇರುತ್ತದೆ ಎಂದು ಅವರು ಮನವಿಯಲ್ಲಿ ಹೇಳಿದ್ದರು.
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರು ‘ಸೌತ್ ಗ್ರೂಪ್’ನ ಪ್ರಮುಖ ಸದಸ್ಯೆ ಎಂದು ಆರೋಪಿಸಲಾಗಿದೆ.