ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್

Date:

Advertisements
ಮನಮೋಹನ್ ಸಿಂಗ್ ಎಂದೂ ಅಧಿಕಾರ ಚಲಾಯಿಸಲಿಲ್ಲ, ಹಣ ಮಾಡಲಿಲ್ಲ, ಪ್ರಚಾರ ಬಯಸಲಿಲ್ಲ, ಪ್ರತಿಷ್ಠೆ-ಪರಾಕ್ರಮ ತೋರಲಿಲ್ಲ. ಆಗಿದ್ದೆಲ್ಲ ನನ್ನಿಂದ, ನಾನು ಅನ್ನಲಿಲ್ಲ. ಅಪರೂಪದ ಅರ್ಥಶಾಸ್ತ್ರಜ್ಞನಾಗಿದ್ದರೂ ಅಹಂ ತೋರಲಿಲ್ಲ. ಇಂತಹ ಸರಳ ಸಜ್ಜನನನ್ನು ಭಾರತದ ರಾಜಕಾರಣ ಕಂಡಿದ್ದಿಲ್ಲ. ಭಾರತ ಎಂದಿಗೂ ಮರೆಯಲಾರದ, ಮರೆಯಬಾರದ ವ್ಯಕ್ತಿ ಮನಮೋಹನ್ ಸಿಂಗ್

ಜನವರಿ 3, 2014ರಂದು, ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರ ಎರಡನೇ ಮತ್ತು ಕೊನೆಯ ಅವಧಿಯ ಅಂತ್ಯದ ವೇಳೆ, ತಮ್ಮ ಸರ್ಕಾರಕ್ಕೆ ಎದುರಾದ ಟೀಕೆಗಳಿಗೆ ಉತ್ತರಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ‘ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ನನ್ನನ್ನು ದುರ್ಬಲ ಪ್ರಧಾನಿ ಎಂದು ಕರೆಯುತ್ತಿವೆ, ಅದನ್ನು ನಾನು ನಂಬುವುದಿಲ್ಲ. ಇವರಿಗಿಂತ ಇತಿಹಾಸ ನನ್ನ ಬಗ್ಗೆ ಕರುಣೆಯಿಂದಿದೆ ಎಂದು ಪ್ರಾಮಾಣಿಕವಾಗಿ ನಂಬುತ್ತೇನೆ’ ಎಂದಿದ್ದರು. ಮುಂದುವರೆದು, ‘ನರೇಂದ್ರ ಮೋದಿ ಪ್ರಧಾನಿಯಾಗುವುದು ದುರಂತ’ ಎಂದು ಭವಿಷ್ಯವನ್ನೂ ನುಡಿದಿದ್ದರು.

ಹತ್ತು ವರ್ಷಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದು, ನಿರ್ಗಮಿಸುವ ಸಂದರ್ಭದಲ್ಲಿ ಆಡಿದ ಮಾತುಗಳು ಹತ್ತು ವರ್ಷಗಳ ನಂತರವೂ ಜೀವಂತಿಕೆಯಿಂದ ಕೂಡಿವೆ. ಸತ್ಯವನ್ನೇ ಸಾರುತ್ತಿವೆ.

ಭಾರತೀಯ ಸಂಸತ್ತಿನಲ್ಲಿ ಮೂವತ್ಮೂರು ವರ್ಷಗಳ ನಿರಂತರ ಸೇವೆ ಸಲ್ಲಿಸಿದ ನಂತರ ಏ. 3ರಂದು ರಾಜ್ಯಸಭೆಯಿಂದ ನಿವೃತ್ತರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ನಿಜಾರ್ಥದಲ್ಲಿ ಮೇಲ್ಮನೆಯಲ್ಲಿ ಇರಲೇಬೇಕಾದ ಮೇರುವ್ಯಕ್ತಿ. ಅವರ ಓದು, ವಿದ್ವತ್ತು, ತಾಳ್ಮೆ, ಬುದ್ಧಿವಂತಿಕೆ, ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ದಕ್ಷತೆ- ಸದ್ಯದ ರಾಜಕಾರಣದಲ್ಲಿ ಸಿಗುವುದಿಲ್ಲ.

Advertisements

ಮನಮೋಹನ್ ಸಿಂಗ್ ಎಂದೂ ನೇರವಾಗಿ ಚುನಾವಣೆ ಎದುರಿಸಿದವರಲ್ಲ. ಅವರು ಕೇಂದ್ರ ಹಣಕಾಸು ಸಚಿವರಾದ ನಾಲ್ಕು ತಿಂಗಳ ನಂತರ, ಅಕ್ಟೋಬರ್ 1991ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ರಾಜ್ಯಸಭೆಗೆ ನಾಮನಿರ್ದೇಶನಗೊಂಡರು. ಅವರು ರಾಜ್ಯಸಭೆಯಲ್ಲಿ ಐದು ಅವಧಿಗೆ ಅಸ್ಸಾಂ, ಒಂದು ಬಾರಿ ರಾಜಸ್ಥಾನವನ್ನು ಪ್ರತಿನಿಧಿಸಿದರು.

92ರ ಹರೆಯದಲ್ಲೂ ಅವರು ಸಂಸತ್ತಿಗೆ ಗಾಲಿಕುರ್ಚಿಯಲ್ಲಿ ನಿಯಮಿತವಾಗಿ ಹಾಜರಾಗುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸದನ ಮಾತನಾಡಲು, ಚರ್ಚಿಸಲು ಮತ್ತು ಕಾನೂನು ರೂಪಿಸಲು ಜನಪ್ರತಿನಿಧಿಗಳಿಗೆ ವೇದಿಕೆಯಾದ ಉದಾಹರಣೆಗಳಿಲ್ಲ. ಬದಲಿಗೆ ಅಳತೆ ಮೀರಿದ ಮಾತಿಗೆ, ಭೋಪರಾಕಿಗೆ, ಕಾದಾಟಕ್ಕೆ ಕಣವಾಗುತ್ತಿದೆ. ಅಂತಹ ಸಮಯದಲ್ಲಿ ಮನಮೋಹನ್ ಸಿಂಗ್‌ರ ಹಾಜರಿ, ಅವರ ಬದ್ಧತೆಯ ಪ್ರತೀಕ. ಮೇಲ್ಮನೆಗೊಂದು ಮುಕುಟ. ಆಶ್ಚರ್ಯಕರ ಸಂಗತಿ ಎಂದರೆ, ಅವರು ಎಂದಿಗೂ ಧ್ವನಿ ಎತ್ತಲಿಲ್ಲ, ಸದನದ ಬಾವಿಯತ್ತ ಧಾವಿಸಲಿಲ್ಲ, ಸಭ್ಯತೆಯ ಎಲ್ಲೆ ಮೀರಲಿಲ್ಲ, ನಡವಳಿಕೆಯ ನಿಯಮಗಳನ್ನೂ ಉಲ್ಲಂಘಿಸಲಿಲ್ಲ.

ಪಂಜಾಬ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗುವ ಮೊದಲು ಅರ್ಥಶಾಸ್ತ್ರಜ್ಞರಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಹಣಕಾಸು ಕಾರ್ಯದರ್ಶಿಯಾಗಿ, ಪ್ರಧಾನ ಮಂತ್ರಿಗಳ ಸಲಹೆಗಾರರಾಗಿ, ಹಣಕಾಸು ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದರು. ಪ್ರತಿಯೊಂದು ಹುದ್ದೆಯಲ್ಲೂ ‘ಸಿಂಗ್ ಸ್ಟೈಲ್ ಆಫ್ ವರ್ಕಿಂಗ್’ ಛಾಪು ಒತ್ತಿದರು. ಸಲ್ಲಿಸಿದ ಸೇವೆಯನ್ನು ಸ್ಮರಣೀಯಗೊಳಿಸಿದರು.

ಹೆಚ್ಚು ಮಾತನಾಡದ, ಮಾಡಿದ್ದನ್ನು ಹೇಳಿಕೊಳ್ಳದ ಮನಮೋಹನ್ ಸಿಂಗ್‌ರದು ರಾಜಕಾರಣಕ್ಕೆ ಒಗ್ಗದ ವ್ಯಕ್ತಿತ್ವ. ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್ ಒತ್ತಡಕ್ಕೆ ಮಣಿದು ರಾಜಕಾರಣಿಯಾದ ಸಿಂಗ್, ಅವರ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರಾದರು. ದೇಶದ ಸ್ಥಿತಿಗತಿಯನ್ನು ಅನುಭವದಿಂದ ಅರಿತಿದ್ದರು. ಗ್ರಾಮದಿಂದ ಗ್ಲೋಬಲ್‌ವರೆಗಿನ ಅರ್ಥಶಾಸ್ತ್ರವನ್ನು ಅಧ್ಯಯನದಿಂದ ಅರಗಿಸಿಕೊಂಡಿದ್ದರು. ಹಣಕಾಸು ಸಚಿವರಾದಾಗ, ತಮ್ಮ ವಿದ್ವತ್ತನ್ನೇ ನಿಕಷಕ್ಕೆ ಒಡ್ಡಿ ಭಾರತದ ಆರ್ಥಿಕ ವ್ಯವಸ್ಥೆಯನ್ನು ಹೊಸಹಳಿಗೆ ತಂದರು. ಅವರ ಉದಾರೀಕರಣ ನೀತಿ ಅಂದು ಹಲವರ ಟೀಕೆಗೆ ಒಳಗಾಯಿತು.

ಈಗ, ಮೂವತ್ತು ವರ್ಷಗಳ ನಂತರ, ಹಿಂತಿರುಗಿ ನೋಡಿದರೆ, ಭಾರತವು 27 ಕೋಟಿ ಬಡವರನ್ನು ಬಡತನದಿಂದ ಮೇಲೆತ್ತಲು ಸಾಧ್ಯವಾಗಿದೆ ಹಾಗೂ ಭಾರತದ ಆರ್ಥಿಕ ವ್ಯವಸ್ಥೆಯ ಸುಧಾರಣೆಯ ಶಿಲ್ಪಿಯಾಗಿ ಸಿಂಗ್ ಕಾಣುತ್ತಿದ್ದಾರೆ.

ಆಕಸ್ಮಿಕವಾಗಿ 2004ರಲ್ಲಿ ಪ್ರಧಾನಿಯಾದ ಮನಮೋಹನರ ಹತ್ತು ವರ್ಷಗಳ ಆಡಳಿತದಲ್ಲಿ ಅವರು ಮಾತನಾಡಿದ್ದು ಅಲ್ಪ, ಕೊಟ್ಟ ಕೊಡುಗೆ ಅಪಾರ. ಅವರು ಆಗಾಗ್ಗೆ ಆಡಿದ ಮುತ್ತಿನಂತಹ ಐದು ಮಾತುಗಳು, ಸಾರ್ವಕಾಲಿಕ ಸತ್ಯ ಸಾರುವ ಹೇಳಿಕೆಗಳಾಗಿ ಭಾರತೀಯ ರಾಜಕಾರಣದಲ್ಲಿ ದಾಖಲಾಗಿವೆ.

1991ರಲ್ಲಿ ‘ಭಾರತ ಈಗ ಜಾಗೃತವಾಗಿದೆ’ ಎಂದರು. ಅಂದರೆ ಭಾರತಕ್ಕೆ ಕಾಲ ಕೂಡಿ ಬಂದಿದೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ನಾವು ಮೇಲುಗೈ ಸಾಧಿಸುತ್ತೇವೆ, ಜಯಿಸುತ್ತೇವೆ ಎಂದಿದ್ದರು.

1999ರಲ್ಲಿ ‘ರಾಜಕಾರಣಿಗಳು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ’ ಎಂದರು. ಅಂದರೆ, ನಮಗೆ ಹೊಸ ರೀತಿಯ ರಾಜಕೀಯ ಬೇಕು, ವಿಷಯಗಳನ್ನು ನೇರವಾಗಿ ಹೇಳುವ ನಿಷ್ಕಪಟ ರಾಜಕಾರಣಿಗಳು ಬೇಕು. ಎಲ್ಲರನ್ನು ಎಲ್ಲಾ ಕಾಲಕ್ಕೂ ಮೂರ್ಖರನ್ನಾಗಿ ಮಾಡುವುದು ಸಾಧ್ಯವಿಲ್ಲ ಎಂದಿದ್ದರು.

2014ರಲ್ಲಿ, ‘ಇತಿಹಾಸ ನನ್ನನ್ನು ಕರುಣೆಯಿಂದ ಕಾಣುತ್ತದೆ’ ಎಂದರು. ಹತ್ತು ವರ್ಷಗಳ ಆಡಳಿತದ ನಂತರ, ಭ್ರಷ್ಟಾಚಾರ ಮತ್ತು ಹಣದುಬ್ಬರಗಳ ಟೀಕೆಗೆ ಗುರಿಯಾದಾಗ; ದುರ್ಬಲ ಪ್ರಧಾನಿ ಎಂದು ತೆಗಳಿಕೆಗೆ ಈಡಾದಾಗ; ನಾನು ಕೆಲಸ ಮಾಡಿದ್ದೇನೆ, ಇತಿಹಾಸ ಸ್ಮರಿಸುತ್ತದೆ ಎಂದಿದ್ದರು.

2014ರಲ್ಲಿ ‘ನರೇಂದ್ರ ಮೋದಿ ಪ್ರಧಾನಿಯಾಗುವುದು ದುರಂತ’ ಎಂದರು. ಅದನ್ನು ನಾವೀಗ ನೋಡುತ್ತಿದ್ದೇವೆ.

2016ರಲ್ಲಿ ‘ನೋಟು ಅಮಾನ್ಯೀಕರಣ ಎನ್ನುವುದು ಸಾಮಾನ್ಯ ಜನರ ಕಾನೂನುಬದ್ಧ ಲೂಟಿ’ ಎಂದರು. ಅದು ಕೂಡ ನಮ್ಮ ಅನುಭವಕ್ಕೆ ಬಂದಿದೆ, ಸತ್ಯವಾಗಿದೆ. ಅನುಭವಿಸುತ್ತಿದ್ದೇವೆ.

ಮನಮೋಹನ್ ಸಿಂಗ್ ಎಂದೂ ಅಧಿಕಾರ ಚಲಾಯಿಸಲಿಲ್ಲ, ಹಣ ಮಾಡಲಿಲ್ಲ, ಪ್ರಚಾರ ಬಯಸಲಿಲ್ಲ, ಪ್ರತಿಷ್ಠೆ-ಪರಾಕ್ರಮ ತೋರಲಿಲ್ಲ. ಆಗಿದ್ದೆಲ್ಲ ನನ್ನಿಂದ, ನಾನು ಅನ್ನಲಿಲ್ಲ. ಅಪರೂಪದ ಅರ್ಥಶಾಸ್ತ್ರಜ್ಞನಾಗಿದ್ದರೂ ಅಹಂ ತೋರಲಿಲ್ಲ. ಇಂತಹ ಸರಳ ಸಜ್ಜನನನ್ನು ಭಾರತದ ರಾಜಕಾರಣ ಕಂಡಿದ್ದಿಲ್ಲ. ಭಾರತ ಎಂದಿಗೂ ಮರೆಯಲಾರದ, ಮರೆಯಬಾರದ ವ್ಯಕ್ತಿ ಮನಮೋಹನ್ ಸಿಂಗ್.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ವಿಮರ್ಶೆ ಇಲ್ಲದ ವ್ಯಾಖ್ಯಾನ, ಭಾರತದ ಆರ್ಥಿಕತೆ ಸದೃಢವಲ್ಲದ ಕಾಲದಲ್ಲಿ ವಿದೇಶಿ ವ್ಯಾಪಾರಿ ಒಪ್ಪಂದಕ್ಕೆ ಸಹಿ ಹಾಕಿ ಜಾಗತೀಕರಣ ಉದಾರಿಕರಣ ಖಾಸಗಿಕರಣವನ್ನ ಜಾರಿಗೊಳಿಸಿ ಬಡವರ ಮತ್ತು ಶ್ರೀಮಂತರ ಆರ್ಥಿಕ ಸಾಮಾಜಿಕ ಅಂತರವನ್ನು ಹೆಚ್ಚು ಮಾಡಿದ ಕುಖ್ಯಾತಿ ಮನಮೋಹನ ಸಿಂಗ್ ಮೇಲಿದೆ…
    ಈ ವಿಚಾರವನ್ನೇ ಪ್ರಸ್ತಾಪಿಸದೆ ಈ ಲೇಖನ ಬರೆದಿರುವ ಲೇಖಕ ಖಾಲಿ ತಲೆಯವನು ಅನಿಸುತ್ತದೆ ಹಾಗಾಗಿ ಇದೊಂದು ಅಪೂರ್ಣ ಮತ್ತು ಬಟ್ಟಂಗಿತನದಿಂದ ಕೂಡಿದ ಲೇಖನ ಎಂದು ಹೇಳಬಹುದು….

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X