ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್

Date:

ಮನಮೋಹನ್ ಸಿಂಗ್ ಎಂದೂ ಅಧಿಕಾರ ಚಲಾಯಿಸಲಿಲ್ಲ, ಹಣ ಮಾಡಲಿಲ್ಲ, ಪ್ರಚಾರ ಬಯಸಲಿಲ್ಲ, ಪ್ರತಿಷ್ಠೆ-ಪರಾಕ್ರಮ ತೋರಲಿಲ್ಲ. ಆಗಿದ್ದೆಲ್ಲ ನನ್ನಿಂದ, ನಾನು ಅನ್ನಲಿಲ್ಲ. ಅಪರೂಪದ ಅರ್ಥಶಾಸ್ತ್ರಜ್ಞನಾಗಿದ್ದರೂ ಅಹಂ ತೋರಲಿಲ್ಲ. ಇಂತಹ ಸರಳ ಸಜ್ಜನನನ್ನು ಭಾರತದ ರಾಜಕಾರಣ ಕಂಡಿದ್ದಿಲ್ಲ. ಭಾರತ ಎಂದಿಗೂ ಮರೆಯಲಾರದ, ಮರೆಯಬಾರದ ವ್ಯಕ್ತಿ ಮನಮೋಹನ್ ಸಿಂಗ್

ಜನವರಿ 3, 2014ರಂದು, ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರ ಎರಡನೇ ಮತ್ತು ಕೊನೆಯ ಅವಧಿಯ ಅಂತ್ಯದ ವೇಳೆ, ತಮ್ಮ ಸರ್ಕಾರಕ್ಕೆ ಎದುರಾದ ಟೀಕೆಗಳಿಗೆ ಉತ್ತರಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ‘ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ನನ್ನನ್ನು ದುರ್ಬಲ ಪ್ರಧಾನಿ ಎಂದು ಕರೆಯುತ್ತಿವೆ, ಅದನ್ನು ನಾನು ನಂಬುವುದಿಲ್ಲ. ಇವರಿಗಿಂತ ಇತಿಹಾಸ ನನ್ನ ಬಗ್ಗೆ ಕರುಣೆಯಿಂದಿದೆ ಎಂದು ಪ್ರಾಮಾಣಿಕವಾಗಿ ನಂಬುತ್ತೇನೆ’ ಎಂದಿದ್ದರು. ಮುಂದುವರೆದು, ‘ನರೇಂದ್ರ ಮೋದಿ ಪ್ರಧಾನಿಯಾಗುವುದು ದುರಂತ’ ಎಂದು ಭವಿಷ್ಯವನ್ನೂ ನುಡಿದಿದ್ದರು.

- Advertisement -

ಹತ್ತು ವರ್ಷಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದು, ನಿರ್ಗಮಿಸುವ ಸಂದರ್ಭದಲ್ಲಿ ಆಡಿದ ಮಾತುಗಳು ಹತ್ತು ವರ್ಷಗಳ ನಂತರವೂ ಜೀವಂತಿಕೆಯಿಂದ ಕೂಡಿವೆ. ಸತ್ಯವನ್ನೇ ಸಾರುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಭಾರತೀಯ ಸಂಸತ್ತಿನಲ್ಲಿ ಮೂವತ್ಮೂರು ವರ್ಷಗಳ ನಿರಂತರ ಸೇವೆ ಸಲ್ಲಿಸಿದ ನಂತರ ಏ. 3ರಂದು ರಾಜ್ಯಸಭೆಯಿಂದ ನಿವೃತ್ತರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ನಿಜಾರ್ಥದಲ್ಲಿ ಮೇಲ್ಮನೆಯಲ್ಲಿ ಇರಲೇಬೇಕಾದ ಮೇರುವ್ಯಕ್ತಿ. ಅವರ ಓದು, ವಿದ್ವತ್ತು, ತಾಳ್ಮೆ, ಬುದ್ಧಿವಂತಿಕೆ, ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ದಕ್ಷತೆ- ಸದ್ಯದ ರಾಜಕಾರಣದಲ್ಲಿ ಸಿಗುವುದಿಲ್ಲ.

ಮನಮೋಹನ್ ಸಿಂಗ್ ಎಂದೂ ನೇರವಾಗಿ ಚುನಾವಣೆ ಎದುರಿಸಿದವರಲ್ಲ. ಅವರು ಕೇಂದ್ರ ಹಣಕಾಸು ಸಚಿವರಾದ ನಾಲ್ಕು ತಿಂಗಳ ನಂತರ, ಅಕ್ಟೋಬರ್ 1991ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ರಾಜ್ಯಸಭೆಗೆ ನಾಮನಿರ್ದೇಶನಗೊಂಡರು. ಅವರು ರಾಜ್ಯಸಭೆಯಲ್ಲಿ ಐದು ಅವಧಿಗೆ ಅಸ್ಸಾಂ, ಒಂದು ಬಾರಿ ರಾಜಸ್ಥಾನವನ್ನು ಪ್ರತಿನಿಧಿಸಿದರು.

92ರ ಹರೆಯದಲ್ಲೂ ಅವರು ಸಂಸತ್ತಿಗೆ ಗಾಲಿಕುರ್ಚಿಯಲ್ಲಿ ನಿಯಮಿತವಾಗಿ ಹಾಜರಾಗುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸದನ ಮಾತನಾಡಲು, ಚರ್ಚಿಸಲು ಮತ್ತು ಕಾನೂನು ರೂಪಿಸಲು ಜನಪ್ರತಿನಿಧಿಗಳಿಗೆ ವೇದಿಕೆಯಾದ ಉದಾಹರಣೆಗಳಿಲ್ಲ. ಬದಲಿಗೆ ಅಳತೆ ಮೀರಿದ ಮಾತಿಗೆ, ಭೋಪರಾಕಿಗೆ, ಕಾದಾಟಕ್ಕೆ ಕಣವಾಗುತ್ತಿದೆ. ಅಂತಹ ಸಮಯದಲ್ಲಿ ಮನಮೋಹನ್ ಸಿಂಗ್‌ರ ಹಾಜರಿ, ಅವರ ಬದ್ಧತೆಯ ಪ್ರತೀಕ. ಮೇಲ್ಮನೆಗೊಂದು ಮುಕುಟ. ಆಶ್ಚರ್ಯಕರ ಸಂಗತಿ ಎಂದರೆ, ಅವರು ಎಂದಿಗೂ ಧ್ವನಿ ಎತ್ತಲಿಲ್ಲ, ಸದನದ ಬಾವಿಯತ್ತ ಧಾವಿಸಲಿಲ್ಲ, ಸಭ್ಯತೆಯ ಎಲ್ಲೆ ಮೀರಲಿಲ್ಲ, ನಡವಳಿಕೆಯ ನಿಯಮಗಳನ್ನೂ ಉಲ್ಲಂಘಿಸಲಿಲ್ಲ.

ಪಂಜಾಬ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗುವ ಮೊದಲು ಅರ್ಥಶಾಸ್ತ್ರಜ್ಞರಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಹಣಕಾಸು ಕಾರ್ಯದರ್ಶಿಯಾಗಿ, ಪ್ರಧಾನ ಮಂತ್ರಿಗಳ ಸಲಹೆಗಾರರಾಗಿ, ಹಣಕಾಸು ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದರು. ಪ್ರತಿಯೊಂದು ಹುದ್ದೆಯಲ್ಲೂ ‘ಸಿಂಗ್ ಸ್ಟೈಲ್ ಆಫ್ ವರ್ಕಿಂಗ್’ ಛಾಪು ಒತ್ತಿದರು. ಸಲ್ಲಿಸಿದ ಸೇವೆಯನ್ನು ಸ್ಮರಣೀಯಗೊಳಿಸಿದರು.

ಹೆಚ್ಚು ಮಾತನಾಡದ, ಮಾಡಿದ್ದನ್ನು ಹೇಳಿಕೊಳ್ಳದ ಮನಮೋಹನ್ ಸಿಂಗ್‌ರದು ರಾಜಕಾರಣಕ್ಕೆ ಒಗ್ಗದ ವ್ಯಕ್ತಿತ್ವ. ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್ ಒತ್ತಡಕ್ಕೆ ಮಣಿದು ರಾಜಕಾರಣಿಯಾದ ಸಿಂಗ್, ಅವರ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರಾದರು. ದೇಶದ ಸ್ಥಿತಿಗತಿಯನ್ನು ಅನುಭವದಿಂದ ಅರಿತಿದ್ದರು. ಗ್ರಾಮದಿಂದ ಗ್ಲೋಬಲ್‌ವರೆಗಿನ ಅರ್ಥಶಾಸ್ತ್ರವನ್ನು ಅಧ್ಯಯನದಿಂದ ಅರಗಿಸಿಕೊಂಡಿದ್ದರು. ಹಣಕಾಸು ಸಚಿವರಾದಾಗ, ತಮ್ಮ ವಿದ್ವತ್ತನ್ನೇ ನಿಕಷಕ್ಕೆ ಒಡ್ಡಿ ಭಾರತದ ಆರ್ಥಿಕ ವ್ಯವಸ್ಥೆಯನ್ನು ಹೊಸಹಳಿಗೆ ತಂದರು. ಅವರ ಉದಾರೀಕರಣ ನೀತಿ ಅಂದು ಹಲವರ ಟೀಕೆಗೆ ಒಳಗಾಯಿತು.

ಈಗ, ಮೂವತ್ತು ವರ್ಷಗಳ ನಂತರ, ಹಿಂತಿರುಗಿ ನೋಡಿದರೆ, ಭಾರತವು 27 ಕೋಟಿ ಬಡವರನ್ನು ಬಡತನದಿಂದ ಮೇಲೆತ್ತಲು ಸಾಧ್ಯವಾಗಿದೆ ಹಾಗೂ ಭಾರತದ ಆರ್ಥಿಕ ವ್ಯವಸ್ಥೆಯ ಸುಧಾರಣೆಯ ಶಿಲ್ಪಿಯಾಗಿ ಸಿಂಗ್ ಕಾಣುತ್ತಿದ್ದಾರೆ.

ಆಕಸ್ಮಿಕವಾಗಿ 2004ರಲ್ಲಿ ಪ್ರಧಾನಿಯಾದ ಮನಮೋಹನರ ಹತ್ತು ವರ್ಷಗಳ ಆಡಳಿತದಲ್ಲಿ ಅವರು ಮಾತನಾಡಿದ್ದು ಅಲ್ಪ, ಕೊಟ್ಟ ಕೊಡುಗೆ ಅಪಾರ. ಅವರು ಆಗಾಗ್ಗೆ ಆಡಿದ ಮುತ್ತಿನಂತಹ ಐದು ಮಾತುಗಳು, ಸಾರ್ವಕಾಲಿಕ ಸತ್ಯ ಸಾರುವ ಹೇಳಿಕೆಗಳಾಗಿ ಭಾರತೀಯ ರಾಜಕಾರಣದಲ್ಲಿ ದಾಖಲಾಗಿವೆ.

1991ರಲ್ಲಿ ‘ಭಾರತ ಈಗ ಜಾಗೃತವಾಗಿದೆ’ ಎಂದರು. ಅಂದರೆ ಭಾರತಕ್ಕೆ ಕಾಲ ಕೂಡಿ ಬಂದಿದೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ನಾವು ಮೇಲುಗೈ ಸಾಧಿಸುತ್ತೇವೆ, ಜಯಿಸುತ್ತೇವೆ ಎಂದಿದ್ದರು.

1999ರಲ್ಲಿ ‘ರಾಜಕಾರಣಿಗಳು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ’ ಎಂದರು. ಅಂದರೆ, ನಮಗೆ ಹೊಸ ರೀತಿಯ ರಾಜಕೀಯ ಬೇಕು, ವಿಷಯಗಳನ್ನು ನೇರವಾಗಿ ಹೇಳುವ ನಿಷ್ಕಪಟ ರಾಜಕಾರಣಿಗಳು ಬೇಕು. ಎಲ್ಲರನ್ನು ಎಲ್ಲಾ ಕಾಲಕ್ಕೂ ಮೂರ್ಖರನ್ನಾಗಿ ಮಾಡುವುದು ಸಾಧ್ಯವಿಲ್ಲ ಎಂದಿದ್ದರು.

2014ರಲ್ಲಿ, ‘ಇತಿಹಾಸ ನನ್ನನ್ನು ಕರುಣೆಯಿಂದ ಕಾಣುತ್ತದೆ’ ಎಂದರು. ಹತ್ತು ವರ್ಷಗಳ ಆಡಳಿತದ ನಂತರ, ಭ್ರಷ್ಟಾಚಾರ ಮತ್ತು ಹಣದುಬ್ಬರಗಳ ಟೀಕೆಗೆ ಗುರಿಯಾದಾಗ; ದುರ್ಬಲ ಪ್ರಧಾನಿ ಎಂದು ತೆಗಳಿಕೆಗೆ ಈಡಾದಾಗ; ನಾನು ಕೆಲಸ ಮಾಡಿದ್ದೇನೆ, ಇತಿಹಾಸ ಸ್ಮರಿಸುತ್ತದೆ ಎಂದಿದ್ದರು.

2014ರಲ್ಲಿ ‘ನರೇಂದ್ರ ಮೋದಿ ಪ್ರಧಾನಿಯಾಗುವುದು ದುರಂತ’ ಎಂದರು. ಅದನ್ನು ನಾವೀಗ ನೋಡುತ್ತಿದ್ದೇವೆ.

2016ರಲ್ಲಿ ‘ನೋಟು ಅಮಾನ್ಯೀಕರಣ ಎನ್ನುವುದು ಸಾಮಾನ್ಯ ಜನರ ಕಾನೂನುಬದ್ಧ ಲೂಟಿ’ ಎಂದರು. ಅದು ಕೂಡ ನಮ್ಮ ಅನುಭವಕ್ಕೆ ಬಂದಿದೆ, ಸತ್ಯವಾಗಿದೆ. ಅನುಭವಿಸುತ್ತಿದ್ದೇವೆ.

ಮನಮೋಹನ್ ಸಿಂಗ್ ಎಂದೂ ಅಧಿಕಾರ ಚಲಾಯಿಸಲಿಲ್ಲ, ಹಣ ಮಾಡಲಿಲ್ಲ, ಪ್ರಚಾರ ಬಯಸಲಿಲ್ಲ, ಪ್ರತಿಷ್ಠೆ-ಪರಾಕ್ರಮ ತೋರಲಿಲ್ಲ. ಆಗಿದ್ದೆಲ್ಲ ನನ್ನಿಂದ, ನಾನು ಅನ್ನಲಿಲ್ಲ. ಅಪರೂಪದ ಅರ್ಥಶಾಸ್ತ್ರಜ್ಞನಾಗಿದ್ದರೂ ಅಹಂ ತೋರಲಿಲ್ಲ. ಇಂತಹ ಸರಳ ಸಜ್ಜನನನ್ನು ಭಾರತದ ರಾಜಕಾರಣ ಕಂಡಿದ್ದಿಲ್ಲ. ಭಾರತ ಎಂದಿಗೂ ಮರೆಯಲಾರದ, ಮರೆಯಬಾರದ ವ್ಯಕ್ತಿ ಮನಮೋಹನ್ ಸಿಂಗ್.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಾಮರಸ್ಯ ಇರಲೆನ್ನುವ ಆರೆಸ್ಸೆಸ್, ಸಮಾನತೆ ಬೇಕೆಂದು ಸಾರುವುದಿಲ್ಲವೇಕೆ?

ಜಾತಿಪದ್ಧತಿಯೊಂದಿಗೆ ರಾಜಿ ಮಾಡಿಕೊಂಡ ಆರೆಸ್ಸೆಸ್ ಪ್ರಣೀತ ಸಾಮರಸ್ಯ ವಾದದಿಂದ ಅಸ್ಪೃಶ್ಯರು, ದಲಿತರು...

ಈ ದಿನ ಸಂಪಾದಕೀಯ | ಅಮೆರಿಕ ದಾದಾಗಿರಿಗೆ ಮೋದಿ ಮೌನ- ರಾಜತಾಂತ್ರಿಕತೆಯಲ್ಲ, ಶರಣಾಗತಿ!

ಅಮೆರಿಕ ಜೊತೆಗಿನ ಭಾರತದ ನಂಟು 'ಸಮಾನ ಸಾರ್ವಭೌಮತ್ವ'ದ ಮೇಲೆ ಆಧಾರಿತವಾಗಿರಬೇಕೇ ಹೊರತು,...

ಈ ದಿನ ಸಂಪಾದಕೀಯ | ಯಾರು ದೇಶದ್ರೋಹಿಗಳು? ಮೋದಿ ಭಾರತದ ಹೊಸ ನಿರೂಪಣೆ ಅಪಾಯಕಾರಿ

ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯೇತರ ಪಕ್ಷಗಳ ಮುಖಂಡರನ್ನು, ಬಿಜೆಪಿ ವಿರೋಧಿಗಳನ್ನು,...

ಈ ದಿನ ಸಂಪಾದಕೀಯ | ಖರೀದಿ ಮೇಲೆ ತೆರಿಗೆ, ಖರೀದಿ ಹಣಕ್ಕೆ ಶುಲ್ಕ… ಇದು ಮೋದಿ ಡಿಜಿಟಲ್ ದರೋಡೆ!

ನಾವು ಒಂದು ವಸ್ತುವನ್ನು ಯುಪಿಐ ಮೂಲಕ ಖರೀದಿಸಿದರೆ, ಅದಕ್ಕೆ ತೆರಿಗೆ ತೆರಬೇಕು....