ವಾಂತಿ ಬೇಧಿ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ 47 ವಿದ್ಯಾರ್ಥಿನಿಯರ ಪೈಕಿ ಇಬ್ಬರಲ್ಲಿ ಕಾಲರಾ ರೋಗ ಪತ್ತೆಯಾಗಿದೆ. ಈ ಬಗ್ಗೆ ಸುಮೋಟೋ ಪ್ರಕರಣ ದಾಖಲಾಗಿದೆ.
ಬಿಎಂಸಿ ಹಾಸ್ಟೆಲ್ನಲ್ಲಿದ್ದ ಬೆಂಗಳೂರಿನ ಮೆಡಿಕಲ್ ಕಾಲೇಜು 47 ವಿದ್ಯಾರ್ಥಿನಿಯರು ದಿಢೀರ್ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಾಸ್ಟೆಲ್‌ನಲ್ಲಿ ಸ್ವಚ್ಛತೆಯ ಕೊರತೆ ಇದೆ. ಕುಡಿಯಲು ಕೂಡ ಯೋಗ್ಯವಾದ ನೀರನ್ನು ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಹೀಗಾಗಿ, ವಿದ್ಯಾರ್ಥಿನಿಯರು ಬಾಟೆಲ್ ನೀರು ಖರೀದಿ ಮಾಡುತ್ತಿದ್ದಾರೆ. ಅಸ್ವಸ್ಥಗೊಂಡಿದ್ದ 49 ವಿದ್ಯಾರ್ಥಿನಿಯರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ಇಬ್ಬರಲ್ಲಿ ಕಾಲರಾ ಅಂಶ ಪತ್ತೆಯಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿ, ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಸುಮೋಟೋ ಪ್ರಕರಣ ದಾಖಲಾಗಿದೆ.
“ಐಸಿಯು ಮತ್ತು ಜನರಲ್ ವಾರ್ಡ್‌ನಲ್ಲಿರುವ ವಿದ್ಯಾರ್ಥಿಗಳನ್ನು ಭೇಟಿಯಾದೆ, ವಿದ್ಯಾರ್ಥಿಗಳು ನೆಲೆಸಿರುವ ವಸತಿ ನಿಲಯದಲ್ಲಿ ವಾಟರ್ ಟ್ಯಾಂಕ್ ರಿಪೇರಿ ನಡೆಯುತ್ತಿದೆ. ಅದರಲ್ಲಿಯ ನೀರನ್ನೇ ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿದೆ. ಹಾಗೇ ಬೆಡ್‌ಗಳಲ್ಲಿ ತಿಗಣೆಗಳಿವೆ. ಕೋಣೆಗಳು ಚಿಕ್ಕದಾಗಿವೆ. ಸರಿಯಾದ ವ್ಯವಸ್ಥೆ ಇಲ್ಲ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನ ವಿದ್ಯಾರ್ಥಿನಿಯರು ಹೇಳಿದ್ದಾರೆ” ಎಂದರು.
“ಸದ್ಯ ಹಾಸ್ಟೆಲ್‌ನ ಮೆಸ್ ಬಂದ್ ಮಾಡಿಸಲಾಗಿದೆ. ಈ ಬಗ್ಗೆ ಒಂದು ವಾರದಲ್ಲಿ ಮಾಹಿತಿ ನೀಡಬೇಕು ಎಂದು ಕೇಳಿದ್ದೇನೆ. ಹಾಗೇ ಒಂದು ವಾರದಲ್ಲಿ ಎಲ್ಲ ಸಮಸ್ಯೆ ಬಗೆಹರಿಸಬೇಕೆಂದು ಸೂಚನೆ ನೀಡಿದ್ದೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೆಡಿಕಲ್ ಕಾಲೇಜಿನ 47 ವಿದ್ಯಾರ್ಥಿನಿಯರು ಅಸ್ವಸ್ಥ ; ಹಾಸ್ಟೆಲ್‌ನಲ್ಲಿ ಕನಿಷ್ಠ ಸ್ವಚ್ಛತೆಯ ಕೊರತೆ ಆರೋಪ
“ವಸತಿ ಗೃಹದಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲ ಕೋಣೆಗಳು ಚಿಕ್ಕದಾಗಿವೆ. ವಿಕ್ಟೋರಿಯಾ ಆಸ್ಪತ್ರೆಯಿಂದ ಊಟ ನೀಡಲಾಗುತ್ತಿದೆ ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ” ಎಂದು ಹೇಳಿದರು.
“ಪ್ರತಿಯೊಂದು ಆಸ್ಪತ್ರೆ ಹಾಗೂ ವಸತಿ ನಿಲಯಕ್ಕೆ ಭೇಟಿ ನೀಡುತ್ತೇನೆ. ಅಲ್ಲಿನ ಸಮಸ್ಯೆ ಬಗ್ಗೆ ತಿಳಿಯುತ್ತೇನೆ. ಈಗ ಸುಮೋಟೋ ಪ್ರಕರಣ ದಾಖಲಾಗಿದೆ” ಎಂದು ತಿಳಿಸಿದರು.