ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಜಿಂದಾಲ್ ಕಂಪನಿಗೆ ತುಂಗಭದ್ರಾ ಜಲಾಶಯದಿಂದ ನೀರು ಹರಿಸುವುದರ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನಾ ಪ್ರದರ್ಶನ ನಡೆಸಿದರು.
ಖಾಲಿ ಕೊಡಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸ್ಥಳೀಯ ಜನರಿಗೆ ಕುಡಿಯಲು ನೀರಿಲ್ಲದ ಸ್ಥಿತಿಯಲ್ಲಿ ಕಂಪನಿಗೆ ನೀರು ಪೂರೈಸುವ ಸರ್ಕಾರದ ಕ್ರಮದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ವಕೀಲ ಪಿ ವೆಂಕಟೇಶ್ ಮಾತನಾಡಿ, “ತುಂಗಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆ ತೀರಾ ಕಡಿಮೆ ಇರುವಾಗ ಜಿಂದಾಲ್‌ಗೆ ನೀರು ಹರಿಸಲು ಸ್ವತಃ ಸರ್ಕಾರವೇ ಆದೇಶ ನೀಡುವುದು ಈ ಭಾಗದ ಜನರಿಗೆ ಮಾಡಿದಂತಹ ಅನ್ಯಾಯ” ಎಂದರು.
ಗಂಟೆ ಗೋಣಿಬಸಪ್ಪ ಮಾತನಾಡಿ, “ರೈತರು, ಜನಸಾಮಾನ್ಯರಿಗೆ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ತೀವ್ರಗೊಳ್ಳುವ ಸ್ಥಿತಿಯಲ್ಲಿ ಸರ್ಕಾರ ಕೈಗೊಂಡಿರುವ ಆಘತಕಾರಿ ನಿರ್ಧಾರ” ಎಂದರು.
ಹಕ್ಕೊತ್ತಾಯ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ಮಾತನಾಡಿ, “ಜಲಾಶಯದಲ್ಲಿ ಕುಡಿಯಲು ಅಗತ್ಯವಾದ ನೀರಿದೆ. ಈ ಬಗ್ಗೆ ಜನರಿಗೆ ಗೊಂದಲ ಬೇಡ. ಆದರೆ ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಆದೇಶಗಳನ್ನು ಪಾಲಿಸಬೇಕಾಗುತ್ತದೆ. ಈಗ ಸಲ್ಲಿಸಿರುವ ಹಕ್ಕೊತ್ತಾಯ ಪತ್ರವನ್ನು ಅರ್ಧ ಗಂಟೆಯೊಳಗೆ ಮುಖ್ಯಮಂತ್ರಿಯವರಿಗೆ ತಲುಪಿಸುವ ಕೆಲಸ ಮಾಡಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಹಣಗೆರೆಕಟ್ಟೆ ಗ್ರಾಮದಲ್ಲಿ ಗೀತಾ ಶಿವರಾಜಕುಮಾರ್ ಚುನಾವಣೆ ಪ್ರಚಾರ
ರೈತ ಕನ್ನಡಪರ ಮತ್ತು ಸಂಘಟನೆಗಳ ಮುಖಂಡರುಗಳಾದ ಕೋಸಲ ಪರಸಪ್ಪ, ಗುಂಡಿ ರಮೇಶ್, ಶ್ರೀನಿವಾಸ, ಪಿ ಜಿ ವೆಂಕಟೇಶ, ಕಾಸೆಟ್ಟಿ ಉಮಾಪತಿ, ದಮ್ಮೂರು ಮಹೇಶ್, ಬಸವರಾಜ, ಎಲ್ ಹನುಮಂತಪ್ಪ, ಅಂಜಿನಪ್ಪ, ಎಚ್ ಸೋಮಶೇಖರ, ಪರಶುರಾಮ, ತಂಬ್ರಹಳ್ಳಿ ರವಿ, ಗುಜ್ಜಲ್ ಗಣೇಶ್, ಸೋಮಶೇಖರ ಸೇರಿದಂತೆ ಇತರರು ಇದ್ದರು.
