ದೇಶದಲ್ಲಿ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಅಲ್ಪಸಂಖ್ಯಾತರ ವೈಯಕ್ತಿಕ ಕಾನೂನುಗಳ ಸುಧಾರಣೆ, ಹಿರಿಯ ನಾಗರಿಕರು, ಅಂಗವಿಕಲರ ಅಭ್ಯುದಯಕ್ಕೆ ಒತ್ತು ನೀಡಲು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ಶಿವಮೊಗ್ಗ ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, “ಮುಖ್ಯವಾಗಿ ಪ್ರಣಾಳಿಕೆಯಲ್ಲಿ ದೇಶದ ಪ್ರತಿ ಬಡ ಕುಟುಂಬಕ್ಕೆ ವರ್ಷಕ್ಕೆ ₹1 ಲಕ್ಷ ನೀಡಲು ಮಹಾಲಕ್ಷಿ ಯೋಜನೆ ಜಾರಿಗೆ ಒತ್ತು ನೀಡಲಾಗಿದೆ” ಎಂದು ಹೇಳಿದರು.
“ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ, ಅಗ್ನಿಪಥ್ ಯೋಜನೆ ರದ್ದು, ವಿವಿಧ ಹಂತಗಳಲ್ಲಿ 30 ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗಿರುವ ಮೀಸಲಾತಿ ಮಿತಿ ಹೆಚ್ಚಳ ಹಾಗೂ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ ನಡೆಸಲಾಗುವುದು” ಎಂದರು.
“ಕಾಂಗ್ರೆಸ್ ಈಗಾಗಲೇ ಪಂಚ ನ್ಯಾಯ ‘25 ಗ್ಯಾರಂಟಿ’ಗಳನ್ನು ಘೋಷಿಸಿದೆ. ‘ಮನೆ ಮನೆ ಗ್ಯಾರಂಟಿ’ ಅಭಿಯಾನವು ಆರಂಭವಾಗಿದೆ. ದೇಶಾದ್ಯಂತ ಸಮಾಲೋಚನೆಗಳನ್ನು ನಡೆಸಿ ಕಾಂಗ್ರೆಸ್, ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ” ಎಂದರು.
“ಜಿಲ್ಲೆಯಲ್ಲಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಸರ್ಕಾರದ ಯೋಜನೆಗಳು ತಲುಪಿವೆ. ತಾಲೂಕಿನಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಸಭೆ ನಡೆಸಲಾಗಿದೆ. ಗ್ರಾಮಾಂತರ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹಾಗಾಗಿ ಗೀತಾ ಶಿವರಾಜಕುಮಾರ್ ಅವರು ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ. ಅಂತಹ ಸಕಾರಾತ್ಮಕ ವಾತಾವರಣ ಇಲ್ಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ದೇಶದಲ್ಲಿ ಬಿಜೆಪಿ ಸಾಧನೆ ಶೂನ್ಯ. ಇಲ್ಲಿ ಬಿಜೆಪಿಯವರು ಪ್ರಧಾನಿ ಮೋದಿ ಜಪ ಮಾತ್ರ ಮಾಡುತ್ತಿದ್ದಾರೆ. ದೇಶದಲ್ಲಿ ರಸ್ತೆ, ಸೇತುವೆ ನಿರ್ಮಾಣ ನಡೆಯುವುದೇ ಅಭಿವೃದ್ಧಿ ಅಲ್ಲ. ಇದೆಲ್ಲದಕ್ಕೂ ಮೀರಿದ್ದು ಜನಸಾಮಾನ್ಯರ ಕಲ್ಯಾಣಕ್ಕೆ ಒತ್ತು ನೀಡುವುದು. ಆದರೆ, ಬಿಜೆಪಿಯಿಂದ ಈ ಕಾರ್ಯ ಆಗಿಲ್ಲ. ಅದೇ ರೀತಿ, ದೇಶದಲ್ಲಿ ಸಂವಿಧಾನ ಉಳಿಸಬೇಕಿದ್ದರೆ ಬಿಜೆಪಿಯನ್ನು ಬುಡ ಸಹಿತ ಕೀಳಬೇಕಿದೆ” ಎಂದರು.
“ರಾಜ್ಯದ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಮಾಸಿಕ ₹50 ಲಕ್ಷ ಹಣ ಬೇಕು. ವಾರ್ಷಿಕ ₹7 ಕೋಟಿ ಹಣ ವ್ಯಯಿಸಲಾಗುತ್ತಿದೆ. ರಾಜ್ಯದ ಜನರಿಗೆ ಪ್ರಸ್ತುತ ಕಾಲಘಟ್ಟದಲ್ಲಿ ಅಶಕ್ತ ಕುಟುಂಬಗಳಿಗೆ ಈ ಯೋಜನೆ ಘೋಷಣೆ ಮಾಡದೇ ಹೋಗಿದ್ದರೆ, ಬಡತನ ರೇಖೆಗಿಂತ ಕೆಳಗಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಜೀವನ ನಡೆಸುವುದು ಕಷ್ಟಕರವಾಗುತ್ತಿತ್ತು. ಆದ್ದರಿಂದ ಈ ಯೋಜನೆಗಳಿಂದ ಅನುಕೂಲ ಆಗಿದೆ. ಅದೇ ರೀತಿ, ದೇಶದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಉದ್ಯಮಿಗಳ ₹11 ಲಕ್ಷ ಕೋಟಿ ಹಣವನ್ನು ಮನ್ನಾ ಮಾಡಿದೆ. ಇದರಿಂದ, ದೇಶ ಅವನತಿ ತಲುಪುವುದಿಲ್ಲವೆ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಪ್ರಣಾಳಿಕೆ ‘ಮುಸ್ಲಿಂ ಲೀಗ್’ ಗುರುತು ಹೊಂದಿದೆ ಎಂದ ಮೋದಿ; ಬಿಜೆಪಿ ಇತಿಹಾಸ ನೆನಪಿಸಿದ ಕಾಂಗ್ರೆಸ್
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್ ಪ್ರಸನ್ನಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ಅದ್ಯಕ್ಷ ಅಹಿಂದ ಜಿಲ್ಲಾ ಘಟಕ ಕಾರ್ಯದರ್ಶಿ ಜಿ ಡಿ ಮಂಜುನಾಥ, ಚಂದ್ರಭೂಪಾಲ್, ಆದರ್ಶ ಹುಂಚದಕಟ್ಟೆ ಇದ್ದರು.
