ಚರ್ಚೆಗೆ ಬಾರದ ನಿರ್ಮಲಾ ಸೀತಾರಾಮನ್; ಕೇಂದ್ರದ ವಂಚನೆ ಎಳೆಎಳೆಯಾಗಿ ಬಿಚ್ಚಿಟ್ರು ಕೃಷ್ಣ ಬೈರೇಗೌಡ

Date:

Advertisements

“ನಿರ್ಮಲಾ ಸೀತಾರಾಮನ್ ಅವರಿಗೆ ಕುರ್ಚಿಯನ್ನು ಮೀಸಲಿಟ್ಟು ನಡೆದ ಚರ್ಚೆಯಲ್ಲಿ ಕೃಷ್ಣ ಬೈರೇಗೌಡ ಅವರು ಬಿಚ್ಚಿಟ್ಟ ಸಂಗತಿಗಳಿವು”

ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯಗಳ ಸತ್ಯಾಸತ್ಯತೆ ತಿಳಿಯಲು ಜಾಗೃತ ಕರ್ನಾಟಕ ಸಂಘಟನೆ ಆಯೋಜಿಸಿದ್ದ ಮುಖಾಮುಖಿ ಬಹಿರಂಗ ಚರ್ಚೆಗೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೊನೆಗೂ ಗೈರಾದರು. ಆದರೆ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಆಗಮಿಸಿ ಅಂಕಿ- ಅಂಶಗಳ ಸಹಿತ ಕೇಂದ್ರದ ಮೋಸಗಳನ್ನು ವಿವರಿಸಿದರು.

ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ ಸಂಜೆ 5.30ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಿತು. ನಿರ್ಮಲಾ ಸೀತಾರಾಮನ್ ಅವರಿಗೆ ಒಂದು ಕುರ್ಚಿಯನ್ನು, ಕೃಷ್ಣ ಬೈರೇಗೌಡರಿಗೆ ಒಂದು ಕುರ್ಚಿಯನ್ನು ಕಾಯ್ದಿರಿಸಲಾಗಿತ್ತು.

Advertisements

ಶನಿವಾರ ಮಧ್ಯಾಹ್ನ 3.30ರ ವೇಳೆಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದರು. ಈದಿನ.ಕಾಂ ಪ್ರತಿನಿಧಿಯು ’ಬಹಿರಂಗ ಚರ್ಚೆ’ಯ ಕುರಿತು ಪ್ರಶ್ನಿಸಿದಾಗಲೇ, ಕಾರ್ಯಕ್ರಮದಿಂದ ದೂರ ಉಳಿಯುವ ಸೂಚನೆಯನ್ನು ವಿತ್ತ ಸಚಿವರು ನೀಡಿದ್ದರು. ಆದರೆ ಜಾಗೃತ ಕರ್ನಾಟಕ ಸಂಘಟಕರು, ಅರ್ಥ ಸಚಿವರು ಬರಬಹುದೆಂಬ ನಿರೀಕ್ಷೆ ಇಟ್ಟುಕೊಂಡು ಕುರ್ಚಿ ಕಾಯ್ದಿರಿಸಿದ್ದರು.

ಕಾರ್ಯಕ್ರಮದ ನಿರೂಪಣೆ ಮಾಡಿದ ಸಂಘಟನೆಯ ಸಂಚಾಲಕ ಬಿ.ಸಿ.ಬಸವರಾಜು ಅವರು, “ಕೃಷ್ಣ ಬೈರೇಗೌಡ ಮತ್ತು ನಿರ್ಮಲಾ ಸೀತಾರಾಮನ್ ಇಬ್ಬರಿಗೂ ಅಧಿಕೃತವಾಗಿ ಇಮೇಲ್ ಮಾಡಿದ್ದೆವು. ವಿತ್ತ ಸಚಿವರು ಬೆಂಗಳೂರಿನಲ್ಲೇ ಇದ್ದಾರೆ. ಪ್ರೆಸ್‌ಮೀಟ್‌ ಕೂಡ ಮಾಡಿದ್ದಾರೆ. ಅವರಿಗಾಗಿ ಕುರ್ಚಿ ಮೀಸಲಿಟ್ಟಿದ್ದೇವೆ. ಕರ್ನಾಟಕದ ಜನರಿಗೆ ಸತ್ಯಗಳು ತಿಳಿಯಲೆಂದು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ” ಎಂದರು.

ತೆರಿಗೆ ಹಂಚಿಕೆ, ಬರಪರಿಹಾರದ ಕುರಿತು ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಯ ನಿರ್ಮಲಾ ಸೀತಾರಾಮನ್, ಅಮಿತ್ ಶಾ, ನರೇಂದ್ರ ಮೋದಿ, ಪ್ರತಾಪ್‌ ಸಿಂಹ, ತೇಜಸ್ವಿ ಸೂರ್ಯ ಅವರು ನೀಡಿರುವ ಹೇಳಿಕೆಗಳ ವಿಡಿಯೊವನ್ನು ಆರಂಭದಲ್ಲಿ ಪ್ಲೇ ಮಾಡಲಾಯಿತು. ನಂತರ ಕೃಷ್ಣ ಬೈರೇಗೌಡರನ್ನು ಮಾತಿಗೆ ಆಹ್ವಾನಿಸಲಾಯಿತು.

ದಾಖಲೆ ಸಹಿತ ಕೇಂದ್ರ ಸರ್ಕಾರದ ಮೋಸಗಳನ್ನು ಅನಾವರಣ ಮಾಡಿದ ಕಂದಾಯ ಸಚಿವರು

ಮಾತು ಆರಂಭಿಸಿದ ಸಚಿವ ಕೃಷ್ಣ ಬೈರೇಗೌಡರು, “ಇದು ವೈಯಕ್ತಿಕ ವಿರೋಧದ ಸಂಗತಿಯಲ್ಲ. ನಿರ್ಮಲಾ ಸೀತಾರಾಮನ್ ಅವರ ಮೇಲೆ ಗೌರವವಿದೆ. ಅವರಿಗೂ ನನ್ನ ಮೇಲೆ ಗೌರವವಿದೆ. ಎಲೆಕ್ಷನ್‌ಗಾಗಿ ನಾವು ಈ ವಿಚಾರವನ್ನು ಮುನ್ನೆಲೆಗೆ ತಂದಿಲ್ಲ.ಕಳೆದ ಬಾರಿ ಆದಂತೆ ಹಣಕಾಸು ಆಯೋಗದಲ್ಲಿ ಈ ಸಲವೂ ಅನ್ಯಾಯ ಆಗಬಾರದು, ಇನ್ನಾದರೂ ಫೈನಾನ್ಸ್ ಕಮಿಷನ್‌ ಎಚ್ಚೆತ್ತುಕೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ಪಿಪಿಟಿ ಪ್ರೆಸೆಂಟೇಷನ್ ಮೂಲಕ ದಾಖಲೆಗಳನ್ನು ಇಟ್ಟು ಮಾತನಾಡಿದ ಅವರು ಪ್ರಮುಖವಾಗಿ ಮೂರು ವಿಚಾರಗಳನ್ನು ಪ್ರಸ್ತಾಪಿಸಿದರು. ಮೊದಲನೆಯದಾಗಿ- ತೆರಿಗೆ ಹಂಚಿಕೆಯಲ್ಲಿ ಆಗುತ್ತಿರುವ ಮೋಸವನ್ನು ಬಿಚ್ಚಿಟ್ಟರು, ಎರಡನೆಯದಾಗಿ- ಬರ ಪರಿಹಾರ ಸಂಬಂಧ ಬಿಜೆಪಿ ನಾಯಕರು ಹೇಳುತ್ತಿರುವ ಸುಳ್ಳಗಳನ್ನು ವಿವರಿಸಿದರು, ಮೂರನೆಯದಾಗಿ- ನೀರಾವರಿ ಯೋಜನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಮಾಡಿರುವ ಎಡವಟ್ಟುಗಳನ್ನು ಮುಂದಿಟ್ಟರು.

kbg 3
ಪಿಪಿಟಿ ಪ್ರೆಸೆಂಟೇಷನ್ ಮೂಲಕ ದಾಖಲೆಗಳನ್ನು ಮುಂದಿಟ್ಟು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರು.

ತೆರಿಗೆ ವಂಚನೆ

“ಈಗ ರಾಜ್ಯಗಳಲ್ಲಿ ಜಿಎಸ್‌ಟಿ ಜಾರಿಯಲ್ಲಿದೆ. ಆ ಮೊದಲು ಮೌಲ್ಯ ವರ್ಧಿತ ತೆರಿಗೆ (ವ್ಯಾಟ್‌) ಇತ್ತು. ರಾಜ್ಯ ಸರ್ಕಾರವು ತೆರಿಗೆ ವಿಚಾರದಲ್ಲಿ ಸ್ವಾಯತ್ತತೆ ಹೊಂದಿತ್ತು. ವ್ಯಾಟ್ ಇದ್ದಾಗ ರಾಜ್ಯದ ತೆರಿಗೆ ಬೆಳವಣಿಗೆ ಶೇ. 15ರಷ್ಟು ಇತ್ತು. ಜಿಎಸ್‌ಟಿ ಬರುವುದರಿಂದ ರಾಜ್ಯದ ತೆರಿಗೆ ಕಡಿಮೆಯಾಗುತ್ತೆ, ನಮಗೆ ರಕ್ಷಣೆ ನೀಡಬೇಕು ಎಂದು ಹೇಳಿದ್ದೆವು. ಜಿಎಸ್‌ಟಿ ಜಾರಿಯ ನಂತರದಲ್ಲಿ ಈವರೆಗೆ ರಾಜ್ಯದಿಂದ 3,26,762 ಕೋಟಿ ತೆರಿಗೆ ಸಂಗ್ರಹವಾಗಿದೆ. ರಾಜ್ಯಕ್ಕೆ 1,65,532 ಕೋಟಿ ರೂ. ಜೆಎಸ್‌ಟಿ ಖೋತಾ ಆಗಿದೆ. ಹೀಗಾಗಿ ಕೇಂದ್ರದಿಂದ 1,06,258 ಕೋಟಿ ಜಿಎಸ್‌ಟಿ ಪರಿಹಾರವನ್ನು ಈವರೆಗೆ ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ ರಾಜ್ಯಕ್ಕೆ ಸರಿಯಾದ ಪಾಲು ಸಂದಾಯವಾಗಿಲ್ಲ. ಬೊಮ್ಮಾಯಿಯವರು ಇದ್ದಾಗಲೂ ಪರಿಹಾರ ದೊರೆತ್ತಿಲ್ಲ. ಇನ್ನು ಮುಂದೆ ಜಿಎಸ್‌ಟಿ ನಷ್ಟ ಪರಿಹಾರ ಕೊಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಪ್ರತಿ ವರ್ಷ 30,000 ಕೋಟಿ ನಷ್ಟವಾಗುತ್ತಾ ಹೋಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಯಥಾವತ್ತು ಜಾರಿಗೊಳಿಸುವುದಾಗಿ ಹೇಳಿದ್ದ ನಿರ್ಮಲಾ ಸೀತಾರಾಮನ್ ಅವರು ಮಾತುತಪ್ಪಿದ್ದಾರೆ. ನಾವು ಅತಿಹೆಚ್ಚು ತೆರಿಗೆ ಕೊಡುವ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿದ್ದೇವೆ. ಆದರೆ ನಮಗೆ ಬಂದ ಪ್ರತಿಫಲವೇನು?” ಎಂದು ಪ್ರಶ್ನಿಸಿದರು.

“13ನೇ ಹಣಕಾಸು ಆಯೋಗವು ರಾಜ್ಯಕ್ಕೆ ಶೇ.32ರಷ್ಟು ಡೆವುಲ್ಯೂಷನ್‌ ಶಿಫಾರಸ್ಸು ಮಾಡಿತ್ತು. ನಮಗೆ ಶೇ.28ರಷ್ಟು ಪಾಲು ಸಿಕ್ಕಿತ್ತು. ಹದಿನಾಲ್ಕನೇ ಹಣಕಾಸು ಆಯೋಗವು ಶೇ.42 ಶಿಫಾರಸ್ಸು ಮಾಡಿತ್ತು. ಆಗ ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದರು. ಕೆಲವೇ ದಿನಗಳಲ್ಲಿ ಮೋದಿ ಸರ್ಕಾರ ಬಂತು. 42 % ಹಣವನ್ನು ಕರ್ನಾಟಕ್ಕೆ ಕೊಡಬಾರದು ಎಂದು ನಿರ್ಧರಿಸಲು ಹೊರಟಿದ್ದು ಇದೇ ಬಿಜೆಪಿ ಸರ್ಕಾರ. ನಮಗೆ ವಾಸ್ತವದಲ್ಲಿ ತಲುಪಿದ್ದು ಶೇ.35 ಮಾತ್ರ. ಹದಿನೈದನೇ ಹಣಕಾಸು ಆಯೋಗವು ಶೇ.41ರಷ್ಟು ಡೆವಲ್ಯೂಷನ್‌ ಶಿಫಾರಸ್ಸು ಮಾಡಿದೆ, ಸಿಕ್ಕಿರುವುದು ಮಾತ್ರ ಶೇ. 30” ಎಂದು ಬೇಸರ ವ್ಯಕ್ತಪಡಿಸಿದರು.

“ಸೆಸ್‌, ಸರ್‌ಚಾರ್ಜ್ ಸಂಗ್ರಹದ ಅಧಿಕಾರವನ್ನು ರಾಜ್ಯ ಸರ್ಕಾರಗಳಿಂದ ಕಿತ್ತುಕೊಳ್ಳಲಾಯಿತು. ಪೆಟ್ರೋಲ್‌, ಡಿಸೇಲ್ ಅನ್ನು ಸೆಸ್‌ ಮತ್ತು ಸರ್‌ಚಾರ್ಜ್‌ಗಳೊಳಗೆ ಸೇರಿಸಿ, ಅದರಿಂದ ಬರುವ ಲಾಭವನ್ನೂ ಕೇಂದ್ರ ಸರ್ಕಾರ ಪಡೆಯುತ್ತಿದೆ. ಹೀಗಾಗಿ 8,263 ಕೋಟಿ ರೂ. ನಷ್ಟ ರಾಜ್ಯ ಸರ್ಕಾರಕ್ಕೆ ಆಗಿದೆ. ಕಾಂಗ್ರೆಸ್‌ ಸರ್ಕಾರ ಇದ್ದಾಗಲೂ ಸೆಸ್ ಸರ್‌ಚಾರ್ಜ್ ಇತ್ತು. ಆದರೆ ಅದರ ಪ್ರಮಾಣ ಶೇ.8ರಷ್ಟು ಮಾತ್ರ. ಬಿಜೆಪಿ ಅದನ್ನು ಶೇ.22ಕ್ಕೆ ಏರಿಸಿದೆ” ಎಂದು ಹೇಳಿದರು.

“ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷದ ಆದಾಯ ಕಡಿಮೆಯಾಗಬಾರದು, ಹಾಗೇನಾದರೂ ಆದಾಗ ಕೇಂದ್ರ ಸರ್ಕಾರ ತುಂಬಿಕೊಡಬೇಕು ಎಂದು ಹಣಕಾಸು ಆಯೋಗ ಹೇಳುತ್ತದೆ. ಹೀಗೆ ಕರ್ನಾಟಕಕ್ಕೆ ನೀಡಬೇಕಾದ ಸುಮಾರು 11,000 ಕೋಟಿ ವಿಶೇಷ ಅನುದಾನದ ಕುರಿತು ಮರುಪರಿಶೀಲನೆ ಮಾಡುವಂತೆ ಹಣಕಾಸು ಆಯೋಗಕ್ಕೆ ಹಣಕಾಸು ಸಚಿವೆ ನಿರ್ಮಲಾ ಅವರು ತಿಳಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

kbg 2 1
ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ನಡುವಿನ ಚರ್ಚೆಯನ್ನು ವೀಕ್ಷಿಸಲು ಆಗಮಿಸಿದ್ದ ಜನರು.

“ಯುಪಿಎ ಕಾಲದಲ್ಲಿ 5 ಲಕ್ಷ ಕೋಟಿಯಿಂದ 12 ಲಕ್ಷ ಕೋಟಿವರೆಗೆ ಬಜೆಟ್ ಗಾತ್ರವಿತ್ತು. ಇಂದು ಬಜೆಟ್ ಗಾತ್ರ 42 ಲಕ್ಷ ಕೋಟಿಯಾಗಿದೆ. ಮೂರು ಪಟ್ಟು ಗಾತ್ರ ಹೆಚ್ಚಾದರೂ ಪಾಲು ಮಾತ್ರ ದ್ವಿಗುಣವಾಗಿಲ್ಲ. ಕರ್ನಾಟಕ ರಾಜ್ಯವು 100 ರೂಪಾಯಿ ಕೊಟ್ಟರೆ 12 ರೂಪಾಯಿ ವಾಪಸ್ ಪಡೆಯುತ್ತಿದೆ. ನೂರು ರೂಪಾಯಿ ಕೊಟ್ಟು ಮುನ್ನೂರು ರೂಪಾಯಿ ಪಡೆಯುವ ರಾಜ್ಯಗಳಿವೆ. ನಮಗೆ 12 ರೂಪಾಯಿ ಬದಲು 30 ರೂಪಾಯಿಯನ್ನಾದರೂ ಕೊಡಿ ಎಂದು ಕೇಳುತ್ತಿದ್ದೇವೆ. ಆದರೆ ಚಿನ್ನದ ಮೊಟ್ಟೆ ಇಡುವ ಕೋಳಿಯ ಕತ್ತು ಕತ್ತರಿಸಲು ಹೊರಟಿದ್ದಾರೆ” ಎಂದು ಟೀಕಿಸಿದರು.

“ಕೇಂದ್ರದ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಸರ್ಕಾರಗಳು ಹೆಚ್ಚಿನ ಪಾಲು ಕೊಡುತ್ತಿವೆ. ಪಿಎಂ ಗರೀಬಿ ಅನ್ನ ಯೋಜನೆಗೆ ಶೇ. 52ರಷ್ಟು ಅನುದಾನ ರಾಜ್ಯ ಸರ್ಕಾರವೇ ನೀಡುತ್ತದೆ. ಪಿಎಂ ಅವಾಜ್ ಯೋಜನೆಗೆ ಶೇ. 93.41ರಷ್ಟು ರಾಜ್ಯ ಸರ್ಕಾರ ನೀಡುತ್ತದೆ. ಹೆಸರಿಗೆ ಮಾತ್ರ ಕೇಂದ್ರ ಪುರಸ್ಕೃತ ಯೋಜನೆ. ಎಲ್ಲವೂ ಪ್ರಧಾನ ಮಂತ್ರಿ ಎಂದೇ ಶುರುವಾಗುತ್ತವೆ. ಹೆಚ್ಚಿನ ಅನುದಾನ ನೀಡುವುದು ಮಾತ್ರ ರಾಜ್ಯ ಸರ್ಕಾರ. ಮನೆಮನೆಗೆ ನಲ್ಲಿ ಹಾಕಿಸಿದರು. ಆದರೆ ನೀರಿನ ಮೂಲ ನೀವೇ ಮಾಡಿಕೊಳ್ಳಿ ಎಂದರು. ಇದು ಕೇಂದ್ರ ಪುರಸ್ಕೃತ ಯೋಜನೆಗಳ ಕಥೆ” ಎಂದು ವ್ಯಂಗ್ಯವಾಡಿದರು.

ಬರ ಪರಿಹಾರ ವಿಚಾರದಲ್ಲಿ ಅಮಿತ್‌ ಶಾ, ನಿರ್ಮಲಾ ಸೀತಾರಾಮನ್ ಹೇಳಿದ ಸುಳ್ಳುಗಳು

ಬರ ಪರಿಹಾರದ ಕುರಿತು ಗೃಹ ಸಚಿವ ಅಮಿತ್ ಶಾ ಮತ್ತು ಅರ್ಥಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಡಿರುವ ಹೇಳಿಕೆಗಳಿಗೆ ಉತ್ತರಿಸಿದ ಕೃಷ್ಣ ಬೈರೇಗೌಡ ಅವರು, “2020-2021ನೇ ಸಾಲಿನಲ್ಲಿ ಅಂತಿಮ ವರದಿಯನ್ನು ಹಣಕಾಸು ಆಯೋಗ ನೀಡಿರಲಿಲ್ಲ. 2021-2026ರ ಫೈನಲ್ ರಿಪೋರ್ಟ್ ಈಗ ನಮ್ಮ ಮುಂದಿದೆ ಎಂದು ಹೇಳುತ್ತಿದ್ದಾರೆ. ವಾಸ್ತವದಲ್ಲಿ 2020-2021ನೇ ಸಾಲಿಗೆ ಅನ್ವಯವಾಗುವಂತೆ ಒಂದು ವರದಿಯನ್ನು ಕೊಡಲಾಗಿತ್ತು. ಅಂತಿಮ ವರದಿಗೂ ಇದಕ್ಕೂ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದರು.

“ಫೈನಲ್ ರಿಪೋರ್ಟ್‌ನಲ್ಲಿ 2020- 2021ರ ಶಿಫಾರಸ್ಸು ಕ್ಯಾರಿ ಓವರ್‌ (ಮುಂದುವರಿಕೆ) ಆಗಿಲ್ಲ ಎಂದು ನಿರ್ಮಲಾ ಅವರು ಹೇಳಿದ್ದಾರೆ. 2020-21ರ ವರದಿಯಲ್ಲಿ ಇರುವುದೆಲ್ಲವೂ ಕ್ಯಾರಿ ಓವರ್‌ ಆಗಿದೆಯೇ, ತಿಳಿಸಿ ಮೇಡಂ. ವಾಸ್ತವದಲ್ಲಿ ಯಾವುದೂ ಕ್ಯಾರಿ ಓವರ್‌ ಆಗುವುದಿಲ್ಲ. ಆ ವರದಿಯೇ ಬೇರೆ, ಈ ವರದಿಯೇ ಬೇರೆ” ಎಂದು ಕುಟುಕಿದರು.

“ಫೈನಲ್ ರಿಪೋರ್ಟ್‌ನಲ್ಲಿ 6,000 ಕೋಟಿ ರೂ.ಗಳನ್ನು ಕರ್ನಾಟಕಕ್ಕೆ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಆರು ಸಾವಿರ ಕೋಟಿಯಲ್ಲಿ ಆರು ಪೈಸೆಯನ್ನಾದರೂ ಕೊಟ್ಟಿದ್ದೀರಾ? ಇದನ್ನಾದರೂ ಅನುಷ್ಠಾನ ಮಾಡಬಹುದಲ್ಲ” ಎಂದು ಆಗ್ರಹಿಸಿದರು.

“ಬರ ಘೋಷಣೆ ಕೈಪಿಡಿಯ ಪ್ರಕಾರ ಮುಂಗಾರು ಹಂಗಾಮಿನ ಬರ ಘೋಷಣೆಯನ್ನು ಅಕ್ಟೋಬರ್‌ 31ರ ನಂತರ ಮಾಡಬೇಕು. ಬರಗಾಲ ತೀವ್ರವಾಗಿದ್ದರೆ ಮೊದಲೇ ಘೋಷಣೆ ಮಾಡಬಹುದು. ನಾವು ಸೆಪ್ಟೆಂಬರ್‌ 13ರಂದು, ಅಂದರೆ ಒಂದೂವರೆ ತಿಂಗಳು ಮೊದಲೇ ಬರ ಘೋಷಣೆ ಮಾಡಿದ್ದೇವೆ. ಸೆಪ್ಟೆಂಬರ್‌ 23ರಂದು ಮನವಿಯನ್ನು ಸಲ್ಲಿಸಿದ್ದೇವೆ” ಎಂದು ದಾಖಲೆಗಳನ್ನು ಮುಂದಿಟ್ಟರು.

“ಸರಿಯಾದ ಸಮಯಕ್ಕೆ ಸಲ್ಲಿಸಿದ್ದರೆ ನಾವು ಕೇಂದ್ರದ ತಂಡವನ್ನು ರಾಜ್ಯಕ್ಕೆ ಕಳುಹಿಸುತ್ತಿದ್ದೆವು ಎಂದು ಪತ್ರಿಕಾಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೆ ಅಕ್ಟೋಬರ್‌ 4ರಿಂದ ಅಕ್ಟೋಬರ್‌ 9ರವರೆಗೆ ಸೆಂಟ್ರಲ್‌ ಟೀಮ್‌ ಬಂದು ಹೋಗಿದೆ ಎಂಬುದು ಮೇಡಂಗೆ ಗೊತ್ತೇ ಇಲ್ಲ. ಸೆಂಟ್ರಲ್ ಟೀಮ್‌ನವರು ಸಿಎಂ ಮತ್ತು ನನ್ನ ಜೊತೆಯಲ್ಲಿ ಚರ್ಚೆ ಮಾಡಿದ್ದಾರೆ. ಭಟ್ಟಂಗಿಗಳು ಬರೆದುಕೊಟ್ಟಿದ್ದನ್ನು ಮೇಡಂನವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ” ಎಂದು ಟೀಕಿಸಿದರು.

“ಐಎಂಸಿಟಿ ತಂಡವು ಅಕ್ಟೋಬರ್‌ 20ರಂದು ವರದಿ ಸಲ್ಲಿಕೆ ಮಾಡಿದೆ.  ಕೇಂದ್ರ ಗೃಹ ಇಲಾಖೆಗೆ ವರದಿ ಹೋಗಿದೆ. ಆದರೆ ಐದು ತಿಂಗಳು ಕುಂಡಿ ಕೆಳಗೆ ಹಾಕಿಕೊಂಡು ಕೂತಿದ್ದರು. ಈಗ ತಡವಾಗಿ ಬರ ಪರಿಹಾರ ಕೇಳಲಾಗಿದೆ ಎನ್ನುತ್ತಿದ್ದಾರೆ ಅಮಿತ್ ಶಾ. ಕರ್ನಾಟಕದಲ್ಲಿ ಸರ್ಕಾರ ಉರುಳಿಸುತ್ತೇವೆ ಎನ್ನೋಕೆ ಟೈಮ್ ಇರುತ್ತೆ. ಆದರೆ ನಮ್ಮ ಫೈಲ್ ಬಗ್ಗೆ ಹದಿನೈದು ನಿಮಿಷ ಮೀಟಿಂಗ್‌ ಮಾಡೋಕೆ ಅವರಿಗೆ ಸಮಯ ಸಿಕ್ಕಿಲ್ಲ” ಎಂದು ಝಾಡಿಸಿದರು.

“ಬರ ಪರಿಹಾರಕ್ಕಾಗಿ ಡಿಸೆಂಬರ್‌ 20ರಂದು ಗೃಹ ಸಚಿವರನ್ನು ಭೇಟಿ ಮಾಡಿದ್ದೆವು. ಅವರನ್ನು ಸಮಾಧಾನ ಮಾಡಲು ಮೈಸೂರು ಪೇಟ, ಗಂಧದ ಹಾರ, ಶಾಲು ಹಾಕಿದ್ದೆವು. ಮುಖ್ಯಮಂತ್ರಿಯವರು ಎಲ್ಲವನ್ನೂ ವಿವರಿಸಿದ್ದರು. ಡಿಸೆಂಬರ್‌ 23ರಂದು ಮೀಟಿಂಗ್‌ ಮಾಡುತ್ತೇವೆ ಎಂದಿದ್ದರು ಅಮಿತ್ ಶಾ. ನಮ್ಮೊಂದಿಗೆ ಜಿ.ಸಿ.ಚಂದ್ರಶೇಖರ್‌, ಎಲ್.ಹನುಮಂತಯ್ಯ ಇದ್ದರು. ಈಗ ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕದ ರೈತರ ಮೇಲೆ ಯಾಕಿಷ್ಟು ದ್ವೇಷ” ಎಂದು ಪ್ರಶ್ನಿಸಿದರು.

kbg 4
ಬರ ಪರಿಹಾರಕ್ಕಾಗಿ ಡಿಸೆಂಬರ್‌ 20ರಂದು ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದ ಫೋಟೋವನ್ನು ಕೃಷ್ಣ ಬೈರೇಗೌಡ ಅವರು ತೋರಿಸಿದರು.

“ಇದು ಸಾಲದೆಂಬಂತೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಎಲೆಕ್ಷನ್ ಕಮಿಷನ್‌ಗೆ ರೆಫರ್‌ ಮಾಡಿರುವುದಾಗಿ ಅಮಿತ್ ಷಾ ಈಗ ಹೇಳುತ್ತಾರೆ. ಅದಕ್ಕಾದರೂ ಸಾಕ್ಷಿ ತೋರಿಸಿದ್ದಾರಾ? ಕರ್ನಾಟಕ ರಾಜ್ಯವು ಬರ ಘೋಷಣೆ ವಿಚಾರದಲ್ಲಿ ಕ್ರಮಗಳನ್ನು ಅನುಸರಿಸಿ ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಶ್ಲಾಘಿಸಿದೆ” ಎಂದು ದಾಖಲೆಯನ್ನು ಪ್ರದರ್ಶಿಸಿದರು.

kbg 1 2
ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಬರ ಪರಿಹಾರಕ್ಕಾಗಿ ಮನವಿ ಮಾಡಿದ್ದ ಫೋಟೋವನ್ನು ಕೃಷ್ಣ ಬೈರೇಗೌಡ ಅವರು ಹಂಚಿಕೊಂಡರು

ನೀರಾವರಿ ಯೋಜನೆಗಳಲ್ಲಿ ಮೋಸ

“ಭದ್ರಾ ಮೇಲ್ಮಂಡೆ ಯೋಜನೆಗೆ 5,300 ಕೋಟಿ ರೂ. ಕೊಡುತ್ತೇವೆ ಎಂದು ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಹೇಳಿದ್ದರು. 53 ಪೈಸೆ ಕೂಡ ಬಂದಿಲ್ಲ. ಮಹಾದಾಯಿ ಯೋಜನೆಗೆ ಎನ್ವಿರಾನ್‌ಮೆಂಟ್‌ ಕ್ಲಿಯರೆನ್ಸ್‌ ಮಾತ್ರ ಬೇಕಿದೆ.  ಆದರೆ ಅದನ್ನು ಇಟ್ಟುಕೊಂಡು ಕೂತಿದ್ದಾರೆ. ಮೇಕೆದಾಟು ವಿಚಾರಕ್ಕೆ ಡಿಪಿಆರ್‌ ಕಳಿಸಿದ್ದೇವೆ. ಈ ವಿಚಾರಕ್ಕೆ ಸುಪ್ರೀಂಕೋರ್ಟ್‌ನಿಂದಲೂ ತಡೆ ಇಲ್ಲ. ಆದರೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಕಂದಾಯ ಸಚಿವರು ಆರೋಪಿಸಿದರು.

ಸಂವಾದದಲ್ಲಿ ಸಚಿವರು ಭಾಗಿ

ಪಿಪಿಟಿ ಪ್ರೆಸೆಂಟೇಷನ್ ಬಳಿಕ ಕೃಷ್ಣ ಬೈರೇಗೌಡ ಅವರು ಸಂವಾದದಲ್ಲಿ ಭಾಗಿಯಾದರು. ಆರ್ಥಿಕ ವಿಶ್ಲೇಷಕರಾದ ಪ್ರೊ.ಟಿ.ಆರ್‌.ಚಂದ್ರಶೇಖರ್‌, ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಬರಹಗಾರ ನಾಗೇಗೌಡ ಕೀಲಾರ, ಹೈಕೋರ್ಟ್ ವಕೀಲರಾದ ರಾಜಲಕ್ಷ್ಮಿ ಅಂಕಲಗಿ, ಜಾಗೃತ ಕರ್ನಾಟಕ ಸಂಘಟನೆಯ ಸೀತಾ, ಕನ್ನಡಪರ ಹೋರಾಟಗಾರ ಶಿವಾನಂದ ಗುಂಡಣ್ಣ ಸಂವಾದದಲ್ಲಿ  ಪಾಲ್ಗೊಂಡಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

Download Eedina App Android / iOS

X