ಅಫ್ಘಾನಿಸ್ತಾನದ ಆರು ಮತ್ತು ಪೂರ್ವ ಆಫ್ರಿಕಾದ ಒಬ್ಬ ವಿದ್ಯಾರ್ಥಿಗೆ ಹಾಸ್ಟೆಲ್ ಕೊಠಡಿಗಳನ್ನು ಖಾಲಿ ಮಾಡುವಂತೆ ಗುಜರಾತ್ ವಿಶ್ವವಿದ್ಯಾನಿಲಯ ತಿಳಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಆವರಣದಲ್ಲಿ ನಮಾಜ್ ಮಾಡುತ್ತಿದ್ದ ಕೆಲವು ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ ವಾರಗಳ ನಂತರ ಈ ಘಟನೆ ನಡೆದಿದೆ.
ಮಾರ್ಚ್ 16ರಂದು ಹಾಸ್ಟೆಲ್‌ನಲ್ಲಿ ನಮಾಜ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಇದಾದ ಕೆಲವು ದಿನಗಳ ನಂತರ ಅಫ್ಘಾನ್ ಮತ್ತು ಗ್ಯಾಂಬಿಯನ್ ನಿಯೋಗವು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿತ್ತು. ಸುರಕ್ಷತಾ ಕ್ರಮಗಳ ಕುರಿತು ಉಪಕುಲಪತಿಯೊಂದಿಗೆ ಸಭೆ ನಡೆಸಿತು.
ಇದನ್ನು ಓದಿದ್ದೀರಾ? ಗುಜರಾತ್ ಪ್ರಕರಣ | ‘ಸಾಂಸ್ಕೃತಿಕ ಸೂಕ್ಷ್ಮತೆ’ ಕಲಿಯಬೇಕಾದವರು ವಿದೇಶಿ ವಿದ್ಯಾರ್ಥಿಗಳೇ? ನಾವೇ?
ಈ ಬಗ್ಗೆ ಪಿಟಿಐಗೆ ಪ್ರತಿಕ್ರಿಯೆ ನೀಡಿದ ವಿಶ್ವವಿದ್ಯಾನಿಲಯದ ಉಪಕುಲಪತಿ ನೀರ್ಜಾ ಗುಪ್ತಾ, “ಅಫ್ಘಾನಿಸ್ತಾನದ ಆರು ಮತ್ತು ಪೂರ್ವ ಆಫ್ರಿಕಾದ ಒಬ್ಬ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ಕೊಠಡಿಗಳನ್ನು ಖಾಲಿ ಮಾಡುವಂತೆ ತಿಳಿಸಲಾಗಿದೆ” ಎಂದು ಹೇಳಿದರು. ಈ ವಿದ್ಯಾರ್ಥಿಗಳ ಅಧ್ಯಯನ ಪೂರ್ಣವಾಗಿದೆ. ಕೆಲವು ಆಡಳಿತಾತ್ಮಕ ಕೆಲಸಗಳು ಬಾಕಿಯಾಗಿದೆ. ಆದ್ದರಿಂದಾಗಿ ಹಳೆ ವಿದ್ಯಾರ್ಥಿಗಳಾಗಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿಸಿದರು.
International students (Africa, Uzbekistan, Afganistan etc) studying in Gujarat University @gujuni1949 claim they were beaten up, Stones thrown at them and at their hostel (A-Block), Vehicles destroyed while they were offering Ramazan Taraweeh at a place inside the hostel A-Block… pic.twitter.com/ogJ3h7FUin
— Mohammed Zubair (@zoo_bear) March 16, 2024
ಅವರು ಇನ್ನು ಮುಂದೆ ಹಾಸ್ಟೆಲ್‌ನಲ್ಲಿ ಉಳಿಯುವ ಅಗತ್ಯವಿಲ್ಲ ಎಂದು ವಿಶ್ವವಿದ್ಯಾಲಯವು ಅವರಿಗೆ ತಿಳಿಸಿದೆ. ಅವರು ತಮ್ಮ ದೇಶಗಳಿಗೆ ಮರಳಲು ವ್ಯವಸ್ಥೆ ಮಾಡಿದೆ ಎಂದು ಗುಪ್ತಾ ಹೇಳಿದರು.
“ನಾವು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿದ್ದೇವೆ. ಅವರು ಈಗ ಸುರಕ್ಷಿತವಾಗಿ ತಮ್ಮ ದೇಶಗಳಿಗೆ ಮರಳಬಹುದು. ನಮ್ಮ ಹಾಸ್ಟೆಲ್‌ನಲ್ಲಿ ಯಾವುದೇ ಹಳೆಯ ವಿದ್ಯಾರ್ಥಿಗಳನ್ನು ಇರಿಸಿಕೊಳ್ಳಲು ನಾವು ಬಯಸಲ್ಲ. ನಾವು ಆಯಾ ದೇಶಗಳ ಕಾನ್ಸುಲೇಟ್‌ಗಳಿಗೆ ತಿಳಿಸಿದ್ದೇವೆ ಮತ್ತು ಅವರು ಈ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಖಾಲಿ ಮಾಡುವಂತೆ ಸೂಚಿಸಿದ್ದಾರೆ” ಎಂದು ಉಪಕುಲಪತಿ ಹೇಳಿದರು.
ಇದನ್ನು ಓದಿದ್ದೀರಾ? ಗುಜರಾತ್ | ಹಾಸ್ಟೆಲ್‌ನಲ್ಲಿ ನಮಾಝ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳಿಗೆ ಹಲ್ಲೆ: ಇಬ್ಬರ ಬಂಧನ
ಗುಜರಾತ್ ವಿಶ್ವವಿದ್ಯಾಲಯದಲ್ಲಿ 300 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಮಾರ್ಚ್ 16 ರ ರಾತ್ರಿ ಸ್ಥಳೀಯ ಜನರು ನಮಾಜ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ಬಳಿಕ ಆರೋಪಿಗಳು ತಮ್ಮ ಎದುರಲ್ಲೇ ಹೋದರೂ ಅವರನ್ನು ವಶಕ್ಕೆ ಪಡೆಯದ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸ್ಥಳೀಯರ ಹಲ್ಲೆಯಿಂದಾಗಿ ಘಟನೆಯ ನಂತರ ಶ್ರೀಲಂಕಾ ಮತ್ತು ತಜಕಿಸ್ತಾನದ ಇಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನು ಈ ಘಟನೆಯ ಬಳಿಕ ಗುಜರಾತ್ ವಿಶ್ವವಿದ್ಯಾಲಯದ ಉಪಕುಲಪತಿ ನೀರ್ಜಾ ಗುಪ್ತಾ ಹೇಳಿಕೆಯು ತೀವ್ರ ವಿರೋಧಕ್ಕೆ ಗ್ರಾಸವಾಗಿತ್ತು. “ವಿದೇಶಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸೂಕ್ಷ್ಮತೆ ಬಗ್ಗೆ ನಾವು ತರಬೇತಿ ನೀಡಬೇಕಾಗುತ್ತದೆ. ಇವರು ವಿದೇಶಿ ವಿದ್ಯಾರ್ಥಿಗಳು, ನಾವು ವಿದೇಶಕ್ಕೆ ಹೋದಾಗ ನಾವು ಸಾಂಸ್ಕೃತಿಕ ಸೂಕ್ಷ್ಮತೆ ಬಗ್ಗೆ ತಿಳಿಯುವುದು ಮುಖ್ಯ. ಈ ವಿದ್ಯಾರ್ಥಿಗಳಿಗೆ ತರಬೇತಿ ಬೇಕಿದೆ. ನಾವು ಅವರನ್ನು ಕರೆದು ಈ ತರಬೇತಿ ನೀಡುತ್ತೇವೆ. ಅವರ ಸುರಕ್ಷತೆ ಹೇಗೆ ಹೆಚ್ಚಿಸುವುದು ಎಂಬ ಬಗ್ಗೆ ಚರ್ಚಿಸುತ್ತೇವೆ” ಎಂದು ಹೇಳಿದ್ದರು.