“ಬಿಜೆಪಿ- ಜೆಡಿಎಸ್ ಮೈತ್ರಿಯನ್ನು ಸೋಲಿಸಬೇಕೆಂದು ನಾವು ಜನರಲ್ಲಿ ವಿನಂತಿ ಮಾಡಿಕೊಳ್ಳಬೇಕಿದೆ. ಇಂದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾನೇರ ಫೈಟ್ ಇದೆ. ಯಾವುದೇ ಅಡ್ಡದಾರಿ ಹಿಡಿದರೂ ಪರವಾಗಿಲ್ಲ ಎಂದು ಹೊರಟಿರುವ ಬಿಜೆಪಿ, ಜೆಡಿಎಸ್ ಪಕ್ಷವನ್ನು ಜೊತೆಯಲ್ಲಿ ಸೇರಿಸಿಕೊಂಡಿದೆ. ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್‌ಗೆ ಮತ ಹಾಕದಂತೆ ಪ್ರಚಾರ ಮಾಡುತ್ತೇವೆ” ಎಂದು ಸಿಪಿಐ(ಎಂ) ರಾಜ್ಯ ಮುಖಂಡ ಹಾಗೂ ದಲಿತ ಹೋರಾಟಗಾರ ಗೋಪಾಲಕೃಷ್ಣ ಅರಳಹಳ್ಳಿ ಹೇಳಿದರು.
ಜನ ಸಾಮಾನ್ಯರ ಬದುಕನ್ನು ರಕ್ಷಿಸುವುದಕ್ಕಾಗಿ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಹಿಮ್ಮೆಟ್ಟಿಸುವುದಕ್ಕಾಗಿ ಭಾನುವಾರ ಬೆಂಗಳೂರಿನಲ್ಲಿ ಸಿಪಿಎಂ(ಐ) ಹಮ್ಮಿಕೊಂಡಿದ್ದ ರಾಜಕೀಯ ಸಮಾವೇಶದಲ್ಲಿ ಅವರು ಮಾತನಾಡಿದರು.
“ಮೊನ್ನೆ ರಾಜ್ಯಕ್ಕೆ ಬಂದಿದ್ದ ಅಮಿತ್ ಷಾ ಅವರು 350ರಿಂದ 400 ಸೀಟ್ ಗೆಲ್ಲಲೇಬೇಕು ಎಂದು ಹೇಳುತ್ತಿದ್ದಾರೆ. ಇದರ ಹಿಂದೆ ಇರುವ ಅಪಾಯಕಾರಿ ವಿಚಾರವನ್ನು ನಾವು ಅರ್ಥಮಾಡಿಕೊಳ್ಳಬೇಕು. ಸಂವಿಧಾನ ಬದಲು ಮಾಡುವುದೇ ಅವರ ಗುರಿಯಾಗಿದೆ. ಅದಕ್ಕಾಗಿ ಕನಿಷ್ಠ 370 ಸೀಟ್‌ಗಳನ್ನು ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಈ ಕುರಿತು ಎಚ್ಚರ ವಹಿಸಬೇಕು” ಎಂದರು.
“ಸಂವಿಧಾನ ಬದಲಾವಣೆ ಎಂದರೆ ಸಂವಿಧಾನದ ಮೂಲ ತತ್ವಗಳ ಬದಲಾವಣೆ. ಪ್ರಜಾಪ್ರಭುತ್ವವನ್ನು ದಮನ ಮಾಡಲು ತಿದ್ದುಪಡಿಗಳನ್ನು ತರುವುದು ಆರ್‌ಎಸ್‌ಎಸ್‌ನ ಅಜೆಂಡಾವಾಗಿದೆ. ಒಕ್ಕೂಟ ವ್ಯವಸ್ಥೆಯನ್ನು ಇಲ್ಲವಾಗಿಸುವುದೇ ಅವರ ಗುರಿ. ವಿವಿಧ ಧರ್ಮ, ಜಾತಿ, ಭಾಷೆಯ ಜನ ಏಕತೆಯಿಂದ ಬಾಳುತ್ತಿದ್ದೇವೆ. ಆದರೆ ರಾಜ್ಯ ಮತ್ತು ಕೇಂದ್ರದ ಸಂಬಂಧಗಳನ್ನು ಹಾಳು ಮಾಡುವ ಉದ್ದೇಶವನ್ನು ಬಿಜೆಪಿ ಹೊಂದಿದೆ” ಎಂದು ಟೀಕಿಸಿದರು.
“ಹಿಂದೂ ರಾಷ್ಟ್ರ ಮಾಡುತ್ತೇವೆ ಎನ್ನುತ್ತಿದ್ದಾರೆ. ಅದರ ಉದ್ದೇಶವೇ ಸನಾತನ ಧರ್ಮವನ್ನು ತರುವುದು. ಅಂದರೆ ಶ್ರೇಣಿಕೃತ ವ್ಯವಸ್ಥೆಯನ್ನು ಚಾಲ್ತಿಗೆ ತಂದು, ಜಾತಿ ವ್ಯವಸ್ಥೆಯನ್ನು ಬಲಪಡಿಸಿ, ಸಮಾನತೆಯನ್ನು ಕಿತ್ತು ಹಾಕಲು ಹೊರಟಿದ್ದಾರೆ” ಎಂದು ಎಚ್ಚರಿಸಿದರು.
“ಬಿಜೆಪಿಯನ್ನು ಸೋಲಿಸಲು ನಮ್ಮ ಪಕ್ಷ ತೀರ್ಮಾನ ಮಾಡಿದೆ. ಒಂದೊಂದು ವಾರ್ಡ್‌ನಲ್ಲಿ ಪ್ರತಿಯೊಬ್ಬರೂ ಕನಿಷ್ಠ ನೂರು ಮನೆಗೆ ಭೇಟಿ ನೀಡಿ, ಮತದಾರರನ್ನು ಬದಲಾವಣೆ ಮಾಡಬೇಕು” ಎಂದು ಮುಖಂಡರಿಗೆ ಸೂಚಿಸಿದರು.
“ದೇಶವನ್ನು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಚುನಾವಣಾ ಬಾಂಡ್‌ನಲ್ಲಿ 9000 ಕೋಟಿ ರೂ.ಗಳನ್ನು ಬಿಜೆಪಿ ಪಡೆದಿದೆ. ಭ್ರಷ್ಟಾಚಾರವನ್ನು ಕಾನೂನುಬದ್ಧ ಮಾಡಿದ್ದರು. ಆ ಹಣವನ್ನು ಈಗ ಚುನಾವಣೆಯಲ್ಲಿ ಹಂಚಲು ನಿರ್ಧರಿಸಿದ್ದಾರೆ” ಎಂದು ಆರೋಪಿಸಿದರು.
“ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಪ್ಪುಹಣ ವಾಪಸ್ ತರುತ್ತೇವೆ ಎಂದಿದ್ದರು. ನಿಮ್ಮ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಹೇಳಿದ್ದರು. ಇಂದು ಇಡೀ ದೇಶವನ್ನು ನಾಶ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ನಾವು ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಮಾಡಿದ್ದೇವೆ. ಅದು ಚಿಕ್ಕಬಳ್ಳಾಪುರ ಕ್ಷೇತ್ರ. ಗೆಲ್ಲದಿದ್ದರೂ ನೀವು ಯಾಕೆ ಸ್ಪರ್ಧೆ ಮಾಡುತ್ತೀರಿ ಎಂದು ಕೇಳುತ್ತಾರೆ. ದುಡಿಯುವ ವರ್ಗದ ಪಕ್ಷವಾಗಿ ನಾವು ನಮ್ಮ ಅಸ್ತಿತ್ವವನ್ನು ತೋರಿಸಬೇಕಿದೆ” ಎಂದು ಹೇಳಿದರು.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯರಾದ ಮೀನಾಕ್ಷಿ ಸುಂದರಂ ಮಾತನಾಡಿ, “ಬೆಂಗಳೂರು ನಗರದಲ್ಲಿ ಕಡಿಮೆ ಪ್ರಮಾಣದ ಮತದಾನವಾಗುವುದು ಗಂಭೀರ ವಿಚಾರ. ದುಡಿಯುವ ಜನ ಶೇ.100ರಷ್ಟು ಮತ ಹಾಕುತ್ತಾರೆ. ಆದರೆ ಮಧ್ಯಮ ವರ್ಗದ ಜನರು ಮತಗಟ್ಟೆಗೆ ಹೋಗುವುದಿಲ್ಲ. ಕಡ್ಡಾಯ ಮತದಾನಕ್ಕಾಗಿ ನಾವು ಅಭಿಯಾನ ಮಾಡಬೇಕಿದೆ” ಎಂದು ತಿಳಿಸಿದರು.
“ನೀರಿನ ಹರಿಯುವಿಕೆ ಮೇಲಿನಿಂದ ಕೆಳಗೆ ಸರಾಗವಾಗಿ ಆಗುತ್ತದೆ. ಟರೆಸ್‌ನಲ್ಲಿ ಟ್ಯಾಂಕ್‌ನಲ್ಲಿರುವ ನೀರು ಕೆಳಮಹಡಿಯ ಮನೆಯ ನಲ್ಲಿಗೆ ತಲುಪುವುದು ಸುಲಭ. ಆದರೆ ದುಡ್ಡಿಗೆ ಮಾತ್ರ ವಿಚಿತ್ರ ಗುಣವಿದೆ. ಅದು ಕೆಳಹಂತದಿಂದ ಮೇಲಕ್ಕೆ ಹರಿಯುತ್ತದೆ. ಬಡವರ ಹಣವನ್ನು ಕಿತ್ತು ಮೇಲಿನವರಿಗೆ ಕೊಡಲಾಗುತ್ತದೆ. ಅದಕ್ಕಾಗಿ ಪಾರ್ಲಿಮೆಂಟ್ ಕೆಲಸ ಮಾಡುತ್ತದೆ. ಕೆಳಗಿನ ಜನರ ಮೇಲೆ ವಿಪರೀತ ತೆರಿಗೆಗಳನ್ನು ಹಾಕಲಾಗುತ್ತದೆ” ಎಂದು ಮಾರ್ಮಿಕವಾಗಿ ನುಡಿದರು.
ರಾಜಾಜಿನಗರ ವಲಯ ಕಾರ್ಯದರ್ಶಿ ಡಿ.ಚಂದ್ರಶೇಖರ ಅವರು ಮಾತನಾಡಿ, “ಬೆಲೆ ಏರಿಕೆ, ನಿರುದ್ಯೋಗ, ಕನಿಷ್ಠ ವೇತನ, ಕೇಂದ್ರ ಮತ್ತು ರಾಜ್ಯದ ಸಂಬಂಧಗಳ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ನಮ್ಮ ಪಾಲು ದೊರಕುತ್ತಿಲ್ಲ ಎಂದಿದೆ ರಾಜ್ಯ ಸರ್ಕಾರ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಸಿಎಂಗಳು ತೆರಿಗೆ ವಂಚನೆ ಬಗ್ಗೆ ದನಿ ಎತ್ತಿದ್ದಾರೆ. ಇಂದು ಎಲೆಕ್ಟೋರಲ್ ಬಾಂಡ್ ವಿಷಯ ಮುನ್ನೆಲೆಗೆ ಬಂದಿದೆ. ಬಾಂಡ್ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗಿದ್ದು ನಮ್ಮ ಪಕ್ಷ” ಎಂದು ತಿಳಿಸಿದರು.
ಜಿಲ್ಲಾ ಸಮಿತಿ ಸದಸ್ಯ ಎನ್.ರಾಜಣ್ಣ ಮಾತನಾಡಿ, “ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದೆವು. ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿಯವರ ವಿರುದ್ಧ ಸೆಣಸಾಡಿದೆವು. ಸರ್ವಾಧಿಕಾರಿಗಳನ್ನು ಸೋಲಿಸಿ ಮನೆಗೆ ಕಳುಹಿಸಿದ್ದೇವೆ. ಆದರೆ ಇಂದು ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ಎನ್.ಪ್ರತಾಪ್ ಸಿಂಹ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
