ಆಡಳಿತ ಪಕ್ಷಕ್ಕೆ ಸೋಲಿನ ಭಯ ಗೋಚರಿಸುತ್ತಿದ್ದು, ಇದರ ದುರುದ್ದೇಶ ಪ್ರಯತ್ನದ ಭಾಗವಾಗಿ 400 ಸಂಖ್ಯೆಯ ಅಂಕಿಗಳನ್ನು ಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಹೇಳಿದರು.
ನವದೆಹಲಿಯಲ್ಲಿ ಪಿಟಿಐ ಸಂಪಾದಕರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ತನ್ನ ಎನ್‌ಡಿಎ ಮೈತ್ರಿಕೂಟ 400 ಸಂಖ್ಯೆ ದಾಟುವ ಆತ್ಮವಿಶ್ವಾಸವಿದ್ದರೆ ವಿಪಕ್ಷಗಳ ನಾಯಕರನ್ನು ಏಕೆ ಸೇರಿಸಿಕೊಳ್ಳುತ್ತಿದೆ ಎಂದು ಪ್ರಶ್ನಿಸಿದರು.
ಹಿಂದೆ ಅಧಿಕಾರದಲ್ಲಿದ್ದ ಪಕ್ಷ ವೈಫಲ್ಯ ಕಂಡ ಪರಿಣಾಮ ಜನರು ಬಿಜೆಪಿಯ ಉಗ್ರತ್ವವಾದಕ್ಕೆ ಆಕರ್ಷಿತರಾದರು. ಪ್ರೀತಿ, ಸಮಾನತೆ ಹಾಗೂ ಸಹಬಾಳ್ವೆ ಹಾಗೂ ಶಾಂತಿಯ ಆಧಾರದ ಮೇಲೆ ಮಾತ್ರ ಭಾರತ ಸಮಾಜವನ್ನು ಬದಲಾಯಿಸಬಹುದು ಎಂದು ಕನ್ಹಯ್ಯ ಕುಮಾರ್ ಹೇಳಿದರು.
ಬಿಜೆಪಿಯ 400 ಸಂಖ್ಯೆಯ ಘೋಷಣೆಗೆ ಪ್ರತಿಪಕ್ಷಗಳು ಸ್ಪರ್ಧೆಯಲ್ಲಿ ಹಿಂದುಳಿದಂತೆ ತೋರುತ್ತಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಕನ್ನಯ್ಯ ಅವರು, ಇದು ಬಿಜೆಪಿಯ ಹತಾಶೆ ಹಾಗೂ ಸೋಲಿನ ಭಯ ಕಾಡುತ್ತಿರುವುದಕ್ಕೆ ಈ ರೀತಿ ಹೇಳಲಾಗುತ್ತಿದೆ ಎಂದರು.
“ಭಾರತ ಹಾಗೂ ಆಸ್ಟ್ರೇಲಿಯ ವಿಶ್ವಕಪ್ ಫೈನಲ್ ಪಂದ್ಯ ನಡೆದಾಗ ಪಂದ್ಯಕ್ಕೂ ಮುಂಚೆ ಭಾರತ 400 ಗಳಿಸುತ್ತದೆ ಎಂದು ತಂಡದ ಆಟಗಾರರು ಹೇಳಿದ್ದನ್ನು ಕೇಳಿದ್ದೀರಾ? ಉತ್ತಮವಾಗಿ ಯಾರು ಆಟವಾಡುತ್ತಾರೋ ಅವರು ವಿಶ್ವಕಪ್ ಗೆಲ್ಲುತ್ತಾರೆ ಎಂದು ಎಲ್ಲರು ಹೇಳಿದ್ದರು” ಎಂಬುದನ್ನು ಕನ್ಹಯ್ಯ ಇದೇ ಸಮಯದಲ್ಲಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್
“400 ಸಂಖ್ಯೆ ಗೆಲ್ಲಲು ಆತ್ಮವಿಶ್ವಾಸದಲ್ಲಿದ್ದೀರಾ? ಇದು ದೇಶವನ್ನು ವಂಚಿಸುವ ದುರುದ್ದೇಶ ಪ್ರಯತ್ನ. 400 ಸಂಖ್ಯೆಗೆ ಹೆಚ್ಚು ಒತ್ತು ನೀಡುತ್ತಿರುವವರ ಬಗ್ಗೆ ಯಾಕೆ ಪೆಟ್ರೋಲ್ ದರ 100 ರೂ. ದಾಟಿದೆ ಎಂಬುದನ್ನು ಪ್ರಶ್ನಿಸುತ್ತಿಲ್ಲ, ಹಣದುಬ್ಬರ ಏಕೆ ಏರಿಕೆ ಕಂಡಿದೆ, ದಶಕಗಳಲ್ಲಿಯೇ ಏಕೆ ನಿರುದ್ಯೋಗ ಪ್ರಮಾಣ ಏರಿಕೆಯಾಗಿದೆ? ಎಂದು ಕನ್ಹಯ್ಯ ಪ್ರಶ್ನಿಸಿದರು.
ದೇಶದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಮುಟ್ಟಿದ್ದರೆ, ದೇಶದ 80 ಕೋಟಿ ಜನರಿಗೆ ಏಕೆ ಉಚಿತ ಆಹಾರ ಧಾನ್ಯ ನೀಡಲಾಗುತ್ತಿದೆ. ಅಲ್ಲದೆ ಆಹಾರ ನೀಡಿಕೆಗಾಗಿಯೇ ಸರ್ಕಾರ ತನ್ನ ಬೆನ್ನನ್ನು ತಾನೆ ತಟ್ಟಿಕೊಳ್ಳುತ್ತಿದೆ ಎಂದು ಕನ್ಹಯ್ಯ ಹೇಳಿದರು.
“ನಿಜ ಸಂಗತಿಗಳನ್ನು ಮತ್ತೆ ಮತ್ತೆ ಮುಚ್ಚಿಡಲಾಗುತ್ತಿದೆ. ಇದು ಮತದಾನ ಮಾಡುವ ದೇಶದ 140 ಕೋಟಿ ಜನರಿಗೆ ಮಾಡಿದ ಅಪಮಾನ. ನೀವು 400 ಗಳಿಸಿದ್ದೀರೆಂದು ನಿರ್ಧರಿಸಿದರೆ, ಮತ್ತೇಕೆ ಚುನಾವಣೆಗಳನ್ನು ನಡೆಸುತ್ತಿದ್ದೀರಾ? ಎಂದು ಕನ್ಹಯ್ಯ ಪ್ರಶ್ನಿಸಿದರು.
“2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನಾಯಕತ್ವದ ಸಂದರ್ಭದಲ್ಲಿ ಭಾರತ ಪ್ರಕಾಶಿಸುತ್ತಿದೆ ಎಂದು ಇದೇ ರೀತಿಯ ಗ್ರಹಿಕೆ ನಿರ್ವಹಣೆಯನ್ನು ಪ್ರಯತ್ನಿಸಲಾಗಿತ್ತು. ಆದರೆ ಚುನಾವಣಾ ಫಲಿತಾಂಶ ಬಂದ ನಂತರ ಎನ್‌ಡಿಎ ಸೋತು ಯುಪಿಎ ಗೆಲುವನ್ನು ಸಾಧಿಸಿತ್ತು ಎಂದು ಕನ್ಹಯ್ಯ ತಿಳಿಸಿದರು.
“ಮಾನವೀಯ ಮೌಲ್ಯಗಳು ಕುಸಿದಾಗ ಉಗ್ರವಾದದ ಚಿಂತನೆಗಳು ಸಮಾಜವನ್ನು ಆಳುತ್ತವೆ. 1980ರ ಬಿಜೆಪಿ ಕಾರ್ಯಕರ್ತರಿಗಿಂತ ಇಂದಿನ ಕಾರ್ಯಕರ್ತ ಶಕ್ತಿಶಾಲಿ ಹಾಗೂ ಸತತ ಪರಿಶ್ರಮಿಗಳು. ಮೂಲ ಸಂಘಟನೆಯಾದ ಆರ್‌ಎಸ್ಎಸ್ ಕಾರ್ಯಕರ್ತರು ಹೆಚ್ಚು ಸಂಘಟಿತರಾಗಿದ್ದಾರೆ. ಆದರೆ ಈ ಬಾರಿ ಯಶಸ್ಸು ಸಾಧಿಸುವುದಿಲ್ಲ” ಎಂದು ಕನ್ಹಯ್ಯ ಕುಮಾರ್ ಹೇಳಿದರು.
