ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಜಪ್ತಿ ಮಾಡಿ ಇರಿಸಲಾಗಿದ್ದ 10 ಕೆಜಿ ಭಾಂಗ್ ಮತ್ತು ಒಂಬತ್ತು ಕೆಜಿ ಗಾಂಜಾವನ್ನು ನಾಶಮಾಡಿದ ಆರೋಪವನ್ನು ಇಲಿಗಳ ಮೇಲೆ ಹೊರೆಸಲಾಗಿದೆ!
ಇಲಿಗಳೇ ಗಾಂಜಾ ನಾಶ ಮಾಡಿದೆ ಎಂಬ ವಿಷಯವನ್ನು ಪೊಲೀಸರು ಜಿಲ್ಲೆಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಪ್ರಕರಣಕ್ಕೆ ಸಂಬಂಧಿಸಿದ ವಕೀಲರು ಭಾನುವಾರ ತಿಳಿಸಿದ್ದಾರೆ.
ಆರು ವರ್ಷಗಳ ಹಿಂದೆ ವಶಪಡಿಸಿಕೊಂಡ ಭಾಂಗ್ ಮತ್ತು ಗಾಂಜಾವನ್ನು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸುವಂತೆ ರಾಜ್‌ಗಂಜ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿಗೆ ನ್ಯಾಯಾಲಯ ಸೂಚಿಸಿದೆ. ಅದಾದ ಬಳಿಕ ಪೊಲೀಸರು ಈ ಕುರಿತಾಗಿ ಶನಿವಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾಮ್ ಶರ್ಮಾ ಅವರಿಗೆ ವರದಿಯನ್ನು ಸಲ್ಲಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ವಿದ್ಯುತ್ ಅವಘಡಕ್ಕೆ ಇಲಿ ಕಾರಣ; ತನಿಖೆಗೆ 4 ಸಮಿತಿ ರಚನೆ
ಪೊಲೀಸ್ ಠಾಣೆಯ ಗೋದಾಮಿನಲ್ಲಿ ಸಂಗ್ರಹವಾಗಿದ್ದ ಮಾದಕ ವಸ್ತುಗಳನ್ನು ಇಲಿಗಳು ಸಂಪೂರ್ಣವಾಗಿ ನಾಶಪಡಿಸಿವೆ ಎಂದು ಅಧಿಕಾರಿ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ವರದಿ ಕೂಡ ದಾಖಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಡಿಸೆಂಬರ್ 14, 2018 ರಂದು, ರಾಜಗಂಜ್ ಪೊಲೀಸರು 10 ಕೆಜಿ ಭಾಂಗ್ ಮತ್ತು ಒಂಬತ್ತು ಕೆಜಿ ಗಾಂಜಾದೊಂದಿಗೆ ಶಂಭು ಪ್ರಸಾದ್ ಅಗರ್ವಾಲ್ ಎಂಬ ವ್ಯಕ್ತಿ ಮತ್ತು ಆತನ ಪುತ್ರನನ್ನು ಬಂಧಿಸಿದ್ದರು. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು.
ವಿಚಾರಣೆ ವೇಳೆ ನ್ಯಾಯಾಲಯವು ಪ್ರಕರಣದ ತನಿಖಾಧಿಕಾರಿ ಜಯಪ್ರಕಾಶ್ ಪ್ರಸಾದ್ ಅವರಿಗೆ ಜಪ್ತಿ ಮಾಡಿದ ಭಾಂಗ್ ಮತ್ತು ಗಾಂಜಾವನ್ನು ಏಪ್ರಿಲ್ 6 ರಂದು ನ್ಯಾಯಾಲಯಕ್ಕೆ ಸಾಕ್ಷಿಯಾಗಿ ನೀಡುವಂತೆ ಆದೇಶಿಸಿತ್ತು.
ಇದನ್ನು ಓದಿದ್ದೀರಾ? ಐಕಿಯಾ ಬೆಂಗಳೂರು: ಊಟ ಮಾಡುತ್ತಿರುವಾಗ ದಿಢೀರನೆ ತಟ್ಟೆ ಮೇಲೆ ಬಿದ್ದ ಸತ್ತ ಇಲಿ!
ಆದರೆ ವಶಪಡಿಸಿಕೊಂಡ ಎಲ್ಲಾ ವಸ್ತುಗಳನ್ನು ಇಲಿಗಳು ನಾಶಪಡಿಸಿವೆ ಎಂದು ರಾಜ್‌ಗಂಜ್ ಪೊಲೀಸ್ ಠಾಣಾಧಿಕಾರಿಯ ಅರ್ಜಿಯೊಂದಿಗೆ ಪ್ರಸಾದ್ ಶನಿವಾರ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ ಎಂದು ಪ್ರಕರಣದ ಪರ ವಕೀಲ ಅಭಯ್ ಭಟ್ ಪಿಟಿಐಗೆ ತಿಳಿಸಿದರು. ಹಾಗೆಯೇ ಪೊಲೀಸರು ವಶಪಡಿಸಿಕೊಂಡ ವಸ್ತುಗಳನ್ನು ಸಾಕ್ಷಿಯಾಗಿ ನೀಡಲು ಸಾಧ್ಯವಾಗದ ಕಾರಣ ತನ್ನ ಕಕ್ಷಿದಾರನನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಲಾಗಿದೆ ಎಂದು ಭಟ್ ಹೇಳಿದರು.