ಕಾಡುಗೋಡಿ ಓಫಾರ್ಮ್ ಸಮೀಪ ಭಾನುವಾರ ನಡೆದ ವಿದ್ಯುತ್ ಅವಘಡಕ್ಕೆ ಇಲಿ ಕಾರಣ. ಔದುಂಬರ ಹೋಮ್ಸ್ ಅಪಾರ್ಟ್ಮೆಂಟ್ಗೆ ಹಾಕಲಾಗಿದ್ದ ಖಾಸಗಿ ಟ್ರಾನ್ಸ್‌ಫಾರ್ಮರ್‌ಗೆ ಇಲಿ ನುಗ್ಗಿ ಹಾಳು ಮಾಡಿದೆ. ಇದರಿಂದ ವಿದ್ಯುತ್ ಅವಘಡ ಸಂಭವಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣದ ತನಿಖೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.
ಭಾನುವಾರ ಬೆಳಗ್ಗೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ತಾಯಿ-ಮಗು ವಿದ್ಯುತ್ ತಗುಲಿ ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಐವರು ಬೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಪ್ರಕರಣದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೆ.ಜೆ ಜಾರ್ಜ್, “ಪ್ರಕರಣದ ತನಿಖೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.
“ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಉಪ ನಿರ್ದೇಶಕರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಒಟ್ಟು ಮೂರು ಮಾದರಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಬೆಸ್ಕಾಂ ಆಂತರಿಕ ತನಿಖೆಯನ್ನು ಕೈಗೊಂಡಿದ್ದಾರೆ” ಎಂದು ಸಚಿವರು ಹೇಳಿದ್ದಾರೆ.