- ‘ಪುತ್ತಿಲ ಮೇಲೆ ಕ್ರಮ ಕೈಗೊಳ್ಳಲು ಧೈರ್ಯ ಸಾಲದೇ?’
- ‘ಬಿಜೆಪಿಯ ಲಿಂಗಾಯತರಲ್ಲಿ ಅಸ್ತಿತ್ವದ ಭಯ ಶುರು’
ಬಿಜೆಪಿ ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿದೆ ಎನ್ನುವ ಆರೋಪ ಚುನಾವಣೆ ಹೊತ್ತಲ್ಲಿ ವ್ಯಾಪಕವಾಗಿದೆ. ಈ ನಡುವೆ ಕಾಂಗ್ರೆಸ್, “ಲಿಂಗಾಯತರಿಗೆ ಸುಣ್ಣ ಆರೆಸ್ಸೆಸ್ಸಿಗರಿಗೆ ಬೆಣ್ಣೆ?” ಎಂದು ಬಿಜೆಪಿ ವಿರುದ್ಧ ಕುಟುಕಿದೆ.
ಬಿಜೆಪಿ ಲಿಂಗಾಯತ ನಾಯಕರನ್ನು ಒಬ್ಬೊಬ್ಬರನ್ನಾಗಿಯೇ ರಾಜಕೀಯವಾಗಿ ಮುಗಿಸಿ, ಬ್ರಾಹ್ಮಣ ನಾಯಕರಿಗೆ ವೇದಿಕೆ ಕಲ್ಪಿಸಿಕೊಡುತ್ತಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಜೋರಾಗಿದೆ.
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪಕ್ಷ ತೊರೆದಿರುವುದು ಇದಕ್ಕೆ ಪುಷ್ಟಿ ನೀಡಿದೆ. ಈ ನಡುವೆ ಲಂಚ ಪ್ರಕರಣದ ಎ1 ಆರೋಪಿ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಲ್ಲಿಕಾರ್ಜುನ ಅವರನ್ನು ಬಿಜೆಪಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಬಿಜೆಪಿ ವಿರುದ್ಧ ಬಂಡಾಯವೆದ್ದ ಪಕ್ಷೇತರ ಸ್ಪರ್ಧಿ ಲಿಂಗಾಯತ ಮಾಡಾಳ್ ಮಲ್ಲಿಕಾರ್ಜುನರಿಗೆ 6 ವರ್ಷ ಪಕ್ಷದಿಂದ ಉಚ್ಛಾಟನೆ. ಅದೇ ಪುತ್ತೂರಿನ ಪಕ್ಷೇತರ ಸ್ಪರ್ಧಿ ಆರೆಸ್ಸೆಸ್ಸಿನ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಯಾವುದೇ ಕ್ರಮವಿಲ್ಲ” ಎಂದು ಕುಟುಕಿದೆ.
“ಲಿಂಗಾಯತರಿಗೆ ಸುಣ್ಣ ಆರೆಸ್ಸೆಸ್ಸಿಗರಿಗೆ ಬೆಣ್ಣೆ? ಪುತ್ತಿಲ ಮೇಲೆ ಕ್ರಮ ಕೈಗೊಳ್ಳಲು ಧೈರ್ಯ ಸಾಲದೇ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿ ಹಮ್ಮಿಕೊಂಡಿರುವ ಲಿಂಗಾಯತ ಸಭೆಗಳ ಕುರಿತು ಟ್ವೀಟ್ ಮಾಡಿ, “ಬಿಜೆಪಿಯ ಲಿಂಗಾಯತರಲ್ಲಿ ಅಸ್ತಿತ್ವದ ಭಯ ಶುರುವಾಗಿದೆ, ಆ ಮಟ್ಟಿಗೆ ‘ಸಂತೋಷ ಕೂಟ’ದ ಆಟ ಜೋರಿದೆ” ಎಂದು ವ್ಯಂಗ್ಯವಾಡಿದೆ.
ಈ ಸುದ್ದಿ ಓದಿದ್ದೀರಾ? ಕಡೇ ಕ್ಷಣದ ಹೈಡ್ರಾಮ: ಕೊತ್ತೂರು ಮಂಜು ಒತ್ತಡಕ್ಕೆ ಮುಳುಬಾಗಿಲು ಅಭ್ಯರ್ಥಿಯನ್ನೇ ಬದಲಿಸಿದ ಕಾಂಗ್ರೆಸ್
“ಅದರ ಪರಿಣಾಮವೇ ನಿನ್ನೆ ರಾತ್ರೋರಾತ್ರಿ ಯಡಿಯೂರಪ್ಪ ಅವರ ಮನೆಯಲ್ಲಿನ ಬಿಜೆಪಿ ಲಿಂಗಾಯತರ ಸಭೆ. ಇನ್ನೊಂದೆಡೆ ಸಂತೋಷ ಕೂಟದ ಸಭೆ. ರಾಜ್ಯ ಬಿಜೆಪಿ ನಾಯಕರೇ, ನಿನ್ನೆ ಒಂದೇ ದಿನ ನಡೆದ ಗಡಿಬಿಡಿಯ ಬೆಳವಣಿಗೆ ಇದು. ಯಾರು ಯಾರನ್ನು ಮಣಿಸಲು ಈ ಸಭೆಗಳು” ಎಂದು ಕೇಳಿದೆ.