ಎರಡು ತಿಂಗಳ ಹಿಂದೆ ನಿವೃತ್ತ ಉತ್ತರ ಪ್ರದೇಶದ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ವಿಜಯ್ ಕುಮಾರ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷವು ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸೂಚಿಸಿತ್ತು. ಅದರಂತೆ, ಪಕ್ಷಕ್ಕೆ ಸೇರಿದ್ದೇನೆ ಎಂದು ಹೇಳಿದ್ದಾರೆ.
1988ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ವಿಜಯ್ ಮತ್ತು ಅವರ ಪತ್ನಿ ಅನುಪಮಾ ಕುಮಾರ್ ಬಿಜೆಪಿಗೆ ಸೇರಿದ್ದಾರೆ. ಉತ್ತರ ಪ್ರದೇಶದಲ್ಲಿ 2015ರಲ್ಲಿ ಮಾಜಿ ಡಿಜಿಪಯೊಬ್ಬರು ಬಿಜೆಪಿಗೆ ಸೇರಿ, ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದೀಗ, ವಿಜಯ್ ಅವರು ಪಕ್ಷಕ್ಕೆ ಸೇರಿದ್ದಾರೆ. ಕಳೆದ 10 ವರ್ಷಗಳಲ್ಲಿ ಬಿಜೆಪಿಗೆ ಸೇರಿದ ಎರಡನೇ ಮಾಜಿ ರಾಜ್ಯ ಡಿಜಿಪಿ ಆಗಿದ್ದಾರೆ. ರಾಜಕೀಯ ಪ್ರವೇಶಿಸುವುದು ಅವರ ಧೀರ್ಘಕಾಲದ ಉದ್ದೇಶವಾಗಿತ್ತು ಎಂದು ಅವರು ಹೇಳಿದ್ದಾರೆ.
ಬಿಜೆಪಿ ಸೇರಿದ ಬಳಿಕ ಮಾತನಾಡಿದ ವಿಜಯ್, “ಗೃಹಿಣಿಯಾಗಿರುವ ನನ್ನ ಪತ್ನಿ ಮತ್ತು ನಾನು ರಾಜಕೀಯೇತರ ಹಿನ್ನೆಲೆಯಿಂದ ಬಂದವರು. ಪಕ್ಷದ ನಾಯಕತ್ವ ವಹಿಸುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ನಾವು ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದೆ. ಇದು ಅಭಿವೃದ್ಧಿಗೆ ಅನುಕೂಲವಾಗಿದೆ. ಸಾಮಾನ್ಯ ಜನರಿಗೆ ಪರಿಹಾರವನ್ನು ಒದಗಿಸಿದೆ” ಎಂದಿದ್ದಾರೆ.
ಝಾನ್ಸಿ ಮೂಲದ ಕುಮಾರ್ ಅವರು 2023ರ ಮೇ 31ರಿಂದ 2024ರ ಜನವರಿ 31ರವರೆಗೆ ರಾಜ್ಯ ಡಿಜಿಪಿಯಾಗಿ ಸೇವೆ ಸಲ್ಲಿಸಿದರು.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಅಸೀಮ್ ಅರುಣ್ ಸೇರಿದಂತೆ ಹಲವಾರು ನಿವೃತ್ತ ಐಪಿಎಸ್ ಅಧಿಕಾರಿಗಳು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.