ಸಿವಾನ್-ಗೋರಖ್‌ಪುರ ವಿಭಾಗದ ಮೈರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಿಪುರ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿ ದಾಟುವಾಗ ರೈಲು ಢಿಕ್ಕಿ ಹೊಡೆದು, ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರು ಹತ್ತಿರದ ಹೊಲದಲ್ಲಿ ಗೋಧಿ ಕೊಯ್ಲು ಮಾಡಿ ಇನ್ನೊಂದು ಬದಿಯಲ್ಲಿರುವ ತಮ್ಮ ಮನೆಗೆ ಮರಳುತ್ತಿದ್ದರು. ಈ ವೇಳೆ, ಏಕಕಾಲದಲ್ಲಿ ಎರಡು ರೈಲುಗಳು ಏಕಕಾಲದಲ್ಲಿ ಎರಡೂ ಬದಿಯಿಂದ ಹಳಿಗಳ ಮೇಲೆ ಚಲಿಸಿದ್ದು, ಅವರಿಗೆ ಢಿಕ್ಕಿ ಹೊಡೆದಿವೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ. “ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮೂರನೇ ಮಗು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದೆ. ಮೃತ ಮಹಿಳೆಯರನ್ನು ಸುನೀತಾ ದೇವಿ ಮತ್ತು ಸಿಮತಿ ದೇವಿ ಎಂದು ಗುರುತಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ವಿರುದ್ಧ ಸ್ಥಳೀಯರು ಪ್ರತಿಭಟಿಸಲು ಪ್ರಾರಂಭಿಸಿದ್ದರಿಂದ ಆ ಪ್ರದೇಶದಲ್ಲಿ ಗೊಂದಲಕ್ಕೆ ಕಾರಣವಾಯಿತು. ಸರ್ಕಾರದಿಂದ ಪರಿಹಾರ ಕೋರಿ ಅವರು ಶವಗಳನ್ನು ರಸ್ತೆಯ ಮಧ್ಯದಲ್ಲಿರಿಸಿ ಪ್ರತಿಭಟನೆ ನಡೆಸಿದ್ದಾರೆ.
ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಸಿಗುವವರೆಗೂ ಮರಣೋತ್ತರ ಪರೀಕ್ಷೆಗೆ ಅವಕಾಶ ನಿರಾಕರಿಸಿದ್ದಾರೆ. ಸರ್ಕಾರಿ ರೈಲ್ವೆ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳದಲ್ಲಿದ್ದು, ಜನರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಎಎಪಿ ನಾಯಕ ಸಂಜಯ್ ಸಿಂಗ್ ಪಂಜಾಬ್‌ಗೆ ಭೇಟಿ; ಪಕ್ಷದ ಸಿಎಂ, ಶಾಸಕರ ಸಭೆ
ಘಟನೆಯ ಬಳಿಕ, ಸ್ಥಳದಲ್ಲಿ ಭಾರೀ ಜನಸಮೂಹ ಜಮಾಯಿಸಿದೆ. ಮುಡಿಯಾರಿ ಪಂಚಾಯತ್ ಮುಖ್ಯಸ್ಥ ಅಜಯ್ ಭಾಸ್ಕರ್ ಚೌಹಾಣ್ ಸ್ಥಳಕ್ಕೆ ತಲುಪಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
“ಈ ಸಂತ್ರಸ್ತರ ಮನೆ ರೈಲ್ವೆ ಹಳಿಗಳ ಬಳಿ ಇದೆ. ಆದ್ದರಿಂದ ಕಾಲ್ನಡಿಗೆಯಲ್ಲಿ ಮನೆಗೆ ತೆರಳಲು ಹಳಿಗಳನ್ನು ದಾಟುವುದು ಏಕೈಕ ಮಾರ್ಗವಾಗಿದೆ. ಮಹಿಳೆಯರು ಮತ್ತು ಮಕ್ಕಳು ಹತ್ತಿರದ ಹೊಲದಲ್ಲಿ ಕೆಲಸ ಮಾಡಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ” ಎಂದು ಅಜಯ್ ಭಾಸ್ಕರ್ ಚೌಹಾಣ್ ತಿಳಿಸಿದ್ದಾರೆ.
