ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಅಪರಾಧಗಳನ್ನು ಕೇವಲ ಆರೋಪಿ ಮತ್ತು ಸಂತ್ರಸ್ತರ ನಡುವಿನ ರಾಜಿ ಆಧಾರದ ಮೇಲೆ ರದ್ದುಗೊಳಿಸಲಾಗುವುದಿಲ್ಲ ಎಂದು ಹೇಳಿದೆ.
ಪೋಕ್ಸೋ ಕಾಯಿದೆಯಡಿ ಆರೋಪಿಯಾಗಿರುವ ಸಂಜೀವ್ ಕುಮಾರ್ ಎಂಬಾತ ತನ್ನ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಸಮಿತ್ ಗೋಪಾಲ್ ವಜಾಗೊಳಿಸಿದ್ದಾರೆ. “ಅಪರಾಧದಲ್ಲಿ ಸಂತ್ರಸ್ತೆಯ ಒಪ್ಪಿಗೆ ಇರಲಿಲ್ಲ. ಹೀಗಿರುವಾಗ, ರಾಜಿ ಕೂಡ ಇನ್ನೂ ಅಪ್ರಸ್ತುತವಾಗಿರುತ್ತದೆ. ಅಪ್ರಾಪ್ತ ಸಂತ್ರಸ್ತೆಯು ಅರ್ಜಿದಾರರೊಂದಿಗೆ (ಆರೋಪಿ) ರಾಜಿ ಮಾಡಿಕೊಳ್ಳಲು ಒಪ್ಪಿಕೊಂಡಿರುವುದು ಮಾತ್ರವೇ, ಪೋಕ್ಸೋ ಕಾಯಿದೆಯಡಿ ವಿಚಾರಣೆಯನ್ನು ರದ್ದುಗೊಳಿಸಲು ಸಾಕಾಗುವುದಿಲ್ಲ” ಎಂದು ಹೇಳಿದ್ದಾರೆ.
ಆರೋಪಿ ವಿರುದ್ಧ ಅಜಂಗಢ್ ಜಿಲ್ಲೆಯ ಬಿಲಾರಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್ 376 (ಅತ್ಯಾಚಾರ), 313 (ಮಹಿಳೆಯರ ಒಪ್ಪಿಗೆಯಿಲ್ಲದೆ ಗರ್ಭಪಾತಕ್ಕೆ ಕಾರಣವಾಗುವುದು) ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 3/4 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಪೊಲೀಸರು ತನಿಖೆ ನಡೆಸಿ, ಜಾರ್ಜ್‌ಶೀಟ್ ಸಲ್ಲಿಸಿತ್ತು. ನ್ಯಾಯಾಲಯಕ್ಕೆ ಹಾಜರಾಗುವಂತೆ ಆರೋಪಿಗೆ ಸಮನ್ಸ್ ನೀಡಲಾಗಿತ್ತು. ಈ ಬಳಿಕ, ಆರೋಪಿ ಮತ್ತು ಸಂತ್ರಸ್ತೆ ನಡುವೆ ರಾಜಿ ಮಾಡಿಕೊಳ್ಳಲಾಗಿದೆ. ಆದರೂ, ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಉಳಿದಿದೆ. ಪ್ರಕರಣವನ್ನು ರದ್ದುಗೊಳಿಸಬೇಕೆಂದು ಆರೋಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಆರೋಪಿ ಮನವಿಯನ್ನು ವಿರೋಧಿಸಿದ ರಾಜ್ಯದ ವಕೀಲರು, “ಆರೋಪಿಯ ವಿರುದ್ಧದ ಆರೋಪಗಳು – ಮೂರು ವರ್ಷಗಳ ಅವಧಿಯಲ್ಲಿ ಬಾಲಕಿಯನ್ನು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗಿಸಿವೆ. ಅಪರಾಧ ನಡೆದಾಗ ಸಂತ್ರಸ್ತೆಗೆ 15 ವರ್ಷ ವಯಸ್ಸಾಗಿತ್ತು. ಘಟನೆಗಳ ಸಮಯದಲ್ಲಿ ಸಂತ್ರಸ್ತೆ ಅಪ್ರಾಪ್ತ ವಯಸ್ಸಿನವನಾಗಿದ್ದರಿಂದ, ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ತನಿಖೆ ವೇಳೆ ಆರೋಪಿ ವಿರುದ್ಧ ಪ್ರಾಥಮಿಕ ಅಪರಾಧ ಸಾಬೀತಾಗಿದೆ. ಹೀಗಾಗಿ, ವಿಚಾರಣಾ ನ್ಯಾಯಾಲಯವು ಅವನಿಗೆ ಸಮನ್ಸ್ ನೀಡಿತ್ತು. ಈ ರೀತಿಯ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲದ ಕಾರಣ ಅರ್ಜಿಯನ್ನು ವಜಾಗೊಳಿಸಬೇಕು” ಎಂದು ವಾದಿಸಿದ್ದರು.
ವಾದವನ್ನು ಆಲಿಸಿದ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿದೆ. ಪೋಕ್ಸೋ ಪ್ರಕರಣಗಳಲ್ಲಿ ಆರೋಪಿ ಮತ್ತು ಸಂತ್ರಸ್ತರ ನಡುವಿನ ರಾಜಿಯ ಕಾರಣಕ್ಕೆ, ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.