ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಳೆಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಗ್ರಾಮದ ರೈತರು ಗ್ರಾಮ ಪಂಚಾಯಿತಿ ಎದುರು ಸತ್ತ ಕುರಿಯನ್ನು ಇಟ್ಟು ಪ್ರತಿಭಟಿಸಿದರು.
“ಪಶು ಆರೋಗ್ಯ ಕೇಂದ್ರ ಇಲ್ಲದಿದ್ದರಿಂದ ಗ್ರಾಮಸ್ಥರು ಸರ್ಕಾರಕ್ಕೆ ಸಾವಿರಾರು ಬಾರಿ ಮನವಿ ಸಲ್ಲಿಸಿ ಸೋತ್ತಿದ್ದರು. ಕೆಲವು ತಿಂಗಳುಗಳ ಹಿಂದೆ ಸಿದ್ದಾರಾಮಯ್ಯ ಸರ್ಕಾರದ ಜನಸ್ಪಂದನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಬಾಳೆಹೊಸೂರು ಗ್ರಾಮ ಘಟಕದಿಂದ ಮನವಿ ಸಲ್ಲಿಸಲಾಗಿತ್ತು, ಘನ ಸರ್ಕಾರ ರಾಜ್ಯದ ಅನೇಕ ಗ್ರಾಮಗಳಿಗೆ ಮತ್ತು ತಾಲೂಕುಗಳಿಗೆ ಪಶು ಅಸ್ಪತ್ರೆ ಮಂಜೂರು ಮಾಡಿದ ಪಟ್ಟಿಯಲ್ಲಿ ಬಾಳೆಹೊಸೂರು ಗ್ರಾಮಕ್ಕೂ ಪಶು ಆಸ್ಪತ್ರೆ ಮಂಜುರಾಗಿದೆ” ಎಂದು ಪ್ರತಿಭಟನಾಕಾರರು ಹೇಳಿದರು.
“ಜಿಲ್ಲಾ ಮತ್ತು ತಾಲೂಕಿನ ಪಶು ವೈದ್ಯಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಬಾಳೆಹೊಸೂರು ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ ತಾತ್ಕಾಲಿಕ ಕಟ್ಟಡ ಶೋಧಿಸಬೇಕಾಗಿತ್ತು. ಮೂಲಭೂತ ಸೌಕರ್ಯಗಳುಳ್ಳ ಒಂದು ಕಟ್ಟಡ ಒದಗಿಸಿಕೊಡಲು ಪಶು ಅಧಿಕಾರಗಳು ಪಂಚಾಯಿತಿ ಆಡಳಿತಾಧಿಕಾರಿಗಳಿಗೂ ವಿನಂತಿಸಿದ್ದಾರೆ. ಆದರೆ ಬಾಳೆಹೊಸೂರು ಗ್ರಾಮ ಪಂಚಾಯಿತಿ ಪಿಡಿಒ, ಅಧ್ಯಕ್ಷರು ಮತ್ತು ಸದಸ್ಯರು ಈಯವರೆಗೆ ಸ್ಪಂದಿಸಿಲ್ಲ” ಎಂದು ಆರೋಪಿಸಿದರು.
“ಕುರಿ ದನ-ಕರಗಳು ಅಡವಿ-ಅರಣ್ಯದಲ್ಲಿ ಕಿಲೋ ಮೀಟರ್ ದೂರದವರೆಗೂ ಮೇಯಲು ಹೋದ ಜಾನುವಾರುಗಳು ಬೇಸಿಗೆಯ ಬಿಸಿಲಿನ ಜಳಕ್ಕೆ ತತ್ತರಿಸಿ ಅಲ್ಲಲ್ಲೇ ಸಾಯುತ್ತಿವೆ. ಮನೆಗಳಲ್ಲಿರುವಾಗಲೇ ಪ್ರಾಣಿಗಳನ್ನು ಆಸ್ಪತ್ರೆಗೆ ಸೇರಿಸಬೇಕೆಂದರೆ ಹತ್ತಿರದಲ್ಲಿ ಆಸ್ಪತ್ರೆಗಳಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬಿಸಿಲಿನ ಜಳಕ್ಕೆ ಕೋಳಿಗಳ ಸಾವು; ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ
ಕುರಿಗಳ ಮಾಲೀಕ ಕೃಷ್ಣಪ್ಪ ಜಾಲವಾಡಗಿ, ಗ್ರಾಮ ಘಟಕ ರೈತ ಸಂಘ ಅದ್ಯಕ್ಷ ಲೋಕೇಶ ಜಾಲವಡಗಿ, ಉಪಾಧ್ಯಕ್ಷ ನಿಂಗಪ್ಪ ಸೋಮಪ್ಪ ಗುಡ್ಡಣ್ಣವರ, ಬಸವರಡ್ಡಿ ಹನಮರಡ್ಡಿ, ಮಂಜುನಾಥ ಗುಡಗೇರಿ, ಮಂಜುನಾಥ ಕಬ್ಬೇರ ಇದ್ದರು.
