ಮಣಿಪುರ ಹಿಂಚಾಸಾರದ ಬಳಿಕ ಮನೆ ಕಳೆದುಕೊಂಡವರು ನಿರಾಶ್ರಿತ ಕೇಂದ್ರದಲ್ಲಿದ್ದು ಈ ನಿರಾಶ್ರಿತ ಕೇಂದ್ರದಲ್ಲಿಯೇ ಈವರೆಗೆ 180ಕ್ಕೂ ಹೆಚ್ಚು ಶಿಶುಗಳ ಜನನವಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
11 ತಿಂಗಳ ಘರ್ಷಣೆ, ಹಿಂಸಾಚಾರ ಮತ್ತು ಮುಂದುವರಿದ ಅನಿಶ್ಚಿತತೆಯ ನಡುವೆಯೂ ರಾಜ್ಯದಾದ್ಯಂತ ವಿವಿಧ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಕುಕಿ ಬುಡಕಟ್ಟಿನ ಹಟ್ನ್ಯೂ ಅವರಂತಹ ಸುಮಾರು 200 ಅಧಿಕ ಸ್ಥಳಾಂತರಗೊಂಡ ಮಹಿಳೆಯರು ತಮ್ಮ ನವಜಾತ ಶಿಶುಗಳನ್ನು ಸ್ವಾಗತಿಸಿದ್ದಾರೆ.
“ನಾನು ನನ್ನ ಅವಳಿಗಳನ್ನು ನನ್ನ ತೋಳುಗಳಲ್ಲಿ ಹಿಡಿದಾಗ, ನನ್ನ ಎಲ್ಲಾ ದುಃಖಗಳು ಕರಗಿ ಹೋದವು. ಈಗ ನನ್ನ ಈ ಅವಳಿ ಗಂಡು ಮಕ್ಕಳಿಗೆ ನಾಲ್ಕು ತಿಂಗಳು. ಅವರು ದೊಡ್ಡವರಾದ ಬಳಿಕ ನಾನು ಅವರ ಹುಟ್ಟಿನ ಕಥೆ ಹೇಳುತ್ತೇನೆ” ಎಂದು ಕಾಕ್ಚಿಂಗ್ ಜಿಲ್ಲೆಯ ಪರಿಹಾರ ಶಿಬಿರದಲ್ಲಿ 26 ವರ್ಷದ ಮಹಿಳೆಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮತದಾನದ ಹಕ್ಕಿಗೂ ಮೊದಲು ಬದುಕುವ ಹಕ್ಕು ಮುಖ್ಯ: ಮಣಿಪುರದ ಜನರ ಧ್ವನಿ
“ಗರ್ಭಧಾರಣೆಯ ಅವಧಿಯಲ್ಲಿ ಅಧಿಕ ಕಾಳಜಿ ವಹಿಸುವುದು ಅಗತ್ಯ. ಯಾವುದೇ ಭಾರವನ್ನು ಎತ್ತಬೇಡಿ, ಒತ್ತಡಕ್ಕೆ ಒಳಗಾಗಬೇಡಿ, ಚೆನ್ನಾಗಿ ತಿನ್ನಿ ಎಂದು ಈ ಅವಧಿಯಲ್ಲಿ ಹೇಳಲಾಗುತ್ತದೆ. ಆದರೆ ನನಗೆ ಈ ಅವಧಿಯು ಬದುಕುಳಿಯುವ ಅವಧಿಯಾಗಿತ್ತು” ಎಂದು ಮಣಿಪುರ ಹಿಂಸಾಚಾರವನ್ನು ನೆನಪಿಸಿಕೊಂಡಿದ್ದಾರೆ.
ಘರ್ಷಣೆ ಆರಂಭವಾದಾಗ ಕುಕಿ-ಜೋ ಮಹಿಳೆ ಲು ಲಾಮ್ವಾ ನ್ಗಾಹ್ಜೆಮ್ಕಿಮ್ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಈಗ ಚುರಾಚಂದ್‌ಪುರದ ಪರಿಹಾರ ಶಿಬಿರದಲ್ಲಿ ನೆಲೆಸಿದ್ದಾರೆ. ಈಗ ಲು ಲಾಮ್ವಾ ತನ್ನ ಮಗಳು ಕ್ರಿಸ್ಟಿಗೆ ಜನ್ಮ ನೀಡಿದ್ದು ಹಿಂಸಾಚಾರದ ಬಗ್ಗೆ ಪಿಟಿಐ ಜೊತೆ ಮಾತನಾಡಿದ್ದಾರೆ. “ಘರ್ಷಣೆಗಳು ಪ್ರಾರಂಭವಾದಾಗ ನಾವು ಮನೆಯಲ್ಲಿ ಊಟ ಮಾಡುತ್ತಿದ್ದೆವು. ಘರ್ಷಣೆ ಆರಂಭವಾಗುತ್ತಿದ್ದಂತೆ ನಾವು ಹತ್ತಿರದ ಬೆಟ್ಟಗಳಲ್ಲಿ ಅಡಗಿಕೊಂಡೆವು. ರಕ್ಷಣಾ ಪಡೆಗಳು ನಮ್ಮನ್ನು ರಕ್ಷಿಸುವವರೆಗೆ ನಾವು ಹಲವಾರು ಗಂಟೆಗಳ ಕಾಲ ಆ ಬೆಟ್ಟದಲ್ಲೇ ಅಡಗಿದ್ದೆವು. ನಮ್ಮ ಮನೆ ಕೆಲವೇ ನಿಮಿಷಗಳಲ್ಲಿ ಇಲ್ಲವಾಯಿತು” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ| ಸ್ಥಳಾಂತರಗೊಂಡ 24,000 ಕ್ಕೂ ಹೆಚ್ಚು ನಾಗರಿಕರಿಗೆ ಪರಿಹಾರ ಶಿಬಿರದಲ್ಲೇ ಮತದಾನಕ್ಕೆ ಅವಕಾಶ
ಮಣಿಪುರದಲ್ಲಿ ಕಳೆದ ವರ್ಷ (2023) ಮೇ 3 ರಿಂದ ಬಹುಸಂಖ್ಯಾತ ಮೈತಿ ಸಮುದಾಯ ಮತ್ತು ಕುಕಿಗಳ ನಡುವೆ ಹಿಂಸಾಚಾರ ನಡೆಯುತ್ತಿದ್ದು, ಈ ಜನಾಂಗೀಯ ಘರ್ಷಣೆಯಿಂದಾಗಿ ಈವರೆಗೂ 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಮೈತಿ ಸಮುದಾಯದವರು ಇಂಫಾಲ್ ನಗರದಲ್ಲಿ ನೆಲೆಸಿದರೆ, ಕುಕಿಗಳು ಬೆಟ್ಟಗಳಿಗೆ ಸ್ಥಳಾಂತರಗೊಂಡಿದ್ದಾರೆ. 50,000 ಕ್ಕೂ ಹೆಚ್ಚು ಜನರು ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.