ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದ 11 ತಿಂಗಳ ಹಿಂದೆ ತಮ್ಮ ಮನೆಗಳನ್ನು ಕಳೆದುಕೊಂಡು ಈಗ ಪರಿಹಾರ ಶಿಬಿರದಲ್ಲಿ ವಾಸಿಸುತ್ತಿರುವ ಜನರು, “ನಮಗೆ ಮತದಾನದ ಹಕ್ಕಿಗೂ ಮೊದಲು ಬದುಕುವ ಹಕ್ಕು ಮುಖ್ಯ, ಚುನಾವಣೆಯ ಮೊದಲು ಶಾಂತಿ ಮುಖ್ಯ” ಎಂದು ಹೇಳಿದ್ದಾರೆ.
“ಇನ್ನು ಮುಂದೆ ನನ್ನದಲ್ಲದ ಸ್ಥಳದ ಪ್ರತಿನಿಧಿಯನ್ನು ಆಯ್ಕೆ ಮಾಡಲು ನಾನೇಕೆ ಮತ ಹಾಕಬೇಕು. ಚುನಾವಣೆ ನಮಗೆ ಏನೂ ಅರ್ಥವನ್ನು ನೀಡಲ್ಲ” ಎಂದು ಪರಿಹಾರ ಶಿಬಿರದಲ್ಲಿ ವಾಸಿಸುತ್ತಿರುವ ನೋಬಿ ಎಂಬವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
2019 ರ ಚುನಾವಣೆಯಲ್ಲಿ ಶೇಕಡಾ 82 ಕ್ಕಿಂತ ಹೆಚ್ಚು ಮತದಾನ ಮಣಿಪುರ ರಾಜ್ಯದಲ್ಲಿ ಆಗಿದೆ. ಆದರೆ ಜನಾಂಗೀಯ ಹಿಂಸಾಚಾರವು ಈ ಬಾರಿಯ ಮತದಾನದ ಮೇಲೆ ಪ್ರಭಾವ ಬೀರುವ ಸಾದ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸಿದರೆ ಏನು ಅರ್ಥವಿದೆ ಎಂದು ಹಲವಾರು ಮಂದಿ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ| ಸ್ಥಳಾಂತರಗೊಂಡ 24,000 ಕ್ಕೂ ಹೆಚ್ಚು ನಾಗರಿಕರಿಗೆ ಪರಿಹಾರ ಶಿಬಿರದಲ್ಲೇ ಮತದಾನಕ್ಕೆ ಅವಕಾಶ
“ಗೌರವದಿಂದ ಬದುಕುವ ನನ್ನ ಹಕ್ಕನ್ನು ಕಾಪಾಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಈಗ ನನ್ನ ಮತದಾನದ ಹಕ್ಕನ್ನು ಕಾಪಾಡಿಕೊಳ್ಳಲು ಅವರು ಹೊರಟಿದ್ದಾರೆಯೇ?” ಎಂದು ನೋಬಿ ಪ್ರಶ್ನಿಸಿದ್ದು, “ನನ್ನ ಕಣ್ಣೆದುರೇ ನನ್ನ ಮನೆ ಸುಟ್ಟುಹೋಯಿತು. ನಾನು ಮತ್ತು ನನ್ನ ಕುಟುಂಬ ರಾತ್ರೋರಾತ್ರಿ ಬೀದಿಪಾಲಾದೆವು. ಸುಟ್ಟ ಮನೆಯಲ್ಲಿ ಏನು ಉಳಿದಿದೆ ಎಂಬುವುದು ಕೂಡಾ ನನಗೆ ತಿಳಿದಿಲ್ಲ” ಎಂದು ಹೇಳಿದರು.
“ಇನ್ನು ಮುಂದೆ ನನ್ನದಲ್ಲದ ಸ್ಥಳದ ಪ್ರತಿನಿಧಿಗೆ ನಾನು ಏಕೆ ಮತ ಹಾಕಬೇಕು? ಇದೆಲ್ಲವೂ ಗಿಮಿಕ್. ಚುನಾವಣೆಗಳು ನಮಗೆ ಏನೂ ಅರ್ಥವನ್ನು ನೀಡಿಲ್ಲ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆಗೂ ಮುನ್ನ ಮಣಿಪುರಕ್ಕೆ ಅಮಿತ್ ಶಾ ಭೇಟಿ ಸಾಧ್ಯತೆ
ಕಣಿವೆ ರಾಜ್ಯದಲ್ಲಿ ಕಳೆದ ವರ್ಷ ಮೇ 3 ರಿಂದ ಬಹುಸಂಖ್ಯಾತ ಮೈತಿ ಸಮುದಾಯ ಮತ್ತು ಕುಕಿಗಳ ನಡುವೆ ಹಿಂಸಾಚಾರ ಆರಂಭವಾಗಿದ್ದು, ಸುಮಾರು 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಮೈತಿಗಳು ಇಂಫಾಲ್ ನಗರದಲ್ಲಿಯೇ ಇದ್ದರೆ, ಕುಕಿಗಳು ಬೆಟ್ಟಗಳಿಗೆ ಸ್ಥಳಾಂತರಗೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಪರಿಹಾರ ಶಿಬಿರಗಳಲ್ಲಿ 50,000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ.
ಮಣಿಪುರದ ಎರಡು ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ಮತ್ತು 26 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇನ್ನು ಪರಿಹಾರ ಶಿಬಿರದಲ್ಲಿಯೇ ಚುನಾವಣೆಯನ್ನು ನಡೆಸಲು ಚುನಾವಣಾ ಆಯೋಗ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.