ಸೀಬೆ ಹಣ್ಣು ಮಾರಾಟ ಮಾಡುತ್ತಿದ್ದ ಹಿರಿಯ ವ್ಯಾಪಾರಿಯ ತಳ್ಳುವ ಗಾಡಿಯನ್ನು ಸಂಚಾರ ಪೊಲೀಸರೊಬ್ಬರು ತಳ್ಳಿ, ಸೊಪ್ಪಿನ ಚೀಲವನ್ನು ನೆಲಕ್ಕೆ ಎಸೆದ ಘಟನೆ ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯಲ್ಲಿ ನಡೆದಿದೆ.
“ಸಂಚಾರ ಪೊಲೀಸರು ಬಿಸಿಲಿನಲ್ಲೂ, ರಸ್ತೆಯಲ್ಲಿ ನಿಂತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಈ ಬಿರು ಬಿಸಿಲಿನ ಸಮಯದಲ್ಲಿ ಬೀದಿಬದಿ ವ್ಯಾಪಾರಿಗಳು ತಮ್ಮ ನಿತ್ಯದ ಜೀವನಕ್ಕಾಗಿ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಪೊಲೀಸರು ವ್ಯಾಪಾರಿಯ ಹಣ್ಣು ಮತ್ತು ಸೊಪ್ಪನ್ನು ನೆಲಕ್ಕೆ ಸುರಿದ ಘಟನೆ ಅಮಾನವೀಯವಾಗಿದೆ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕಾನೂನಿನ ಪ್ರಕಾರ, ಬೀದಿಬದಿ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಹಕ್ಕಿದೆ. ಸಂಚಾರ ಪೊಲೀಸರಿಗೆ ಏನಾದರೂ ಸಮಸ್ಯೆಯಿದ್ದರೇ, ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ಗಮನಕ್ಕೆ ತೆರಬೇಕು. ಆದರೆ, ಪೊಲೀಸರು ಈ ರೀತಿ ದೌರ್ಜನ್ಯ ಎಸಗುವುದು ಎಷ್ಟರ ಮಟ್ಟಿಗೆ ಸರಿ” ಎಂದು ಸಾರ್ವಜನಿಕರು ಕೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆಲಸವಿಲ್ಲದೇ ಸಾಕುವುದಕ್ಕೆ ಕಷ್ಟವೆಂದು ಮಕ್ಕಳನ್ನೇ ಕೊಂದ ತಾಯಿ
ಬೀದಿಬದಿ ವ್ಯಾಪಾರಿಗಳಿಗೆ ನೋಟಿಸ್ ನೀಡದೇ, ವ್ಯಾಪಾರಿಗಳನ್ನು ಎಬ್ಬಿಸುವಂತಿಲ್ಲ. ಬೀದಿ ವ್ಯಾಪಾರದಿಂದ ಸಮಸ್ಯೆಯಾದರೆ ಜಂಟಿ ಆಯುಕ್ತರ ಗಮನಕ್ಕೆ ತರಬೇಕು. ಬಿಬಿಎಂಪಿ ಪ್ರತಿವಲಯದಲ್ಲೂ ಪಟ್ಟಣ ವ್ಯಾಪಾರ ಸಮಿತಿ ಇರುತ್ತದೆ. ಬೀದಿಬದಿ ವ್ಯಾಪಾರಿಗಳ ಮೇಲೆ ಪೊಲೀಸರ ಈ ರೀತಿ ದೌರ್ಜನ್ಯ ಅಕ್ಷಮ್ಯ ಎಂದು ಜಿಲ್ಲಾ ಬೀದಿ ಬದಿ ವ್ಯಾಪಾರಿ ಸಂಘದ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ ಎಂದು ‘ಪಬ್ಲಿಕ್ ಟಿವಿ’ ವರದಿ ಮಾಡಿದೆ.