ಕೆಲಸ ಇಲ್ಲದೇ ಮಕ್ಕಳಿಬ್ಬರನ್ನ ಸಾಕುವುದಕ್ಕೆ ಕಷ್ಟವಾಗುತ್ತಿದೆ ಎಂದು ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಜಾಲಹಳ್ಳಿಯಲ್ಲಿ ನಡೆದಿದೆ.
ಗಂಗಾದೇವಿ ಮಕ್ಕಳನ್ನು ಕೊಲೆ ಮಾಡಿದ ತಾಯಿ. ಲಕ್ಷ್ಮೀ (9), ಗೌತಮ್ (7) ಕೊಲೆಯಾದ ಮಕ್ಕಳು. ಸದ್ಯ ಆರೋಪಿ ಗಂಗಾದೇವಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರ ಮೂಲದವರಾದ ಆರೋಪಿ ಗಂಗಾದೇವಿ ಕುಟುಂಬ ಬೆಂಗಳೂರಿನ ಜಾಲಹಳ್ಳಿಯಲ್ಲಿ ವಾಸವಾಗಿದ್ದರು. ಕಳೆದ ಮಾರ್ಚ್ ತಿಂಗಳಲ್ಲಿ ತನ್ನ ಪತಿ ಮಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಗಂಗಾದೇವಿ ಖುದ್ದು ಪೊಲೀಸ್ ಠಾಣೆಗೆ ದೂರು ನೀಡಿ, ಗಂಡನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು ಮಾಡಿದ್ದಳು.
ಗಂಗಾದೇವಿ ಕೊಟ್ಟ ದೂರಿನ ಆಧಾರದ ಮೇಲೆ ಜಾಲಹಳ್ಳಿ ಪೊಲೀಸರು ಗಂಡನನ್ನ ಬಂಧನ ಮಾಡಿ ಜೈಲಿಗೆ ಕಳುಹಿಸಿದ್ದರು. ಅದಾದ ಬಳಿಕ ಈಗ ಇಬ್ಬರು ಮಕ್ಕಳನ್ನ ಕೊಲೆ ಮಾಡಿದ್ದಾಳೆ. ಕೆಲಸ ಇಲ್ಲದೇ ಮಕ್ಕಳಿಬ್ಬರನ್ನ ಸಾಕುವುದಕ್ಕೆ ಕಷ್ಟವಾಗುತ್ತಿತ್ತು. ಆ ಕಾರಣಕ್ಕಾಗಿ ಇಬ್ಬರು ಮಕ್ಕಳನ್ನ ರಾತ್ರಿ 9:30ಕ್ಕೆ ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಇನ್ನು ಗಂಗಾದೇವಿ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದಾಳೆ.
ಈ ಸುದ್ದಿ ಓದಿದ್ದೀರಾ? ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ
ಮಂಗಳವಾರ ರಾತ್ರಿ 9:30ಕ್ಕೆ ಇಬ್ಬರು ಮಕ್ಕಳನ್ನು ತಾಯಿ ಕೊಲೆ ಮಾಡಿದ್ದಾಳೆ. ಬಳಿಕ ಕಂಟ್ರೋಲ್ ರೂಂಗೆ ಕರೆ ಮಾಡಿ ಮಕ್ಕಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದೇನೆ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. ಕೂಡಲೇ ಘಟನಾ ಸ್ಥಳಕ್ಕೆ ಜಾಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಗಾದೇವಿಯನ್ನ ವಶಕ್ಕೆ ಪಡೆದಿದ್ದಾರೆ.