ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಶೇ.81.15 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನೇಕ ವಿದ್ಯಾರ್ಥಿಗಳು ತಾವು ನೀರಿಕ್ಷಿಸಿದ್ದಷ್ಟು ಅಂಕ ಬಂದಿರದಿದ್ದರೆ, ತಮ್ಮ ಉತ್ತರ ಪತ್ರಿಕೆ ಪ್ರತಿ ಪಡೆಯಲು, ಡೌನ್‌ಲೋಡ್ ಮಾಡಿಕೊಳ್ಳಲು, ಮರು ಮೌಲ್ಯಮಾಪನ ಹಾಗೂ ಮರು ಅಂಕ ಎಣಿಕೆಗೆ ಅರ್ಜಿ ಸಲ್ಲಿಸಲು ಏ.20 ರವರೆಗೆ ಮೌಲ್ಯಮಾಪನಾ ಮಂಡಳಿ ಕಾಲಾವಕಾಶ ನೀಡಿದೆ.
ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 10ರಿಂದ ಏಪ್ರಿಲ್ 16ರವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಏಪ್ರಿಲ್ 14ರಿಂದ ಏಪ್ರಿಲ್ 19ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮರು ಮೌಲ್ಯಮಾಪನಕ್ಕಾಗಿ ಹಾಗೂ ಮರು ಅಂಕ ಎಣಿಕೆಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 14ರಿಂದ ಏಪ್ರಿಲ್ 20ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಯಾವುದೇ ಸಂದರ್ಭದಲ್ಲಿ, “ಕರ್ನಾಟಕ ಪ್ರಿ-ಯೂನಿವರ್ಸಿಟಿ ಕೋರ್ಸ್ ಎಸ್ ಎಲ್ ಪಿ ಇ 1997, 29 (ಎ)” ಪ್ರಕಾರ ಈ ಹಿಂದೆ ಗಳಿಸಿದ ಅಂಕಗಳನ್ನು ಮರುಮೌಲ್ಯಮಾಪನದ ನಂತರ ಮರುಸ್ಥಾಪಿಸಲು ಸಾಧ್ಯವಿಲ್ಲ. ಮರುಮೌಲ್ಯಮಾಪನದಲ್ಲಿ ಗಳಿಸಿದ ಅಂಕಗಳೇ ಪರೀಕ್ಷೆ-1ರ ಅಂಕಗಳೆಂದು ಪರಿಗಣಿಸಲಾಗುವುದು ಎಂದು ಹೇಳಿದೆ.
ಮರುಮೌಲ್ಯಮಾಪಕರ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ ಮತ್ತು ಈ ಬಗ್ಗೆ ಯಾವುದೇ ಮೇಲ್ಮನವಿಗಳಿಗೆ ಅವಕಾಶವಿಲ್ಲ. ಮರುಮೌಲ್ಪಮಾಪನದ ಮತ್ತು ಮರುಏಣಿಕೆಯ ಫಲಿತಾಂಶವನ್ನು ಮಂಡಳಿಯ https://kseab.karnataka.gov.in ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು. ಅಂಕಗಳ ಮರುಏಣಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಹೇಳಿದೆ.
ಸ್ಕ್ಯಾನ್ ಪ್ರತಿ ಹಾಗೂ ಮರುಮೌಲ್ಯಮಾಪನ ಶುಲ್ಕವನ್ನು ಪಾವತಿಸಲು ಆನ್‌ಲೈನ್ ನಲ್ಲಿ ಮತ್ತು ಆಫ್‌ಲೈನ್ ನಲ್ಲಿ ಚಲನ್ ಮುಖಾಂತರ ಪಾವತಿ ಸೌಲಭ್ಯ ಲಭ್ಯವಿದೆ.
ಸ್ಕ್ಯಾನ್ ಮಾಡಿದ ಪ್ರತಿಗಳಿಗೆ ಅರ್ಜಿ ಸಲ್ಲಿಸಿದ ನಂತರ, ಅಭ್ಯರ್ಥಿಗಳು ತಮ್ಮ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳ ಪಿಡಿಎಫ್ ಅನ್ನು ಸ್ವೀಕರಿಸುತ್ತಾರೆ. ನಂತರ ಅವರು ಮರುಪರಿಶೀಲಿಸಲು ಬಯಸುವ ಉತ್ತರಗಳನ್ನು ಶಾರ್ಟ್‌ಲಿಸ್ಟ್ ಮಾಡಬಹುದು. ಸ್ಕ್ಯಾನ್ಡ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ ₹530 ನಿಗದಿಪಡಿಸಲಾಗಿದೆ. ಪ್ರತಿ ವಿಷಯದ ಮರುಮೌಲ್ಯಮಾಪನಕ್ಕೆ ₹1,670 ನಿಗದಿ ಮಾಡಲಾಗಿದೆ.
ಇನ್ನು ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಸುವವರು ಮರುಮೌಲ್ಯಮಾಪನ ಫಲಿತಾಂಶಕ್ಕಾಗಿ ಕಾಯಬೇಕಿಲ್ಲ. ಮರು ಮೌಲ್ಯಮಾಪನದ ಮತ್ತು ಮರು ಎಣಿಕೆಯ ಫಲಿತಾಂಶವನ್ನು ಮಂಡಳಿಯು, kseab.karnataka.gov.inಎಂಬ ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ.
ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
- ಅಧಿಕೃತ ವೆಬ್‌ಸೈಟ್ kseab.karnataka.gov.in ಗೆ ಭೇಟಿ ನೀಡಿ
- ಸ್ಕ್ಯಾನ್ ಮಾಡಿದ ಪ್ರತಿಗಳ ಅರ್ಜಿ ನಮೂನೆಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ
- ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ
- ಫಾರ್ಮ್ ಜೊತೆಗೆ ಅರ್ಜಿ ಶುಲ್ಕವನ್ನು ಸಲ್ಲಿಸಿ
- ಭವಿಷ್ಯದ ಉಲ್ಲೇಖಕ್ಕಾಗಿ ಸ್ವೀಕೃತಿ ಫಾರ್ಮ್ ಡೌನ್‌ಲೋಡ್ ಮಾಡಿ
ದ್ವಿತೀಯ ಪಿಯುಸಿ ಫಲಿತಾಂಶ
ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 1,74,315 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೇ, ವಿಜ್ಞಾನ ವಿಭಾಗದಲ್ಲಿ 2,49,927 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ರಾಜ್ಯದಾದ್ಯಂತ ಮಾ.1ರಿಂದ ಮಾರ್ಚ್ 22ರವರೆಗೆ 1,124 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಪ್ರಸಕ್ತ ವರ್ಷ 6.9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3.3 ಲಕ್ಷ ವಿದ್ಯಾರ್ಥಿಗಳು, 3.6 ಲಕ್ಷ ವಿದ್ಯಾರ್ಥಿನಿಯರು ಹಾಜರಾಗಿದ್ದರು. ಮೂರು ಭಾಗಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಲಾಗಿತ್ತು.
ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿಯ ಬೈರಿದೇವರಕೊಪ್ಪದ ವಿದ್ಯಾನೀಕೇತನ ಕಾಲೇಜಿನ ವಿದ್ಯಾರ್ಥಿನಿ ವಿದ್ಯಾಲಕ್ಷ್ಮೀ ಅವರು 600ಕ್ಕೆ 598 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಮೂವರು ಟಾಪರ್ಗಳಾಗಿದ್ದಾರೆ. ಬೆಂಗಳೂರಿನ ಜಯನಗರದ ಎನ್‌ಎಮ್‌ಕೆಆರ್‌ವಿ ಕಾಲೇಜಿನ ಮೇಧಾ.ಡಿ, ವಿಜಯಪುರದ ಎಸ್ಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ವೇದಾಂತ್, ವಿಜಯನಗರ ಜಿಲ್ಲೆ ಕೊಟ್ಟೂರಿನ ಬಿ.ವಿ.ಕವಿತಾ 600ಕ್ಕೆ 596 ಅಂಕ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ
ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ವಿದ್ಯಾರ್ಥಿನಿ ಜ್ಞಾನವಿ 600ಕ್ಕೆ 597 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಬಂದಿದ್ದಾರೆ.
ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗುತ್ತಿದ್ದು, ವಿದ್ಯಾರ್ಥಿಗಳು ಲಾಗಿನ್ ಕ್ರೆಡೆನ್ಶಿಯಲ್ಸ್ ನಮೂದಿಸುವ ಮೂಲಕ ಪಿಯು ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಮತ್ತು pue.kar.nic ಮೂಲಕ ದ್ವಿತೀಯ ಪಿಯು ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ.