ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಶೇ. 81.15 ಮಂದಿ ಉತ್ತೀರ್ಣರಾಗಿದ್ದಾರೆ.
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಬುಧವಾರ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ 5,52,690 ಮಂದಿ ತೇರ್ಗಡೆಯಾಗಿದ್ದಾರೆ.
ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 1,74,315 ವಿದ್ಯಾರ್ಥಿಗಳು ಪಾಸಾಗಿದ್ದರೆ, ವಿಜ್ಞಾನ ವಿಭಾಗದಲ್ಲಿ 2,49,927 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ರಾಜ್ಯದಾದ್ಯಂತ ಸುಮಾರು 1,124 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿತ್ತು. ಸುಮಾರು 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ. 97ರಷ್ಟು ತೇರ್ಗಡೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ದೊರೆತಿದೆ. ಉಡುಪಿ ಜಿಲ್ಲೆ ಶೇ. 96.80 ರಷ್ಟು ಮಂದಿ ಉತ್ತೀರ್ಣರಾಗುವುದರೊಂದಿಗೆ ಎರಡನೇ ಸ್ಥಾನದಲ್ಲಿದೆ. ವಿಜಯಪುರ ಜಿಲ್ಲೆ ಶೇ 94.89ರಷ್ಟು ಫಲಿತಾಂಶದೊಂದಿಗೆ 3ನೇ ಸ್ಥಾನದಲ್ಲಿದೆ. ಫಲಿತಾಂಶದಲ್ಲಿ ಗದಗ ಜಿಲ್ಲೆಗೆ ಕೊನೆಯ ಸ್ಥಾನ ದೊರೆತಿದೆ.
ಹುಬ್ಬಳ್ಳಿಯ ವಿದ್ಯಾಲಕ್ಷ್ಮೀ 600ಕ್ಕೆ 598 ಅಂಕಗಳನ್ನು ಪಡೆದು ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಮೇಧಾ ಡಿ. 600ಕ್ಕೆ 596 ಅಂಕಗಳನ್ನು ಪಡೆದು ಟಾಪರ್ ಆಗಿದ್ದರೆ, ವಿಜಯಪುರದ ವೇದಾಂತ್ ಕೂಡ 600ಕ್ಕೆ 596 ಅಂಕ ಪಡೆದು ಟಾಪರ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ಜ್ಞಾನವಿ 600ಕ್ಕೆ 597 ಅಂಕ ಪಡೆದಿದ್ದಾರೆ.
ಬೆಳಗ್ಗೆ 11 ಗಂಟೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಮೊಬೈಲ್ ಮೂಲಕ ಇಲ್ಲವೇ ಇಂಟರ್‌ನೆಟ್ ಸೆಂಟರ್‌ಗಳು ಅಥವಾ ಮನೆಯಲ್ಲಿಯೇ ಕುಳಿತು ನೆಟ್‌ನಲ್ಲಿ ಫಲಿತಾಂಶ ವೀಕ್ಷಿಸಲು ಅವಕಾಶವಿದೆ.
ವಿದ್ಯಾರ್ಥಿಗಳು ಪಿಯು ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಮತ್ತು pue.kar.nic ಮೂಲಕ ದ್ವಿತೀಯ ಪಿಯು ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ.
ಈ ಸುದ್ದಿ ಓದಿದ್ದೀರಾ? ನಾಳೆ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ
ದ್ವಿತೀಯ ಪಿಯುಸಿ ಫಲಿತಾಂಶ ನೋಡಲು
- karresults.nic.in ಅಥವಾ pue.kar.nic ಅಂತಾ ಗೂಗಲ್‌ನಲ್ಲಿ ಸರ್ಚ್ ಮಾಡಿ ಪಿಯುಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಲಾಗಿನ್ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆಯೊಂದಿಗೆ ಯಾವ ವಿಭಾಗವೆಂದು ಕ್ಲಿಕ್ ಮಾಡ್ಬೇಕು (ವಿಜ್ಞಾನ, ವಾಣಿಜ್ಯ ಮತ್ತು ಕಲೆ ಆಯ್ಕೆ ಮಾಡಿಕೊಳ್ಳಿ)
- ಕ್ಲಿಕ್ ಮಾಡಿದಾಗ ನಿಮಗೆ ಫಲಿತಾಂಶವು ಸ್ಕ್ರೀನ್ ಮೇಲೆ ಕಾಣಿಸುತ್ತದೆ.
- ಈಗ ನೀವು ನಿಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ರಾಜ್ಯಾದ್ಯಂತ ಈ ಬಾರಿ 1,124 ಕೇಂದ್ರಗಳಲ್ಲಿ 6.98 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 2023-24 ಸಾಲಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ 80-20 ಮಾದರಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳು ಲಿಖಿತ ರೂಪದಲ್ಲಿ 80 ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ಇನ್ನು ಉಳಿದ 20 ಅಂಕಗಳು ಆಂತರಿಕ ಮೌಲ್ಯಮಾಪನದ ಮೂಲಕ ನೀಡಲಾಗುತ್ತದೆ.