ಬಿಜೆಪಿಗೆ ಬೇಷರತ್ ಬೆಂಬಲ ನೀಡುತ್ತಿರುವ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಉದ್ದೇಶವನ್ನು ಪ್ರಶ್ನಿಸಿರುವ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ “ಯಾವ ಫೈಲ್ ತೆರೆದಿದೆ” ಎಂದು ಪ್ರಶ್ನಿಸಿದ್ದಾರೆ.
ಉದ್ಧವ್ ಠಾಕ್ರೆ ಅವರ ಸೋದರ ಸಂಬಂಧಿ ರಾಜ್ ಠಾಕ್ರೆ ಅವರು ಮಂಗಳವಾರ ಬಿಜೆಪಿ, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿಯ ಆಡಳಿತ ಮೈತ್ರಿಕೂಟಕ್ಕೆ ಬೇಷರತ್ ಬೆಂಬಲವನ್ನು ನೀಡಿದರು. ಈ ನಡೆಯನ್ನು ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
“ಈಗ ದಿಢೀರನೆ ಎಂತಹ ಪವಾಡ ನಡೆದಿದೆ, ಇದನ್ನು ಅವರಿಂದಲೇ (ರಾಜ್ ಠಾಕ್ರೆ) ಕೇಳಬೇಕು. ನೀವು ಏಕಾಏಕಿ ತಿರುಗಿ ಮಹಾರಾಷ್ಟ್ರದ ಶತ್ರುಗಳನ್ನು ಬೆಂಬಲಿಸುತ್ತಿದ್ದೀರಿ. ಸಾರ್ವಜನಿಕರಿಗೆ ಏನು ಹೇಳುತ್ತೀರಿ? ಇದರ ಹಿಂದಿನ ಕಾರಣವೇನು? ಯಾವ ಫೈಲ್ ತೆರೆಯಲಾಗಿದೆ?” ಎಂದು ಸಂಜಯ್ ರಾವತ್ ಕೇಳಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿಗೆ ಈಗಲೂ ಕೇಜ್ರಿವಾಲ್ ಬಹಳ ಅಪಾಯಕಾರಿ: ಸಂಸದ ಸಂಜಯ್ ರಾವತ್
ಮಂಗಳವಾರ ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್ ಠಾಕ್ರೆ ಅವರು ತಮ್ಮ ಪಕ್ಷದ ಬೆಂಬಲವು ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎ ಮೈತ್ರಿಕೂಟಕ್ಕೆ ಮಾತ್ರ ಎಂದು ಹೇಳಿದರು.
“ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಬಿಜೆಪಿ-ಶಿವಸೇನೆ-ಎನ್‌ಸಿಪಿ ಮಹಾಮೈತ್ರಿಕೂಟವನ್ನು ಬೇಷರತ್ತಾಗಿ ಬೆಂಬಲಿಸುತ್ತದೆ. ಈ ಬೆಂಬಲವು ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎ ಮೈತ್ರಿಕೂಟಕ್ಕೆ ಮಾತ್ರ. ಈಗ ಎಲ್ಲರೂ ಚುನಾವಣೆಗೆ ಸಿದ್ಧರಾಗಬೇಕು” ಎಂದು ರಾಜ್ ಠಾಕ್ರೆ ಹೇಳಿದರು.
1990ರ ದಶಕದಿಂದಲೂ ಬಿಜೆಪಿ ಅವಿಭಜಿತ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಾಗಿನಿಂದ ಬಿಜೆಪಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದೆ, ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಬೇಕು ಎಂದು ಮೊದಲು ಹೇಳಿದ್ದು ನಾನೇ ಎಂದು ಕೂಡಾ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಪ್ರಧಾನಿ ಬಗ್ಗೆ ಆಕ್ಷೇಪಾರ್ಹ ಲೇಖನ ಆರೋಪ: ಸಂಸದ ಸಂಜಯ್ ರಾವತ್ ವಿರುದ್ಧ ದೇಶದ್ರೋಹ ಪ್ರಕರಣ!
“1990 ರ ಸುಮಾರಿಗೆ ಶಿವಸೇನೆ ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ನಂತರ ಬಿಜೆಪಿಯೊಂದಿಗೆ ನನ್ನ ನಿಕಟತೆ ಹೆಚ್ಚಾಯಿತು. ನಾನು ಗೋಪಿನಾಥ್ ಮುಂಡೆ, ಪ್ರಮೋದ್ ಮಹಾಜನ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೆ. ನಾನು ಗುಜರಾತ್‌ಗೆ ಹೋಗಿ ನರೇಂದ್ರ ಮೋದಿ (ಗುಜರಾತ್ ಮುಖ್ಯಮಂತ್ರಿ) ಅವರೊಂದಿಗೆ ಸಂಬಂಧವನ್ನು ಬೆಳೆಸಿಕೊಂಡೆ” ಎಂದಿದ್ದಾರೆ.
“ಆರ್ಟಿಕಲ್ 370 ಅನ್ನು ಬೆಂಬಲಿಸುವ ಮೊದಲ ಟ್ವೀಟ್ ನನ್ನದು. ನಾನು ಸಿಎಎ ಎನ್‌ಆರ್‌ಸಿಯನ್ನು ಬೆಂಬಲಿಸುವ ರ್‍ಯಾಲಿಗೆ ಹೋಗುತ್ತಿದ್ದೇನೆ. ನಾನು ಎಂದಿಗೂ ವೈಯಕ್ತಿಕ ಕಾಮೆಂಟ್‌ಗಳನ್ನು ಮಾಡಿಲ್ಲ. ಉದ್ಧವ್ ಠಾಕ್ರೆ ಮತ್ತು ಸಂಜಯ್ ರಾವತ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕಾಮೆಂಟ್ ಮಾಡುತ್ತಿರುವ ರೀತಿಯಲ್ಲಿ ನಾನು ಕಾಮೆಂಟ್ ಮಾಡಿಲ್ಲ” ಎಂದು ರಾಜ್ ಠಾಕ್ರೆ ಹೇಳಿದರು.
“ಹುಲಿ ಕುರಿಮರಿಯಾಯಿತು”
“ರಾಜ್ ಠಾಕ್ರೆ ಅವರು ದೆಹಲಿಗೆ ಭೇಟಿ ನೀಡಿದಾಗ ಅವರು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬುವುದು ಸ್ಪಷ್ಟವಾಗಿದೆ. ಆದರೆ ಹುಲಿ ಇಷ್ಟು ಬೇಗ ಕುರಿಮರಿಯಂತಾಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ರಾಜ್ ಠಾಕ್ರೆಯಂತಹ ಹೋರಾಟಗಾರ ಗುಲಾಮನಾಗುತ್ತಾನೆಯೇ?” ಎಂದು ಕಾಂಗ್ರೆಸ್ ಮುಖಂಡ ವಿಜಯ ವಾಡೆತ್ತಿವಾರ್ ಲೇವಡಿ ಮಾಡಿದ್ದಾರೆ.