ಸಾರ್ವಜನಿಕ ನೆನಪಿನ ಆಯಸ್ಸು ಕಡಿಮೆ. ಈ ಮರೆವನ್ನೇ ಬಳಸಿಕೊಂಡ ಮೋದಿ ಸರ್ಕಾರ ಬೇಕಾಬಿಟ್ಟಿ ಸುಳ್ಳುಗಳನ್ನು ಹೇಳುತ್ತಾ ಮತ್ತೆ ಓಟು ಕೇಳುತ್ತಿದೆ. ಅದರಲ್ಲೂ ನಿನ್ನೆ-ಮೊನ್ನೆಯಿಂದ ಅದು ಹೇಳುತ್ತಿರುವ ಮಣಿಪುರ, ಚೀನಾ ಅತಿಕ್ರಮಣ ಮತ್ತು ಕೋವಿಡ್ ಬಗೆಗಿನ ಮೂರು ಸುಳ್ಳುಗಳು ಅದರ ಕ್ರೌರ್ಯ, ಬೇಜವಾಬ್ದಾರಿತನ ಮತ್ತು ಜನದ್ರೋಹಕ್ಕೆ ಸಾಕ್ಷಿಯಾಗಿವೆ…
ಸುಳ್ಳು 1: ಗೃಹಮಂತ್ರಿಯವರ ಸಕಾಲಿಕ ಮಧ್ಯ ಪ್ರವೇಶದಿಂದ ಮಣಿಪುರ ಸುಧಾರಿಸಿದೆ- ಮೋದಿ
ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ. 2023ರ ಮೇ 3ರಿಂದಲೇ ಮಣಿಪುರ ಹತ್ತಿ ಉರಿಯುತ್ತಿದ್ದರೂ ಕರ್ನಾಟಕದ ಚುನಾವಣಾ ಪ್ರಚಾರಕ್ಕಾಗಿ ಮೋದಿ ಮತ್ತು ಅಮಿತ್ ಶಾ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಿದ್ದರು. ಮೇ ಕೊನೆಗೆ ಗೃಹಮಂತ್ರಿ ಶಾ ಮಣಿಪುರಕ್ಕೆ ಮೂರು ದಿನಗಳ ಭೇಟಿ ಕೊಟ್ಟು ಪರೋಕ್ಷವಾಗಿ ಅಲ್ಲಿನ ಬಿಜೆಪಿ ಸರ್ಕಾರದ ಮೈತಿ ಪರ – ಕುಕಿ ವಿರೋಧಿ ನೀತಿಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟ ನಂತರ ಮೈತಿ ಉಗ್ರಗಾಮಿಗಳು ಕುಕಿಗಳ ಮೇಲೆ ನಡೆಸುತ್ತಿರುವ ಅತ್ಯಾಚಾರ ಇನ್ನೂ ಹೆಚ್ಚಾಯಿತು.
ಇದರಿಂದಾಗಿ ಅಲ್ಲಿ ಈವರೆಗೆ 200ಕ್ಕೂ ಹೆಚ್ಚು ಹೆಣಗಳು ಉರುಳಿವೆ. ಈ ಬಗ್ಗೆ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ತರುವವರೆಗೆ ಪ್ರಧಾನಿ ಮೋದಿ ಮಣಿಪುರದ ಬಗ್ಗೆ ಬಾಯಿ ಬಿಚ್ಚಿರಲಿಲ್ಲ.
ಬಂಗಾಳದಲ್ಲಿ ಸಂದೇಶ್ ಖಾಲಿಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರದ ದೂರು ಇರುವುದನ್ನೇ ಬಳಸಿಕೊಂಡು ಸರ್ಕಾರದ ವಜಾ ಆಗಬೇಕೆಂದು ಆಗ್ರಹಿಸುವ ಈ ಬಿಜೆಪಿ ಪ್ರಧಾನಿ, ಮಣಿಪುರದ ಬಿಕ್ಕಟ್ಟಿಗೆ ನೇರ ಕಾರಣವಾಗಿರುವ ಬಿಜೆಪಿ ಮುಖ್ಯಮಂತ್ರಿ ಬಿರೇನ್ ಸಿಂಗರನ್ನು ರಕ್ಷಿಸಿಕೊಂಡೇ ಬಂದಿದೆ. ಅವರು ಮೈತಿ ಉಗ್ರಗಾಮಿಗಳನ್ನು ಪೋಷಿಸುತ್ತಿದ್ದಾರೆ.
ಈ ಕುಮ್ಮಕ್ಕಿನಿಂದ ಮೈತಿ ಉಗ್ರರು ಈಗ ಮಣಿಪುರದ ಶಾಸಕರಿಗೆ ಪ್ರತ್ಯೇಕ ಪ್ರಮಾಣವಚನ ಬೋಧಿಸುತ್ತಿದ್ದಾರೆ. ಸಂವಿಧಾನಕ್ಕಿಂತ ಮೈತಿ ಸಂಘಟನೆಯ ಧ್ಯೇಯಕ್ಕೆ ತಾವು ಬದ್ಧರಾಗಿರುತ್ತೇವೆಂದು ಅಲ್ಲಿನ ಬಿಜೆಪಿ ಶಾಸಕರು ಒಪ್ಪಿಕೊಂಡಿದ್ದಾರೆ. ಈಗ ಮೈತಿ ಉಗ್ರರು ಸೇನಾಧಿಕಾರಿಗಳನ್ನು, ಪೊಲೀಸ್ ಅಧಿಕಾರಿಗಳನ್ನು ಅಪಹರಿಸಿ ಆದೇಶ ಕೊಡುತ್ತಿದ್ದಾರೆ.
ಅಮಿತ್ ಶಾ ಭೇಟಿಯಾದ ಮೇಲೆ ಮಣಿಪುರ ಕಳೆದ ಎಂಟು ತಿಂಗಳಲ್ಲಿ ಇನ್ನಷ್ಟು ಅರಾಜಕಗೊಂಡಿದೆ. ನಿರಾಶ್ರಿತ ಶಿಬಿರಗಳಲ್ಲಿ ಕುಕಿ ಮತ್ತು ಮೈತಿ ನಿರಾಶ್ರಿತರು ಅನಾಥ ಸಂಕಟಗಳನ್ನು ಅನುಭವಿಸುತ್ತಿದ್ದಾರೆ. ಇವೆಲ್ಲಕ್ಕೂ ಮೋದಿ ಸರ್ಕಾರದ ನೇರ ಬೆಂಬಲವಿದೆ. ಆದರೂ ಪ್ರಧಾನಿ ಮೋದಿಯವರು ಕಿಂಚಿತ್ತೂ ಲಜ್ಜೆಯಿಲ್ಲದೆ ಮಣಿಪುರದ ಪರಿಸ್ಥಿತಿ ಸುಧಾರಿಸಿದೆ ಎಂದು ಕೊಚ್ಚಿಕೊಳ್ಳುತ್ತಿದ್ದಾರೆ.
ಇದು ಕನಿಷ್ಠ ಮನುಷ್ಯತ್ವ ಕನಿಷ್ಠ ಜವಾಬ್ದಾರಿ ಇರುವ ಪಕ್ಷ ಮತ್ತು ನಾಯಕ ಕೊಡಬಹುದಾದ ಹೇಳಿಕೆಯೇ
ಸುಳ್ಳು 2: ಮೋದಿಯವರು ಒಂದು ಚದರಡಿ ಜಮೀನನ್ನು ಚೀನಾಗೆ ಬಿಟ್ಟುಕೊಟ್ಟಿಲ್ಲ- ಅಮಿತ್ ಶಾ
ನಿಜ ಭಾರತ ಚೀನಾಗೆ ಮೋದಿ ಅವಧಿಯಲ್ಲಿ ಬಿಟ್ಟುಕೊಟ್ಟಿರುವುದು ಒಂದು ಚದರಡಿಯಷ್ಟು ಭೂ ಭಾಗವಲ್ಲ, ಬದಲಿಗೆ ಮೋದಿ ಸರ್ಕಾರ ಚೀನಾಗೆ ಬಿಟ್ಟುಕೊಟ್ಟಿರುವುದು 4000 ಚದರ ಕಿಲೋ ಮೀಟರುಗಳಷ್ಟು ಭಾರತೀಯ ಭೂ ಪ್ರದೇಶವನ್ನು.
2020ರ ಜೂನ್‌ನಲ್ಲಿ ಲಡಾಕ್‌ನ ಗಾಲ್ವಾನ್ ಪ್ರದೇಶದಲ್ಲಿ ಚೀನಾ ಮತ್ತು ಭಾರತ ಸೈನಿಕರ ನಡುವೆ ಘರ್ಷಣೆಯಾಗಿ ಭಾರತದ 20 ಸೈನಿಕರು ಹತರಾದದ್ದು ನೆನಪಿರಬೇಕಿಲ್ಲವೇ? ಆ ಘರ್ಷಣೆಯ ನಂತರ ಚೀನಾ ಭಾರತದ ಭೂಭಾಗವಾಗಿದ್ದ ಪ್ರದೇಶದಲ್ಲಿ ಚೀನಾ ಬಂದು ಕೂತಿದೆ. ಭಾರತ ಇನ್ನಷ್ಟು ಒಳ ಸರಿದಿದೆ. ಇದರಿಂದ ಈಗ ಭಾರತದ 4000 ಚದರ ಕಿ.ಮೀ. ಪ್ರದೇಶವನ್ನು ಆಕ್ರಮಿಸಿದಂತಾಗಿದೆ. ಈ ಬಗ್ಗೆ 2020ರ ಸೆಪ್ಟೆಂಬರ್‍ನಿಂದ ಈವರೆಗೆ 21 ಬಾರಿ ಸೇನಾಧಿಕಾರಿ ಮಟ್ಟದ ಮಾತುಕತೆಯಾಗಿದ್ದರೂ, ಮೋದಿ ಸರ್ಕಾರ ಭಾರತ ಆಕ್ರಮಿತ ಭೂ ಭಾಗವನ್ನು ವಾಪಸ್ ಕೇಳುವ ಬೇಡಿಕೆಯನ್ನೇ ಕೈಬಿಟ್ಟಿದೆ.
2018ರಲ್ಲಿ ಭೂತಾನ್ ಗಡಿಯ ಡೋಕ್ಲಾಮ್ ಸಂಘರ್ಷದ ನಂತರ ಚೀನಾ ಆ ಸರಹದ್ದಿನಲ್ಲಿ ಎಲ್ಲಾ ಔಪಚಾರಿಕ ಸಂಪ್ರದಾಯಗಳನ್ನು ಉಲ್ಲಂಘಿಸಿ ಶಾಶ್ವತ ಮತ್ತು ಸುಸಜ್ಜಿತ ಸೇನಾಗ್ರಾಮಗಳನ್ನು ನಿರ್ಮಿಸಿಕೊಂಡಿದೆ.
ಮೋದಿ ನೇತೃತ್ವದಲ್ಲಿ ಭಾರತ ಅಮೇರಿಕಾದ ಚೀನಾ ವಿರೋಧಿ ವ್ಯೂಹತಂತ್ರಗಳಿಗೆ ಸಾಥ್ ಕೊಡುತ್ತಿದ್ದಂತೆ ಚೀನಾ ಭಾರತದ ಗಡಿಗಳಲ್ಲಿ ತನ್ನ ವಿಸ್ತರಣೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದೆ. ಮೊನ್ನೆ ಅರುಣಾಚಲ ಪ್ರದೇಶದ 50 ಪ್ರದೇಶಗಳಿಗೆ ಚೀನೀ ಹೆಸರನ್ನು ಇಟ್ಟಿದೆ.
ಗಾಲ್ವಾನ್ ಸಂಘರ್ಷವಾದ ಮೇಲೆ ಚೀನಾದ ಜೊತೆ ವಹಿವಾಟು ನಿಲ್ಲಿಸುತ್ತೇವೆ ಎಂದೆಲ್ಲಾ ಮೋದಿ ಸರ್ಕಾರ ವೀರಾವೇಷದ ಘೋಷಣೆ ಮಾಡಿದ್ದರೂ 2020-24ರ ನಡುವೆ ಭಾರತವು ಚೀನಾದಿಂದ ಮಾಡಿಕೊಳ್ಳುತ್ತಿದ್ದ ಆಮದು ಮೂರುಪಟ್ಟು ಹೆಚ್ಚಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿದಿನ ಪಾಕಿಸ್ತಾನಾದ ಜಪ ಮಾಡುವ ಪ್ರಧಾನಿ ಮೋದಿ 2020ರಿಂದ ಚೀನಾ ಹೆಸರನ್ನು ಕೂಡ ಎತ್ತದಂತೆ ನಿಲ್ಲಿಸಿದ್ದಾರೆ.
ಹೀಗೆ ಮೋದಿ ಸರ್ಕಾರ ತನ್ನ ತಪ್ಪು ಆದ್ಯತೆ ಮತ್ತು ತಪ್ಪು ನೀತಿಗಳಿಂದ ಭಾರತದ ಮಾನವನ್ನು, ಭೂ ಭಾಗವನ್ನು ಕಳೆಯುತ್ತಿದ್ದರೂ, ಅಮಿತ್ ಶಾ ಚೀನಾಗೆ ಒಂದಿಂಚು ಭೂಮಿಯನ್ನು ಕೊಟ್ಟಿಲ್ಲವೆಂದು ಹೇಳುತ್ತಿರುವುದಕ್ಕೆ ಕಾರಣ ಅವರು ಭಾರತೀಯರನ್ನು ದಡ್ಡರು ಮತ್ತು ಮುಠ್ಠಾಳರು ಎಂದು ಭಾವಿಸಿರುವುದು.
ಈ ಚುನಾವಣೆಯಲ್ಲಿ ಭಾರತೀಯರು ಹೆದ್ದಾರಿ ಎಂಬುದಕ್ಕೆ ಉತ್ತರ ನೀಡಬೇಕಿದೆ.
ಸುಳ್ಳು 3: ಬಿಜೆಪಿ ಸರ್ಕಾರ ಭಾರತವನ್ನು ಕೋವಿಡ್‌ನಿಂದ ಬಚಾವು ಮಾಡಿತು- ಮೋದಿ
ಪ್ರಾಯಶಃ ಇಂಥ ಪಶ್ಚಾತ್ತಾಪರಹಿತ, ಅಮಾನವೀಯ ಹೇಳಿಕೆಯನ್ನು ಬಿಜೆಪಿಯಂಥ ಲಜ್ಜೆಗೇಡಿ ಪಕ್ಷ ಮಾತ್ರ ಕೊಡಲು ಸಾಧ್ಯ.
ಭಾರತದಲ್ಲಿ ಕೋವಿಡ್‌ನ ಮೊದಲ ಮತ್ತು ಎರಡನೇ ಅಲೆಗಳಿಂದಾಗಿ ಭಾರತದಲ್ಲಿ 40 ಲಕ್ಷ ಭಾರತೀಯರು ಮೃತರಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅಮೇರಿಕಾದಲ್ಲಿ ಸತ್ತದ್ದು 11 ಲಕ್ಷ. ಈ ದುರಂತಕ್ಕೆ ನೇರ ಕಾರಣ ಮೋದಿ ಸರ್ಕಾರ.
ಮೊದಲನೇ ಅಲೆಯಲ್ಲಿ ಜನರ ಆರೋಗ್ಯ ರಕ್ಷಣೆಗಿಂತ ಹೆಚ್ಚಾಗಿ ಲಾಕ್ ಡೌನ್‌ನಂತಹ ಕ್ರೌರ್ಯಗಳಿಗೆ ಮುಂದಾದ ಸರ್ಕಾರ ಕೋವಿಡ್ ಸಂದರ್ಭವನ್ನೂ ಕೂಡ ಮೌಢ್ಯ ಹಾಗೂ ಕೋಮುವಾದವನ್ನ ಹೆಚ್ಚಿಸಲು ಬಳಸಿಕೊಂಡಿತು.
ಎರಡನೇ ಅಲೆಯು ಅಪ್ಪಳಿಸುವ ಎಚ್ಚರವನ್ನು ವಿಜ್ಞಾನಿಗಳು ನಾಲ್ಕಾರು ತಿಂಗಳ ಮುಂಚೆಯೇ ಕೊಟ್ಟಿದ್ದರೂ ಅದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಪ್ರಧಾನಿ ಮೋದಿ 2021ರ ಜನವರಿಯಲ್ಲಿ WEF ಸಭೆಯಲ್ಲಿ ಭಾರತ ಕೋವಿಡ್ ವಿರುದ್ಧ ಜಯ ಸಾಧಿಸಿದೆ ಎಂದು ಕೊಚ್ಚಿಕೊಂಡಿತು.
ಕೋವಿಡ್ ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದರೂ ಚುನಾವಣೆಯ ದೃಷ್ಟಿಯಿಂದ ಪ್ರಚಾರ ಸಭೆಗಳಿಗೂ ಹಾಗೂ ಹರಿದ್ವಾರದಲ್ಲಿ ಲಕ್ಷಾಂತರ ಜನ ಸೇರುವ ಕುಂಭಮೇಳಕ್ಕೂ ಅವಕಾಶ ಮಾಡಿಕೊಟ್ಟು ಕೋವಿಡ್ ಇನ್ನಷ್ಟು ವೇಗವಾಗಿ ಹರಡಲು ಅವಕಾಶ ಮಾಡಿಕೊಟ್ಟಿತು. ಕೆಲವು ಬಿಜೆಪಿ ನಾಯಕರು ದೇವರ ಆಶೀರ್ವಾದ ಭಾರತದ ಮೇಲೆ ಇರುವುದರಿಂದ ಕೋವಿಡ್ ಹಬ್ಬುವುದಿಲ್ಲ ಎಂಬ ಮೂರ್ಖ ಹೇಳಿಕೆ ಕೊಟ್ಟು ಗೋ ಕೊರೋನ ಗೋ ಎಂದು ಜಾಗಟೆ ಬಾರಿಸುವುದನ್ನು ಮುಂದುವರೆಸಿದರು. ಈ ಮಧ್ಯೆ ಆಕ್ಸಿಜನ್ ಸಿಲಿಂಡರ್‍ಗಳೂ ಕೊಡ ದಕ್ಕದೆ ದೇಶದೆಲ್ಲೆಡೆ ಜನರು ಹುಳಗಳಂತೆ ಸಾಯಲಾರಂಭಿಸಿದ್ದರು.
ಆ ವೇಳೆಗೆ ವ್ಯಾಕ್ಸಿನ್ ಮಾರುಕಟ್ಟೆಗೆ ಬಂದಿತ್ತು. 2021ರ ಬಜೆಟ್ಟಿನಲ್ಲಿ ಉಚಿತ ವ್ಯಾಕ್ಸಿನ್‌ಗೆಂದು 35,000 ಕೋಟಿ ರೂ. ಎತ್ತಿಟ್ಟಿದ್ದರೂ, PMCARES ಮೂಲಕ ಹತ್ತಾರು ಸಾವಿರ ಕೋಟಿ ಸುಲಿಗೆ ಸಂಗ್ರಹಿಸಿದ್ದರೂ ಮೋದಿ ಸರ್ಕಾರ ಭಾರತದ ಜನರೆಲ್ಲರಿಗೂ ವ್ಯಾಕ್ಸಿನ್ ಕೊಡಲಾಗುವುದಿಲ್ಲವೆಂದೂ, ಕೇವಲ ವೃದ್ಧರಿಗೆ ಮತ್ತು ಕೋವಿಡ್ ಯೋಧರಿಗೆ ಮಾತ್ರ ಕೊಡಲಾಗುವುದೆಂದು ಘೋಷಿಸಿತು. 18-44 ವಯಸ್ಸಿನ ಜನತೆ ಖಾಸಗಿ ಆಸ್ಪತ್ರೆಗಳಿಂದ ಕೊಂಡುಕೊಳ್ಳಬೇಕೆಂದು ಆದೇಶಿಸಿತು. ಕೋವಿಶೀಲ್ಡ್‌ಗೆ 300 ರೂ., ಕೊವ್ಯಾಕ್ಸಿನ್‌ಗೆ 1,200 ರೂ. ಮತ್ತು ಸ್ಪುಟ್ನಿಕ್‌ಗೆ 1,000 ರೂ. ನಿಗದಿ ಮಾಡಿತ್ತು.
ಆದರೆ 2021ರ ಜೂನ್ 2ರಂದು ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಸರ್ಕಾರದ ಈ ನೀತಿ ತಾರತಮ್ಯ ಮತ್ತು ಅತಾರ್ಕಿಕ ಎಂದು ಘೋಷಿಸಿತು. ಸರ್ಕಾರ ಬಜೆಟ್ಟಿನಲ್ಲಿ 35 ಸಾವಿರ ಕೋಟಿ ಎತ್ತಿಟ್ಟಿದ್ದರೂ ಉಚಿತ ವ್ಯಾಕ್ಸಿನ್ ಏಕೆ ಕೊಡಲಾಗುತ್ತಿಲ್ಲವೆಂದು ಪ್ರಶ್ನಿಸಿತು. ಮತ್ತು ಎರಡು ವಾರದೊಳಗೆ 35 ಸಾವಿರ ಕೋಟು ಖರ್ಚು ಮಾಡಿರುವ ವಿವರಗಳನ್ನು ಕೋರ್ಟಿಗೆ ಸಲ್ಲಿಸಬೇಕೆಂದು ಆದೇಶಿಸಿತು. ಸುಪ್ರೀಂ ತೀರ್ಪು ಪಾಲಿಸಿದರೆ ತನ್ನ ಜನದ್ರೋಹ ಬಯಲಾಗುವ ಭಯದಿಂದ ಜೂನ್ 7ಕ್ಕೆ ಮೋದಿ ಸರ್ಕಾರ ಅನಿವಾರ್ಯವಾಗಿ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ಕೊಡವ ನೀತಿಯನ್ನು ಘೋಷಿಸಿತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಲಡಾಖಿನ ಹೋರಾಟವೂ ಮತ್ತು ಮೋದಿಯ ಮೊಂಡಾಟವೂ
ಹೀಗೆ ಕೋವಿಡ್‌ನಲ್ಲಿ ಭಾರತವು ಅನುಭವಿಸಿದ ಬವಣೆಗಳಿಗೆ, ಸಾವು-ನೋವುಗಳಿಗೆ ಮೋದಿ ಸರ್ಕಾರವೇ ನೇರ ಕಾರಣ. ಮೋದಿ ಸರ್ಕಾರ ಭಾರತವನ್ನು ರಕ್ಷಿಸಲಿಲ್ಲ, ಸಂಕಟಕ್ಕೆ-ಸಾವು ನೋವುಗಳಿಗೆ ದೂಡಿತು. ಆದರೂ ಕಿಂಚಿತ್ತೂ ಪಶ್ಚಾತಾಪವಿಲ್ಲದೇ ಕೋವಿಡ್‌ನಿಂದ ಭಾರತವನ್ನು ರಕ್ಷಿಸಿದ್ದು ಮೋದಿ ಸರ್ಕಾರ ಎಂದು ಬಹಿರಂಗವಾಗಿ ಸುಳ್ಳು ಹೇಳುವ ಆತ್ಮಸಾಕ್ಷಿ ಇಲ್ಲದ ಪಕ್ಷ ಬಿಜೆಪಿ ಮಾತ್ರ.
ಮನಸ್ಸಾಕ್ಷಿಯಿಲ್ಲದ ಇಂಥ ಕ್ರೂರ ಪ್ರಧಾನಿ, ಜನದ್ರೋಹಿ ಕಾರ್ಪೊರೇಟ್ ವಾದಿ, ಕೋಮುವಾದಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆ ಎಂಬುದನ್ನು ಭಾರತದ ಜನರು ಈಗ ತೀರ್ಮಾನಿಸಬೇಕಿದೆ.
-ಶಿವಸುಂದರ್