ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ- ಬಿಲ್ಲವರನ್ನು ಬಳಸಿಕೊಳ್ಳುವ ಹಿಂದುತ್ವ ರಾಜಕಾರಣಕ್ಕಂತೂ ಸ್ಪಷ್ಟವಾಗಿ ಜಾತಿ ಗೊತ್ತಾಗುತ್ತದೆ. ಹಾಗಾಗಿ ಹಿಂದುತ್ವದಲ್ಲಿ ಬದುಕಿದ್ದಾಗಲೂ ಬಂಟ-ಬಿಲ್ಲವರಿಗೆ ಒಂದೇ ರೀತಿಯ ಪ್ರಾತಿನಿಧ್ಯ ಸಿಗುವುದಿಲ್ಲ. ಸತ್ತ ಬಳಿಕವೂ ಬಂಟರಿಗೆ ಸಿಗುವ ಮರ್ಯಾದೆಯೇ ಬೇರೆ, ಬಿಲ್ಲವ ಹಿಂದುತ್ವವಾದಿಗೆ ಸಿಗುವ ಮರ್ಯಾದೆಯೇ ಬೇರೆ
“ಜಿಹಾದಿಗಳ ತಲವಾರಿಗೆ ಸುಖಾನಂದ ‘ಬಂಟ’ಎನ್ನುವುದು ಮುಖ್ಯವಾಗಲಿಲ್ಲ! ಪೊಳಲಿ ಅನಂತು ‘ಬಿಲ್ಲವ’ ಎನ್ನುವುದು ನೆನಪಾಗಿರಲಿಲ್ಲ! ಹಿಂದೂಗಳು ಜಾತಿ ಹೆಸರಲ್ಲಿ ಒಡೆದರೆ ಮತೀಯ ತಲವಾರುಗಳು ಮತ್ತೆ ಝಳಪಿಸಬಹುದು, ಎಚ್ಚರ!” ಎಂದು ಹಿಂದುತ್ವವಾದಿಗಳು ಸುಖಾನಂದ ಶೆಟ್ಟಿ ಮತ್ತು ಪೊಳಲಿ ಅನಂತು ಅವರ ಫೋಟೋ ಹಾಕಿ ವೈರಲ್ ಮಾಡುತ್ತಿದ್ದಾರೆ.
ತಲವಾರು ಹಿಡಿದು/ಹಿಡಿಸಿ ತಲವಾರಿಗೇ ಬಲಿಯಾದ ಬಂಟ ಸುಖಾನಂದ ಶೆಟ್ಟಿ ಮತ್ತು ಬಿಲ್ಲವ ಪೊಳಲಿ ಅನಂತು ಬದುಕು ಮತ್ತು ಸಾವು ಒಂದೆನಾ ? ಇಬ್ಬರ ಬದುಕು ಮತ್ತು ಮರಣಕ್ಕೆ ಒಂದೇ ನ್ಯಾಯ, ಒಂದೇ ಗೌರವ ಸಿಕ್ಕಿತ್ತಾ ?
ಸುಖಾನಂದ ಶೆಟ್ಟಿ ಬದುಕಿದ್ದಾಗ ತಲವಾರು ಹಿಡಿಯಲಿಲ್ಲ. ಪ್ರಚೋದನಕಾರಿ ಭಾಷಣ ಮತ್ತು ಸಂಘಟನೆಯ ಮೂಲಕ ಹಿಂದುಳಿದ ಬಿಲ್ಲವರು ಮತ್ತಿತ್ತರ ಸಮುದಾಯಗಳ ಯುವಕರ ಕೈಯ್ಯಲ್ಲಿ ತಲವಾರು ಹಿಡಿಸಿದರು. ಆ ಮೂಲಕ ಸುಖಾನಂದ ಶೆಟ್ಟಿ ಬಿಜೆಪಿಯ ನಾಯಕರಾದರು. ಮೂಲ್ಕಿ, ಮೂಡಬಿದ್ರೆಗೆ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಯೂ ಆಗಿದ್ದರು. ಬದುಕಿದ್ದರೆ ಎಂಎಲ್ಎ ಆಗಿರುತ್ತಿದ್ದರು. ಹಿಂದುತ್ವಕ್ಕಾಗಿ ತಲವಾರು ಹಿಡಿದ ಪೊಳಲಿ ಅನಂತು ಹಿಂದುತ್ವದ ನಾಯಕ ಆಗಲೇ ಇಲ್ಲ. ಕೇವಲ ರೌಡಿಯಾದರು. ಹಲವು ಠಾಣೆಗಳಲ್ಲಿ ರೌಡಿ ಶೀಟರ್ ಎನ್ನಿಸಿಕೊಂಡರು. ಎಂಎಲ್ಎ ಆಗುವುದು ಬಿಡಿ, ಕನಿಷ್ಠ ಪೊಳಲಿಯ ಗ್ರಾಮ ಪಂಚಾಯತ್ ಸದಸ್ಯನೂ ಆಗಲಿಲ್ಲ.
ಸುಖಾನಂದ ಶೆಟ್ಟಿ ಬದುಕಿದ್ದಾಗ ಕುಳಾಯಿಯ ಮಾರ್ಬಲ್ ಅಂಗಡಿಯ ಪಾಲುದಾರ ಆಗಿದ್ದರು. ಹಿಂದುತ್ವದ ಭಾಷಣ, ಸಂಘಟನೆಗಳನ್ನು ಮಾಡುತ್ತಲೇ ಯಶಸ್ವಿ ಉದ್ಯಮಿಯಾಗಿದ್ದರು. ಅವರು ಬದುಕಿದ್ದಾಗ ಕ್ವಾಲೀಸ್ ಸೇರಿದಂತೆ ಐಷಾರಾಮಿ ಕಾರುಗಳನ್ನು ಹೊಂದಿದ್ದರು. ಸುಖಾನಂದ ಶೆಟ್ಟಿ ಕೊಲೆಯಾಗಿದ್ದು ಕೂಡಾ ಮಾರ್ಬಲ್ ಅಂಗಡಿಯ ಎದುರೇ ! ಪೊಳಲಿ ಅನಂತು ಬಳಿ ಉದ್ಯಮ ಬಿಡಿ, ಕೊಲೆಯಾಗುವ ದಿನಗಳಲ್ಲಿ ಬೀಡಿ ಸೇದಲೂ ದುಡ್ಡಿರಲಿಲ್ಲ. ಹಿಂದುತ್ವಕ್ಕಾಗಿ ಕೇಸು ಜಡಿಸಿಕೊಂಡು ನ್ಯಾಯಾಲಯಕ್ಕೆ ಒಬ್ಬನೇ ಬರುತ್ತಿದ್ದರು. ಕಾರು ಬಿಡಿ, ರಿಕ್ಷಾಕ್ಕೆ ಬಾಡಿಗೆ ನೀಡಲೂ ದುಡ್ಡಿರಲಿಲ್ಲ. ಹಾಗಾಗಿ ಬಸ್ ನಲ್ಲಿ ಹೋಗಿ ಪೊಳಲಿಯಲ್ಲಿ ಇಳಿಯುವಾಗ ಕೊಲೆಯಾದರು.
ಸುಖಾನಂದ ಶೆಟ್ಟಿ ಕೊಲೆಯಾದಾಗ ಬಿಜೆಪಿ-ಜೆಡಿಎಸ್ ಸರ್ಕಾರವಿತ್ತು. ಪೊಳಲಿ ಅನಂತು ಕೊಲೆಯಾದಾಗಲೂ ಬಿಜೆಪಿ-ಜೆಡಿಎಸ್ ಸರ್ಕಾರವಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಉಸ್ತುವಾರಿ ಸಚಿವರಿದ್ದರು. ಸುಖಾನಂದ ಶೆಟ್ಟಿ ಕೊಲೆಯಾದ ತಕ್ಷಣ ಎಜೆ ಆಸ್ಪತ್ರೆಯಿಂದ 24 ಕಿಮಿ ದೂರದಲ್ಲಿರುವ ಮೂಲ್ಕಿಗೆ ಶವಯಾತ್ರೆ ಮಾಡಲು ಬಿಜೆಪಿ ಸಚಿವ ನಾಗರಾಜ ಶೆಟ್ಟಿ ನಿರ್ಧರಿಸಿದರು. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಒಪ್ಪಿಗೆ ಕೊಡದೇ ಇದ್ದರೂ ಶವಯಾತ್ರೆ ನಡೆಯಿತು. ಶವಯಾತ್ರೆ ವೇಳೆ ಮುಸ್ಲಿಮರು ಯಾರೂ ಗಲಾಟೆ ಮಾಡಲಿಲ್ಲ. ಹಿಂದುತ್ವವಾದಿಗಳೇ ಶವಯಾತ್ರೆಯ ಮಾರ್ಗದ ವಿಷಯವಾಗಿ ಪೊಲೀಸರೊಂದಿಗೆ ಜಗಳವಾಡಿದರು. ಪೊಲೀಸರು ಶವಯಾತ್ರೆಯ ಮೇಲೆ ಶೂಟ್ ಮಾಡಿದಾಗ ಇಬ್ಬರು ಬಿಲ್ಲವ ಯುವಕರು ಸ್ಥಳದಲ್ಲೇ ಸಾವನ್ನಪ್ಪಿದರು. ಪೊಳಲಿ ಅನಂತು ಕೊಲೆಯಾದಾಗ ಆಸ್ಪತ್ರೆಗೆ ಸೇರಿಸಲು ಆಂಬುಲೆನ್ಸ್ ತಕ್ಷಣ ಸಿಗಲಿಲ್ಲ. ಕಾರುಗಳೂ ನಿಲ್ಲಲಿಲ್ಲ. ಯಾಕೆಂದರೆ ಪೊಳಲಿ ಅನಂತು ಸುಖಾನಂದ ಶೆಟ್ಟಿಯಂತೆ ಉಧ್ಯಮಿಯೂ ಅಲ್ಲ, ನಾಯಕನೂ ಅಲ್ಲ. ಬರೀ ರೌಡಿಯಾಗಿದ್ದರು. ಪೊಳಲಿ ಅನಂತು ಶವಯಾತ್ರೆ ಮಾಡಬೇಕು ಎಂದು ಅಂದಿನ ಭಜರಂಗದಳದ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ನಿರ್ಧರಿಸಿದ್ದರು. ಆಗ ಕಲ್ಲಡ್ಕ ಪ್ರಭಾಕರ ಭಟ್ಟರು ಮಹೇಂದ್ರ ಕುಮಾರ್ ಗೆ ಫೋನ್ ಮಾಡಿ “ಪೊಳಲಿ ಅನಂತು ಒಬ್ಬ ರೌಡಿ. ಆತನ ಶವಯಾತ್ರೆ ಮಾಡಬೇಡಿ” ಎಂದು ಸೂಚನೆ ನೀಡಿದರು. ಸುಖಾನಂದ ಶೆಟ್ಟಿ ಶವಯಾತ್ರೆಗೆ ಸಚಿವರೇ ನಾಯಕತ್ವ ವಹಿಸಿದ್ದರೆ, ಪೊಳಲಿ ಅನಂತು ಶವಯಾತ್ರೆಗೆ ಆರ್ ಎಸ್ ಎಸ್ ಅಡ್ಡಿಯಾಗಿತ್ತು.
ಸುಖಾನಂದ ಶೆಟ್ಟಿಯನ್ನು ಕೊಲೆ ಮಾಡಿದ್ದ ಆರೋಪಿಗಳ ಪೈಕಿ ಅತೀಕ್ ಮತ್ತು ರಫೀಕ್ ಎಂಬವರನ್ನು ಪೊಲೀಸರು ಎನ್ ಕೌಂಟರ್ ಮಾಡಿ ಸಾಯಿಸಿದ್ದರು. ಸುಖಾನಂದ ಶೆಟ್ಟಿ ಕೊಲೆಗೆ ಪ್ರತಿಕಾರ ತೀರಿಸಲು ಒಬ್ಬನೇ ಒಬ್ಬ ಬಂಟ ಮುಂದೆ ಬಂದಿಲ್ಲ. ಒಬ್ಬನೇ ಒಬ್ಬ ಬಂಟ ಸುಖಾನಂದ ಶೆಟ್ಟಿ ಕೊಲೆಗೆ ಪ್ರತಿಕಾರವಾಗಿ ರೌಡಿಯಾಗಲಿಲ್ಲ. ಸರ್ಕಾರವೇ ಮುಂದೆ ನಿಂತು ಸುಖಾನಂದ ಶೆಟ್ಟಿ ಕೊಲೆ ಆರೋಪಿಗಳನ್ನು ಕೊಲೆ ಮಾಡುತ್ತದೆ. ಪೊಳಲಿ ಅನಂತುವನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಹಿಂದುತ್ವದ ಕಾಲಾಳು ಯುವಕರು ಕೊಲೆ ಮಾಡಿ ಮತ್ತಷ್ಟೂ ಹಿಂದುಳಿದ ವರ್ಗದ ಹುಡುಗರು ರೌಡಿಗಳೆನಿಸಿಕೊಂಡರು.
ಹಿಂದುತ್ವದ ರಾಜಕಾರಣದಲ್ಲಿ ಬದುಕು-ಸಾವಿನಲ್ಲೂ ಅಸಮಾನತೆಗಳಿವೆ. ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ…! ಬಂಟ- ಬಿಲ್ಲವರನ್ನು ಬಳಸಿಕೊಳ್ಳುವ ಹಿಂದುತ್ವ ರಾಜಕಾರಣಕ್ಕಂತೂ ಸ್ಪಷ್ಟವಾಗಿ ಜಾತಿ ಗೊತ್ತಾಗುತ್ತದೆ. ಹಾಗಾಗಿ ಹಿಂದುತ್ವದಲ್ಲಿ ಬದುಕಿದ್ದಾಗಲೂ ಬಂಟ-ಬಿಲ್ಲವರಿಗೆ ಒಂದೇ ರೀತಿಯ ಪ್ರಾತಿನಿಧ್ಯ ಸಿಗುವುದಿಲ್ಲ. ಸತ್ತ ಬಳಿಕವೂ ಬಂಟರಿಗೆ ಸಿಗುವ ಮರ್ಯಾದೆಯೇ ಬೇರೆ, ಬಿಲ್ಲವ ಹಿಂದುತ್ವವಾದಿಗೆ ಸಿಗುವ ಮರ್ಯಾದೆಯೇ ಬೇರೆ ! ಸಾವಿಗೆ ಸಿಗುವ ನ್ಯಾಯದಲ್ಲೂ ಅಸಮಾನತೆ..! ಹಾಗಾಗಿ ಹಿಂದುತ್ವದಲ್ಲಿ ಬಂಟ- ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಗಲ್ಲ ಅನ್ನುವುದಂತೂ ಸ್ಪಷ್ಟ.

ನವೀನ್ ಸೂರಿಂಜೆ
ಪತ್ರಕರ್ತ, ಲೇಖಕ
ಹಾಗೆಯೇ ದೇವರಾರು? ರಾಕ್ಷಸರಾರು? ಇದನ್ನು ನಿರ್ಧರಿಸುವವರೂ ಕೂಡ ದೈವಾಂಶ ಸಂಭೂತರೇ!