ಕೊಡಗು ಸೊಬಗಿನ ನಾಡು, ದೂರದ ಬೆಟ್ಟ ನುಣ್ಣಗೆ ಎನ್ನುವ ನಾಣ್ಣುಡಿಯಂತೆ ಪ್ರಕೃತಿಯ ಐಸಿರಿಯಲ್ಲಿ ಬಡವನ ಬವಣೆ ಮರೆಯಾಗಿದೆ. ದಲಿತರಿಗೆ, ಶೋಷಿತರಿಗೆ, ಆದಿವಾಸಿಗಳಿಗೆ, ಭೂ ರಹಿತ ಬಡವರ್ಗದ ಜನರಿಗೆ ಬದುಕು ದುಸ್ತರವಾಗಿದ್ದು, ಜೀವನ ಕಟ್ಟುವುದು ದುಸ್ಸಾಹಸವೇ ಆಗಿದೆ.
ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಜೀವನಕ್ಕಾಗಿ ಹೋರಾಡುವ ಬದುಕು ಕೊಡಗಿನ ಬಡ ವರ್ಗದ ಜನಗಳದ್ದು. ಸಿರಿವಂತರ ದಬ್ಬಾಳಿಕೆ ಬಡವನ ಬದುಕು ಕಿತ್ತಿದೆ. ನಾವು ಇದ್ದೀವೋ ಇಲ್ಲವೋ ಎನ್ನುವ ಪಾಪ ಪ್ರಜ್ಞೆ ಈ ಬಡ ಜನಗಳದ್ದು.
ಕೊಡಗಿನಲ್ಲಿ ಭೂಮಿಗಾಗಿ, ವಸತಿಗಾಗಿ ಸಾಕಷ್ಟು ಹೋರಾಟ ಖಂಡಿವೆ. ಆದರೆ ನ್ಯಾಯ ದೊರೆತಿದ್ದು, ಬೆರಳೆಣಿಕೆಯಷ್ಟು ಮಾತ್ರ. ದಿಡ್ಡಳ್ಳಿ ಹೋರಾಟ ರಾಜ್ಯದ ಗಮನ ಸೆಳೆಯಿತು. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರೇ ಹೋರಾಟ ಮಾಡಿದರು. ಆದರೆ ಕೊಡಗಿನ ರಾಜಕೀಯ ಶಕ್ತಿಗಳು, ಜಿಲ್ಲಾಡಳಿತ, ತಾಲೂಕು ಆಡಳಿತ ಆದಿವಾಸಿ ಜನಗಳನ್ನು ಕಾಡಿನಿಂದ ನಾಡಿಗೆ ತಂದರೇ ವಿನಹ ಸಾಮಾಜಿಕ ಬದುಕು ನೀಡಲಿಲ್ಲ.
ಇಂದಿಗೂ ಕೂಡಾ ಕೊಡಗಿನಲ್ಲಿ ಶೋಷಣೆಗೆ ಒಳಗಾದ ಸಮುದಾಯಗಳಿಗೆ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮನ್ನಣೆ ದೊರೆತಿಲ್ಲ. ಶ್ರೀಮಂತರ ಪರ ಇರುವ ಕಾನೂನುಗಳು ಬಡವರಿಗೆ ಅನ್ವಯ ಆಗದೆ ಇರುವುದು ಶೋಚನಿಯ, ಹಾಗೆ ಖಂಡನಿಯ.
ಸಾಲುಮನೆ ಜೀತ ಪದ್ಧತಿ ಇವತ್ತಿಗೂ ರಾಜ್ಯದ ಜನತೆಗೆ ಅರಿವಿರದ ಪಾಠ. ಆಧುನಿಕತೆಯ ಬದುಕಲ್ಲಿ ಕರಾಳತೆಯ ಮೆರುಗು. ಇಡೀ ಕುಟುಂಬ ಪ್ರಪಂಚದ ಅರಿವೇ ಇರದಂತೆ ದುಡಿಯುವ ಪದ್ಧತಿ. ತೋಳಲ್ಲಿ ಶಕ್ತಿ ಇರುವಷ್ಟು ದಿನ ಕೂಲಿ, ಕಂಬಳ. ದುಡಿಯುವ ಶಕ್ತಿ ಇಲ್ಲವೆಂದರೆ ಕಾಫಿ ಎಸ್ಟೇಟ್‌ನಿಂದ ಹೊರ ನಡೆಯಬೇಕು.
ಮುಂದಿನ ಬದುಕು ಏನು, ಕುಟುಂಬದ ಸದಸ್ಯರ ಬದುಕೇನು? ಮನೆ ಇಲ್ಲ, ಕೆಲಸ ಇಲ್ಲ. ಇದು ಕೊಡಗಿನ ಶೋಷಿತ ಸಮಾಜದ ಕಷ್ಟ ಕಾರ್ಪಣ್ಯ. ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರ ಬಡಜನರನ್ನು ಮರೆತು ಭೂ ಮಾಲೀಕರ ಪರವಾಗಿ ಭೂ ಗುತ್ತಿಗೆ ಆದೇಶ ನೀಡಿದೆ. ಈ ಕಾಯ್ದೆ ಉಪಯೋಗಕ್ಕಿಂತ ಅಪಾಯ ತಂದೊಡ್ದುವುದೆ ಹೆಚ್ಚು. ಭೂಮಾಲೀಕರ ಕಪಿ ಮುಷ್ಟಿಗೆ ಕೊಡಗಿನ ಭೂಮಿ ಹೋದರೆ ಬಡಜನರ ಬಾಳು ಹಿನಾಯ ಸ್ಥಿತಿ.
ಗೌರಿ ನಾಲಕ್ಕೇರಿ ಮಾತಾಡಿ, “ನಾವು ಸಾಲು ಮನೆ ಕೆಲಸ ಮಾಡ್ಕೊಂಡು ಇದೀವಿ ನಮಗೆ ಜಾಗ ಬೇಕು, ಮನೆ ಬೇಕು ಅಧಿಕಾರಿಗಳನ್ನು ಕೇಳ್ತಿವಿ, ಕೊಡ್ತೀವಿ ಅಂತಾರೆ . ಆದರೆ, ಈವರೆಗೆ ನಮ್ಮ ಕಡೆ ಒಮ್ಮೆಯೂ ತಿರುಗಿ ನೋಡಿಲ್ಲ. ನಮ್ಮ ಮಾತು ಕೇಳಿಸಿಕೊಳ್ಳೋದಿಲ್ಲ” ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿ ಸದಸ್ಯೆ ಶಿಲ್ಪಾ ಮಾತನಾಡಿ, “25 ಎಕೆರೆ ಭೂ ಗುತ್ತಿಗೆ ನೀಡುವ ಆದೇಶ ರದ್ದು ಮಾಡಬೇಕು. ಇಲ್ಲದವರ ಭೂಮಿ ಉಳ್ಳವರ ಪಾಲಾದರೆ ಬಡವರು ಬದುಕೋದು ಕಷ್ಟ. ನಮ್ಮ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 70 ಕುಟುಂಬಗಳು ಹೈಸೆಡ್ಲುರು ಗ್ರಾಮದಲ್ಲಿ ವಾಸವಾಗಿವೆ. ಅವರಿಗೆ ನಮ್ಮ ಪಂಚಾಯಿತಿಯಿಂದ ಮನೆಯಾಗಲಿ, ಮೂಲಭೂತ ಸೌಲಭ್ಯಗಳನ್ನಾಗಲೀ ಒದಗಿಸಲು ಆಗುತ್ತಿಲ್ಲ. ನಮ್ಮ ಪಂಚಾಯಿತಿಯವರಿಗೆ ಆಸಕ್ತಿ ಇಲ್ಲ. ಇನ್ನು ಬಡವರು ಏನು ಮಾಡಲು ಸಾಧ್ಯ” ಎಂದರು.
ದಸಂಸ ಮುಖಂಡ ಎಚ್ ಆರ್ ಶಿವಣ್ಣ ತಿತಿಮತಿ ಮಾತನಾಡಿ, “ನಾಲ್ಕಾರು ದಶಕಗಳಿಂದ ಭೂ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ, ಇಲ್ಲಿನ ಭೂ ಮಾಲೀಕರ ವಿರುದ್ಧ ಸರ್ಕಾರವಾಗಲಿ ಸ್ಥಳೀಯ ಅಧಿಕಾರಿಗಳೇ ಆಗಲಿ ಹೋಗೋದಿಲ್ಲ. ಉಳ್ಳವರ ಪರವಾಗಿ ಸರ್ಕಾರ ನಿಲ್ಲುತ್ತದೆಯೇ ಹೊರತು ಬಡವರಿಗೆ ಇರಲು ಮನೆ ಕೊಡಲು ಕೂಡ ಶಕ್ತವಾಗಿಲ್ಲ. ಇಲ್ಲಿನ ಜನರಿಗಾಗಿ ದಸಂಸ ಹೋರಾಟ ಮಾಡುತ್ತಲೇ ಇದೆ. ಆದರೆ, ಅಧಿಕಾರಿಗಳು ಎಷ್ಟು ಮನವಿ ಕೊಟ್ಟರು ಬಡವರ ಪರವಾಗಿ ಕೆಲಸ ಮಾಡೋದೇ ಇಲ್ಲ” ಎಂದು ಅಪಾದಿಸಿದರು.
ಕೋಡಂಗಿ ಹಾಡಿ ನಿವಾಸಿ ಮಣಿ ಮಾತನಾಡಿ, “ಅಧಿಕಾರಿಗಳಿಗೆ ಅರ್ಜಿ ಹಾಕಿ ಮನೆ, ಜಾಗ ಕೊಡಿ ಅಂದರೆ 13 ದಾಖಲಾತಿ ಕೇಳುತ್ತಾರೆ. ಓದಿನ ಪ್ರಮಾಣ ಪತ್ರ, 2005ರ ಹಿಂದಿನ ದಾಖಲೆ ಎಲ್ಲವನ್ನೂ ಕೇಳುತ್ತಾರೆ. ನಾವು ಓದಿಲ್ಲ, ಶಾಲೆಗೆ ಹೋಗಿಲ್ಲ. ಇರಲು ಮನೆ ಇಲ್ಲ ಇರೋದು ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಲ್ಲಿ. ನಮ್ಮ ಮನೆಗೆ ಜಾಗಕ್ಕೆ ಹಕ್ಕುಪತ್ರ ಯಾವುದು ಕೊಟ್ಟಿಲ್ಲ. ಇನ್ನು ದಾಖಲೆ ಎಲ್ಲಿಂದ ತಂದು ಕೊಡೋದು. ಕೋಡಂಗಿ ಹಾಡಿ ಎತ್ತರದ ಕಾಡಿನ ಪ್ರದೇಶದಲ್ಲಿ ಇದೆ. ಇಲ್ಲಿಗೆ ರಸ್ತೆ ಇಲ್ಲ. ಮಳೆ ಬಂದರೆ ಹಳ್ಳ ತುಂಬುತ್ತೆ. ಓಡಾಡಲು ಆಗುವುದಿಲ್ಲ. ಕಾಡಿನ ಮೂಲಕ ಓಡಾಡಲು ಕಾಡು ಪ್ರಾಣಿಗಳ ಹಾವಳಿ. ಅಧಿಕಾರಿಗಳು ನಮ್ಮನ್ನ ಕನಿಷ್ಟಪಕ್ಷ ಮನುಷ್ಯರು ಎನ್ನುವಂತೆಯೂ ಕಾಣುವುದಿಲ್ಲ” ಎಂದು ಅಳಲು ತೋಡಿಕೊಂಡರು.
ಈ ಸುದ್ದಿ ಓದಿದ್ದೀರಾ? ಬೀದರ್ | ಮರಾಠಿಗರ ಒಗ್ಗಟ್ಟಿನ ಲಾಭ ರಾಜಕೀಯ ಪಕ್ಷಗಳು ಬಳಕೆ : ಮನೋಜ ಜರಾಂಗೇ ಪಾಟೀಲ್
ಚಂದ್ರ ತಾವಳಗೆರೆ ಮಾತಾಡಿ, “ನಮ್ಮ ಗ್ರಾಮದಲ್ಲಿ 56 ಕುಟುಂಬಗಳಿವೆ. ಗಿರಿಜನ, ಹರಿಜನ ಕುಟುಂಬಗಳಿಗೆ ಜಮೀನು ಅಳೆದು ಕೊಟ್ಟವರು ಈವರೆಗೆ ಹಕ್ಕುಪತ್ರ ಕೊಡಲಿಲ್ಲ. ಪೋನ್ನಂಪೇಟೆ ತಾಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಅಲೆದಿದ್ದೇ ಆಯಿತೇ ವಿನಃ ನ್ಯಾಯ ಸಿಗಲಿಲ್ಲ. ನಮ್ಮ ಭೂಮಿಯನ್ನು ನಮಗೆ ಕೊಡದೆ ಸರ್ಕಾರ ಭೂ ಮಾಲೀಕರಿಗೆ ಕೊಡುತ್ತಾ ಹೋದರೆ, ನಾವೆಲ್ಲ ಇರಬೇಕಾ, ಸಾಯಬೇಕಾ? ನಮಗೆ ನಾವಿರುವ ಮನೆ, ಜಾಗ ಕೊಡಿ ಅದು ಬಿಟ್ಟು ಇರೋದೆಲ್ಲ ಭೂ ಮಾಲೀಕರಿಗೆ ಕೊಟ್ಟರೆ ನಾವೇನು ಮಾಡಬೇಕು” ಎಂದು ಆಕ್ರೋಶ ಹೊರಹಾಕಿದರು.
