ಸದ್ಯ ಬೆಂಗಳೂರು ಸೇರಿದಂತೆ ಹಲವೆಡೆ ತಿಂಡಿ-ತಿನಿಸುಗಳ ದರ ದಿನದಿಂದ ದಿನಕ್ಕೆ ಏರುತ್ತಿದೆ. ಬಡವರಿಗೆ ನಿರ್ಗತಿಕರಿಗೆ ಆಹಾರ ಸಿಗುವುದೇ ದುಸ್ತರವಾಗಿದೆ. ಹಾಗಾಗಿ, ಅಗತ್ಯವಿರುವವರಿಗೆ ಉಚಿತ ಆಹಾರ ನೀಡುವ ಕ್ರಮವೊಂದನ್ನು ನಗರದ ಕೆಲವೊಂದು ಹೋಟೆಲ್‌ಗಳಲ್ಲಿ ಜಾರಿಗೆ ತರಲಾಗಿದೆ.
ಹೌದು, ಸುಮಾರು ಒಂದು ವರ್ಷ ಹಳೆಯದಾದ ನಗರದ ಮಲ್ಲೇಶ್ವರಂನ ಮುಳಬಾಗಿಲು ದೋಸೆ ವಾಸವಿ ಫುಡ್ ಪಾಯಿಂಟ್, ಶಾಸ್ತ್ರಿನಗರದ ಎಸ್‌ಎಲ್‌ವಿ ಕಾಫಿ ಕಾರ್ನರ್ ಹಾಗೂ ಬನಶಂಕರಿ 2ನೇ ಹಂತದಲ್ಲಿರುವ ಕಾಫಿ ತಿಂಡಿ ಜತೆಗೆ, ಬೆಂಗಳೂರಿನಿಂದ 66 ಕಿಮೀ ದೂರದಲ್ಲಿರುವ ಚಿಕ್ಕಬಳ್ಳಾಪುರದ ಮೂರ್ತಿ ಮೆಸ್ ಹೋಟೆಲ್‌ನಲ್ಲಿ ಈ ಸೇವೆ ಲಭ್ಯವಿರುವ ನಾಲ್ಕನೇ ತಾಣವಾಗಿದೆ.
ಹಸಿದವರಿಗೆ ಉಚಿತವಾಗಿ ಆಹಾರ ನೀಡಲಾಗುತ್ತಿದೆ. ಆದರೆ, ಈ ಆಹಾರವನ್ನು ಉಚಿತವಾಗಿ ನೀಡುತ್ತಿರುವುದು ಹೋಟೆಲ್‌ಗಳಲ್ಲ, ಬದಲಾಗಿ ಗ್ರಾಹಕರು. ಗ್ರಾಹಕರೇ ಗ್ರಾಹಕರಿಗಾಗಿ ಉಚಿತ ಆಹಾರವನ್ನ ನೀಡುವುದು ಇದರ ಕ್ರಮವಾಗಿದೆ.
ಮಹಿಳಾ ವೇದಿಕೆಯು ಬೆಂಗಳೂರಿನ ಆಯ್ದ ದರ್ಶಿನಿ ಮಳಿಗೆಗಳಲ್ಲಿ ಅಗತ್ಯವಿರುವವರಿಗೆ ಉಚಿತ ಆಹಾರವನ್ನು ನೀಡುವ ಉಪಕ್ರಮದ ಮೂಲಕ ಜನರ ಹಸಿವನ್ನು ಕಡಿಮೆ ಮಾಡಲು ತನ್ನ ಕೈಲಾದಷ್ಟು ಮಾಡುತ್ತಿದೆ. ಈ ಕ್ರಮವನ್ನು ‘ತೃಪ್ತಿ’ ಎಂದು ಕರೆಯಲಾಗುತ್ತದೆ.
ಹೇಗೆ ಉಚಿತ ಆಹಾರ ನೀಡಲಾಗುತ್ತದೆ?
ಮೇಲೆ ನೀಡಲಾಗಿರುವ ಹೋಟೆಲ್‌ಗಳಿಗೆ ಗ್ರಾಹಕರು ಊಟ ಮಾಡಲು ತೆರಳಿದಾಗ ಹಸಿದವರಿಗೆ ಅಥವಾ ನಿರ್ಗತಿಕರಿಗೆ ಊಟದ ಟೋಕನ್ ಖರೀದಿ ಮಾಡಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಮಳಿಗೆಗಳ ಗ್ರಾಹಕರು ಅಪರಿಚಿತರಿಗೆ ಆಹಾರದ ಟೋಕನ್‌ಗಳನ್ನು ಖರೀದಿಸಬಹುದು. ಗ್ರಾಹಕರು ಪಡೆದ ಈ ಟೋಕನ್‌ಗಳನ್ನು ಮಳಿಗೆಗಳಲ್ಲಿ ಇಡಲಾಗಿರುವ ಬೋರ್ಡ್‌ನಲ್ಲಿ ಪಿನ್ ಮಾಡಲಾಗುತ್ತದೆ. ಊಟವನ್ನು ಪಡೆಯಲು ಸಾಧ್ಯವಾಗದವರು ಈ ಟೋಕನ್‌ಗಳನ್ನು ಪಡೆದುಕೊಳ್ಳಬಹುದು. ಈ ಟೋಕನ್ ಸೇವೆ ದಿನನಿತ್ಯ ಚಾಲ್ತಿಯಲ್ಲಿರುತ್ತದೆ. ಈ ವೇಳೆ, ಯಾರು ಕೂಡ ಯಾವುದೇ ಪ್ರಶ್ನೆ ಕೇಳುವುದಿಲ್ಲ. ಇದು ಡೈನ್-ಇನ್ ಮತ್ತು ಟೇಕ್‌ಅವೇ ಎರಡಕ್ಕೂ ಲಭ್ಯವಿದೆ. ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ಈ ಟೋಕನ್‌ಗಳನ್ನು ಒಮ್ಮೆ ಪಡೆಯಬಹುದು ಅಥವಾ ಟೋಕನ್‌ಗಳನ್ನು ಯಾವುದೇ ದಿನ ಬೇಕಾದರೂ ಬಳಸಬಹುದು.
ದಾರಿಹೋಕರಿಗೆ ಈ ಬಗ್ಗೆ ಗಮನಕ್ಕೆ ಬರಲು ಹೋಟೆಲ್ ಕ್ಯಾಶ್ ಕೌಂಟರ್‌ನ ಪಕ್ಕದಲ್ಲಿ ರಸ್ತೆಯ ಕಡೆಗೆ ಬೋರ್ಡ್ ಹಾಕಲಾಗಿದೆ. ಇದು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ‘ಉಚಿತ ಆಹಾರ’ ಎಂದು ಬರೆಯಲಾಗಿದೆ.
ತೃಪ್ತಿ ಎಂಬುದು ಕವಿತಾ ಎರಗಂ ಎಂಬುವವರ ಕಲ್ಪನೆಯಾಗಿದೆ. ಅವರು ಎವಿಎಲ್‌ಜಿಐ (AVLGI) ಸಂಸ್ಥೆಯ ಸ್ಥಾಪಕರು ಮತ್ತು ಅಂತಾರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಮಹಿಳೆಯರಲ್ಲಿ ಸ್ವಯಂ ಅಭಿವೃದ್ಧಿಯನ್ನು ಹೆಚ್ಚಿಸುವ ವೇದಿಕೆಯಾಗಿದೆ.
ಈ ಬಗ್ಗೆ ಮಾತನಾಡಿದ ಅವರು, ”ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ, ನಾನು ಮತ್ತು ನನ್ನ ಪತಿ ವಯಸ್ಸಾದವರಿಗೆ ಮತ್ತು ಅಗತ್ಯವಿರುವವರಿಗೆ ಆಹಾರವನ್ನು ಹೇಗೆ ಒದಗಿಸಬಹುದು ಎಂದು ಯೋಚಿಸುತ್ತಿದ್ದೆವು. ನಂತರ, ನಾವು ವಿದೇಶದಲ್ಲಿ ‘ನನಗೆ ಒಂದು ಮತ್ತು ಹಸಿದವರಿಗೆ ಒಂದು’ ಎಂಬ ಅಭಿಯಾನ ನೋಡಿದ್ದೇವೆ. ನಾವು ಅದನ್ನು ಇಲ್ಲಿ ಕಾರ್ಯರೂಪಕ್ಕೆ ತಂದಿದ್ದೇವೆ” ಎಂದು ಹೇಳಿದರು.
”ಊಟಕ್ಕೆ ಬರುವವರನ್ನು ಯಾವುದೇ ಕಾರಣಕ್ಕೂ ಪ್ರಶ್ನೆ ಮಾಡಬಾರದು ಎಂದು ನಾವು ಹೋಟೆಲ್ ನಡೆಸುವವರಿಗೆ ಹೇಳಿದ್ದೇವೆ. ಅವರು ಒಂದು ಟೋಕನ್ ಅಥವಾ 10 ಟೋಕನ್ ತೆಗೆದುಕೊಂಡು ಹೋದರು ಪ್ರಶ್ನೆ ಮಾಡಬಾರದು. ಅವರು ಬಡವರಾಗಿರಲಿ ಅಥವಾ ಇಲ್ಲದಿರಲಿ ಈ ಪ್ರಶ್ನೆಗಳು ಅಪ್ರಸ್ತುತವಾಗಿರುತ್ತವೆ. ಬೋರ್ಡ್‌ನಿಂದ ಟೋಕನ್‌ಗಳನ್ನು ತೆಗೆದುಕೊಳ್ಳುವ ಜನರ ಫೋಟೋಗಳನ್ನು ಕ್ಲಿಕ್ ಮಾಡದಂತೆ ನಾವು ಈ ರೆಸ್ಟೋರೆಂಟ್‌ಗಳಿಗೆ ಕೇಳಿದ್ದೇವೆ. ಇದು ಅವರನ್ನು ಮುಜುಗರಕ್ಕೀಡುಮಾಡಬಹುದು” ಎಂದು ಅವರು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಾಯಂಡಹಳ್ಳಿ ಫ್ಲೈಓವರ್‌ನಿಂದ ಜಿಗಿದು ಕೆಪಿಟಿಸಿಎಲ್ ಗುತ್ತಿಗೆ ನೌಕರ ಆತ್ಮಹತ್ಯೆ
”ಉಚಿತ ಆಹಾರ ಬೋರ್ಡ್ ನೋಡಿ ಮತ್ತು ನಮ್ಮ ಸೇವೆ ಗಮನಿಸಿ ಕೆಲವರು ಟೋಕನ್‌ಗಳನ್ನು ಖರೀದಿಸುತ್ತಾರೆ. ಈ ಟೋಕ್ನಗಳನ್ನು ಉಚಿತವಾಗಿ ಹಂಚಲಾಗುತ್ತದೆ. ಕೆಲವು ಎವಿಎಲ್‌ಜಿಐ ಸದಸ್ಯರು ವಿಶೇಷ ಸಂದರ್ಭಗಳಲ್ಲಿ ₹200 ರಿಂದ ₹500 ಮೌಲ್ಯದ ಟೋಕನ್‌ಗಳನ್ನು ಖರೀದಿಸುತ್ತಾರೆ. ತೃಪ್ತಿಯನ್ನು 100 ನಾನಾ ಸ್ಥಳಗಳಲ್ಲಿ ಪ್ರಾರಂಭಿಸುವುದು ನಮ್ಮ ಗುರಿಯಾಗಿದೆ. ಉಚಿತ ಆಹಾರ ಬೋರ್ಡ್ ಬಗ್ಗೆ ಗ್ರಾಹಕರು ಕೇಳಿದಾಗ ಕ್ಯಾಷಿಯರ್‌ಗಳು ವಿವರ ನೀಡುತ್ತಾರೆ” ಎಂದರು.
”ರಸ್ತೆಯಲ್ಲಿ ಭಿಕ್ಷೆ ಬೇಡುವ ದಂಪತಿಯೊಬ್ಬರು ನಿತ್ಯ ಆಹಾರದ ಟೋಕನ್ ಪಡೆಯಲು ಬರುತ್ತಾರೆ” ಎಂದು ಚಿಕ್ಕಬಳ್ಳಾಪುರದ ರೆಸ್ಟೋರೆಂಟ್‌ನ ಕ್ಯಾಷಿಯರ್ ತಿಳಿಸಿದರು.
”ಮನೆ ಬಾಡಿಗೆ ಕಟ್ಟಲು ಪರದಾಡುತ್ತಿದ್ದ ದಂಪತಿಗೆ ತಿಂಗಳಿಗೆ ಉಚಿತ ಊಟ ದೊರೆಯಿತು. ಕೆಲ ದಿನಗಳ ಬಳಿಕ, ಇದೇ ದಂಪತಿ ಮಧ್ಯಾಹ್ನ ಊಟದ ಟೋಕನ್‌ಗಳನ್ನ ಖರೀದಿ ಮಾಡಿ ಇತರರಿಗೆ ಆಹಾರ ಟೋಕನ್‌ಗಳನ್ನು ಪ್ರಾಯೋಜಿಸಲು ಮುಂದಾದರು. ಅವರ ಪರಿಸ್ಥಿತಿ ಈಗ ಸುಧಾರಿಸಿದೆ. ಕಳೆದ ವಾರ, ಒಬ್ಬ ವ್ಯಕ್ತಿ ತನ್ನ ಹುಟ್ಟುಹಬ್ಬದ ಸಲುವಾಗಿ ₹1,500 ಟೋಕನ್‌ಗಳನ್ನು ಖರೀದಿಸಿದರು” ಎಂದು ಇನ್ನೊಂದು ದರ್ಶಿನಿ ಸಿಬ್ಬಂದಿಗೆ ವಿವರಿಸಿದರು.
ಮೂಲ: ಡೆಕ್ಕನ್ ಹೆರಾಲ್ಡ್