ಬಜರಂಗದಳದ ಮುಖಂಡರು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪಿಎಸ್‌ಐ ಒಬ್ಬರು ನೀಡಿದ ದೂರಿನ ಮೇಲೆ ಏಳು ಜನರ ವಿರುದ್ಧ ತುಮಕೂರು ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತುಮಕೂರಿನ ಜಯನಗರ ಠಾಣೆ ಪಿಎಸ್‌ಐ ಮಹಾಲಕ್ಷ್ಮಮ್ಮ ಅವರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ನನ್ನನ್ನು ತಡೆದು, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ತುಮಕೂರು ನಗರ ಠಾಣೆಯಲ್ಲಿ ಬಜರಂಗದಳದ 7ಮಂದಿಯ ಮೇಲೆ ಎಫ್‌ಐಆರ್ ಹಾಕಲಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೂಕ್ಷ್ಮ ಮತಗಟ್ಟೆಯಾಗಿರುವ ಮರಳೂರು ದಿಣ್ಣೆಯ ನಿವಾಸಿ ಪ್ರಶಾಂತ್‌ನನ್ನು ತಾಲೂಕು ದಂಡಾಧಿಕಾರಿ ಮುಂದೆ ಹಾಜರು ಪಡಿಸಲು ಕರೆದುಕೊಂಡು ಬರುವಾಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನನ್ನನ್ನು ತಡೆದಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇರೆಗೆ ಬಜರಂಗದಳದ ಮುಖಂಡರಾದ ಮಂಜು ಭಾರ್ಗವ್, ಜಿ.ಕೆ.ಶ್ರೀನಿವಾಸ್, ಆಂಟೊನಿ ಡೇವಿಡ್, ಶರತ್ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಸೂಕ್ಷ್ಮ ಮತಗಟ್ಟೆಯಾಗಿರುವ ಮರಳೂರು ದಿಣ್ಣೆಯ ನಿವಾಸಿ ಪ್ರಶಾಂತ್ ಮತ್ತು ಆತನ ಸಹಚರರಾದ ಆಂಟೊನಿ ಡೇವಿಡ್, ರವಿ, ಮಣಿಕಂಠ ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳುವ ಉದ್ದೇಶದಿಂದ ವಶಕ್ಕೆ ಪಡೆಯಲು ಹೋದಾಗ ಪ್ರಶಾಂತ್ ಮಾತ್ರ ಸಿಕ್ಕಿದ್ದು, ಉಳಿದವರು ನಾಪತ್ತೆಯಾಗಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.
