ನ್ಯೂಸ್‌ವೀಕ್‌ನಲ್ಲಿ ನಡೆಸಿದ ನರೇಂದ್ರ ಮೋದಿಯವರ ಸಂದರ್ಶನವು ವ್ಯಾಪಕವಾಗಿ ಟ್ರೋಲ್ ಆಗುತ್ತಿದೆ. ಅದು ಲಿಖಿತ ಸಂದರ್ಶನಕ್ಕಾಗಿ ಹೆಚ್ಚು ಟ್ರೋಲ್ ಆಗುತ್ತಿಲ್ಲ. ಬದಲಾಗಿ, ಮೋದಿ ಮತ್ತು ಮಾಧ್ಯಮದ ನಡುವಿನ ‘ಒನ್ ಟು ಒನ್ ಖಾಸಗಿ ಸಂಭಾಷಣೆ’ ಸ್ವರೂಪದ ಕಾರಣಕ್ಕಾಗಿ ಟ್ರೋಲ್ ಆಗುತ್ತಿದೆ. ಸಂದರ್ಶನವು ಅಗತ್ಯ ಮತ್ತು ಪ್ರಸ್ತುತ ಪರಿಸ್ಥಿತಿಗೆ ಪೂರಕವಾದ ಪ್ರಶ್ನೆಗಳನ್ನು ಒಳಗೊಳ್ಳುವುದಿರಲಿ, ಪ್ರಶ್ನೆಗಳೇ ಇರಲಿಲ್ಲ ಎಂದು ಟೀಕಿಸಲಾಗುತ್ತಿದೆ. ಇದು ತಾಂತ್ರಿಕವಾಗಿ ಸಂದರ್ಶನವೇ ಅಲ್ಲ. ಇದೊಂದು ಸ್ಟೆನೋಗ್ರಫಿ (ದಾಖಲೀಕರಣ) ಅಷ್ಟೇ ಎಂದು ‘ಫೈನಾನ್ಷಿಯಲ್ ಟೈಮ್ಸ್ ಎಡ್ ಲೂಸ್’ ಹೇಳಿದೆ.
ಸಂದರ್ಶನದಲ್ಲಿ ಪ್ರಶ್ನೆಗಳಿರಲಿಲ್ಲ – ಉಪ ಶೀರ್ಷಿಕೆಗಳು ಮಾತ್ರ
ಭಾರತವು ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ 161ನೇ ಸ್ಥಾನದಲ್ಲಿದೆ. ಇದೊಂದು ಗಂಭೀರ ಸಮಸ್ಯೆ. ಈ ಪತ್ರಿಕಾ ಸ್ವಾತಂತ್ರ್ಯವನ್ನು ಕುಗ್ಗಿಸುವ ಕುರಿತು ಗಂಭೀರ ಪ್ರಶ್ನೆಗಳು ಸಂದರ್ಶನದಲ್ಲಿರಬೇಕಿತ್ತು. ಆದರೆ, ಅಲ್ಲಿ ಪ್ರಶ್ನೆ ಇರಲಿಲ್ಲ. ಬದಲಾಗಿ, ‘ಪ್ರಜಾಪ್ರಭುತ್ವ ಮತ್ತು ಮುಕ್ತ ಪತ್ರಿಕೋದ್ಯಮ’ ಎಂಬ ಉಪಶೀರ್ಷಿಕೆಯಿತ್ತು. ಇದಕ್ಕೆ ಮೋದಿ ಪ್ರತಿಕ್ರಿಯಿಸಿದ್ದಾರೆ ಎಂದು ‘ನ್ಯೂಸ್‌ವೀಕ್’ ಮೋದಿಯವರ ಮಾತನ್ನು ವಿವರಿಸಿದೆ. ಆದರೆ, ಆ ಉಪಶೀರ್ಷಿಕೆಯು ಪತ್ರಿಕಾ ಸ್ವಾತಂತ್ರ್ಯದ ಸುತ್ತಲಿನ ಸಮಸ್ಯೆ, ವಿವಾದ ಅಥವಾ ಬಿಕ್ಕಟ್ಟನ್ನು ಮರೆಮಾಚುತ್ತದೆ ಮತ್ತು ದ್ರೋಹ ಬಗೆಯುತ್ತದೆ.
ಇನ್ನು, ಭಾರತವು ಚೀನಾದೊಂದಿಗೆ ಗಡಿ ಬಿಕ್ಕಟ್ಟು ಎದುರಿಸುತ್ತಿದೆ. 2020ರಲ್ಲಿ ಉಭಯ ದೇಶಗಳ ಕಮಾಂಡರ್‌ಗಳ ನಡುವೆ 21 ಸುತ್ತಿನ ಮಾತುಕತೆಗಳು ಮತ್ತು 26 ಸುತ್ತಿನ ಡಬ್ಲ್ಯೂಸಿಸಿ ಮಾತುಕತೆಗಳನ್ನು ನಡೆಸಲಾಗಿದೆ. ಆದರೆ, ಪರಿಸ್ಥಿತಿಯು ಬಗೆಹರಿಯದೆ ಉಳಿದಿದೆ. ಪೂರ್ವ ಲಡಾಖ್‌ನ ಚೀನಾ ಗಡಿಯಲ್ಲಿ 50,000ಕ್ಕೂ ಹೆಚ್ಚು ಹೆಚ್ಚುವರಿ ಭಾರತೀಯ ಸೈನಿಕರನ್ನು ನಿಯೋಜಿಸಲಾಗಿದೆ. ಲಡಾಖ್‌ನ ಹಿರಿಯ ಪೊಲೀಸ್ ಅಧಿಕಾರಿಯ ವರದಿ ಪ್ರಕಾರ, ಲಡಾಖ್ ಪಶ್ಚಿಮ ವಲಯದ 65 ಗಸ್ತು ಕೇಂದ್ರಗಳಲ್ಲಿ 26 ಕೇಂದ್ರಗಳಿಗೆ ಭಾರತೀಯ ಭದ್ರತಾ ಪಡೆಗಳು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ. ಆದರೆ, ಸಂದರ್ಶನವು ಈ ಬಿಕ್ಕಟ್ಟಿನ ಬಗ್ಗೆ ‘ಚೀನಾದೊಂದಿಗೆ ಸ್ಪರ್ಧೆ’ ಎಂಬ ಉಪಶೀರ್ಷಿಕೆ ನೀಡಿದೆ. ಗಂಭೀರ ಸಮಸ್ಯೆಯನ್ನು ಯಕಶ್ಚಿತ್ ಎಂಬಂತೆ ಬಿಂಬಿಸಿದೆ.
ಅಲ್ಪಸಂಖ್ಯಾತರ ಮೇಲೆ ತಾರತಮ್ಯದ ಆಡಳಿತ ಹೇರಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಪತ್ರಿಕೆಯ ಉಪ-ಶೀರ್ಷಿಕೆಯು, ‘ತಾರತಮ್ಯದ ಬಗ್ಗೆ ದೂರು ನೀಡುವ ಧಾರ್ಮಿಕ ಅಲ್ಪಸಂಖ್ಯಾತರ ಕುರಿತು’ ಎಂದು ಬರೆದುಕೊಂಡಿದೆ. ಇನ್ನು, ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ, “ಯಾರು ತಮ್ಮ ಮೇಲಿನ ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲವೋ ಅವರ ಆರೋಪಗಳಿವು” ಎಂದಷ್ಟೇ ಉತ್ತರಿಸಿದ್ದಾರೆ.
ಸಂದರ್ಶಕನನ್ನು ಶ್ಲಾಘಿಸಿದ್ದ ಜಮ್ಮು-ಕಾಶ್ಮೀರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಮೋದಿಯವರ ಸಂದರ್ಶನ ಪ್ರಕಟವಾಗುವ ಕೆಲವು ದಿನಗಳ ಮುನ್ನವೇ, ಜಮ್ಮು-ಕಾಶ್ಮೀರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮೋದಿ ಅವರನ್ನು ಸಂದರ್ಶಿಸಿದ್ದ ಸಂದರ್ಶಕ ಡ್ಯಾನಿಶ್ ಮಂಜೂರ್ ಭಟ್ ಅವರನ್ನು ಶ್ಲಾಘಿಸಿತ್ತು. “ಜಮ್ಮು ಕಾಶ್ಮೀರದಿಂದ ಬಂದ ಡ್ಯಾನಿಶ್ ಮಂಜೂರ್ ಭಟ್ ಅವರ ಹಾದಿ ಸ್ಪೂರ್ತಿದಾಯಕವಾದದ್ದು. ಅವರು ‘ಜೈಪುರ ಫುಟ್ ಯುಎಸ್‌ಎ’ ನೀಡುವ ‘ಗ್ಲೋಬಲ್ ಹ್ಯುಮ್ಯಾನಿಟೇರಿಯನ್’ ಪ್ರಶಸ್ತಿಗೆ ಮೊದಲ ಭಾಜನರು” ಎಂದು ಹೊಗಳಿ, ತನ್ನ ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್ ಮಾಡಿತ್ತು.
ಮೋದಿ ಸಂದರ್ಶನ ಪ್ರಕಟವಾಗುವ ಮುನ್ನವೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಡಿಯಲ್ಲಿರುವ ಇಲಾಖೆಯು ಸಂದರ್ಶಕರನ್ನು ಹೊಗಳಿರುವುದು ಗಮನಾರ್ಹ.
ಸಂದರ್ಶನದ ಟ್ರೋಲ್ – ಭಟ್ ಪ್ರತಿಕ್ರಿಯೆ
ಮೋದಿ ಅವರ ಸಂದರ್ಶನವು ಟ್ರೋಲ್ ಆಗುತ್ತಿದ್ದು, ಟ್ರೋಲ್‌ಗೆ ಭಟ್ ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ: “ನನ್ನ ಆತ್ಮೀಯ ಸ್ನೇಹಿತರು ಟ್ರೋಲ್‌ಗಳನ್ನು ಆನಂದಿಸುತ್ತಿದ್ದಾರೆ. ಹೌದು, ನಾನು ಭಾರತೀಯ ಪ್ರಧಾನ ಮಂತ್ರಿಯ ಸಂದರ್ಶನ ಪಡೆದುಕೊಂಡಿದ್ದೇನೆ. ನೀವು ಪ್ರಯತ್ನಿಸಿದರೆ, ಬಹುಶಃ ನೀವು ಕೂಡ ಸಂದರ್ಶಿಸಬಹುದು” ಎಂದಿದ್ದಾರೆ.
“ನನ್ನ ಕೆಲಸದ ಬಗ್ಗೆ ಟೀಕಿಸುವ ಮುನ್ನ – ಪೂರ್ಣ ಸಂದರ್ಶನ ಮತ್ತು ವೈರಲ್ ಆಗುತ್ತಿರುವ ತುಣುಕುಗಳನ್ನು ಗಮನಿಸಿ. ಎಲ್ಲರೂ ಸಂದರ್ಶನವನ್ನು ಕೂಲಂಕಷವಾಗಿ ಓದಬೇಕೆಂದು ನಾನು ಶಿಫಾರಸು ಮಾಡುತ್ತೇನೆ. ಓದಿದ ಬಳಿಕ, ಟೀಕೆಗಳನ್ನು ಆರಂಭಿಸಿ. ನಿಮ್ಮ ಟೀಕೆಗಳು ನಮ್ಮ ನೆಮ್ಮದಿಗೆ ಭಂಗ ಉಂಟುಮಾಡುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.