ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ರಾಜ್ಯದಲ್ಲಿ ವಿಶೇಷ ಸಂಚಲನ ಮೂಡಿಸಿದೆ. ಅದು ದೇಶಕ್ಕಾಗಿ, ದೇಶದ ಜನರ ಒಳಿತಿಗಾಗಿ ಕೆಲಸ ಮಾಡುತ್ತದೆ ಎಂದು ಕೇಂದ್ರ ಸಚಿವ, ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಹೇಳಿದರು.
ಬೀದರ್ ತಾಲೂಕಿನ ಖಾಶೆಂಪುರ್(ಪಿ) ಗ್ರಾಮದ ಹೊರವಲಯದ ಮಾಜಿ ಸಚಿವ ಜೆಡಿಎಸ್ ಬಂಡೆಪ್ಪ ಖಾಶೆಂಪುರ್ ಅವರ ನಿವಾಸದಲ್ಲಿ ಶುಕ್ರವಾರ ನಡೆದ ಜನತಾದಳ (ಜಾತ್ಯಾತೀತ) ಪಕ್ಷದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
“ಪ್ರಧಾನಿ ಮೋದಿ ಯಾವುದೇ ಜಾತಿ, ಧರ್ಮಕ್ಕಾಗಿ ಯೋಜನೆ ರೂಪಿಸಿಲ್ಲ. ದೇಶದ ಒಳಿತಿಗಾಗಿ ಯೋಜನೆಗಳನ್ನು ರೂಪಿಸಿದ್ದಾರೆ. ಕಿಸಾನ್ ಸಮ್ಮಾನ್, ಪ್ರಧಾನ ಮಂತ್ರಿ ಮುದ್ರಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳಿಂದ ರಾಷ್ಟ್ರದ ಜನತೆಯ ಬದುಕು ಸುಧಾರಣೆಯಾಗಿದೆ. ಬೀದರ್ ಲೋಕಸಭಾ ಕ್ಷೇತ್ರದಲ್ಲಿ ನಾನು ಕೂಡ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ” ಎಂದರು.
“ಕಳೆದ 65 ವರ್ಷಗಳಿಂದ ಕಾಂಗ್ರೆಸ್ ದರ್ಪದ ರಾಜಕೀಯ ಮಾಡಿಕೊಂಡು ಬಂದಿದೆ. ಭಾಲ್ಕಿಯಲ್ಲಿ ಕ್ರೀಡಾಂಗಣ ಸಹ ಇಲ್ಲ. ಬೀದರ್ ಹಿಂದುಳಿಯಲು ಈಶ್ವರ್ ಖಂಡ್ರೆ ಮತ್ತು ಖಂಡ್ರೆ ಪರಿವಾರವೇ ಕಾರಣವಾಗಿದೆ. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ, ಗೊಂದಲಗಳಿದ್ದರೆ ಅವುಗಳನ್ನು ಸರಿಪಡಿಸಿಕೊಂಡು ಒಟ್ಟಾಗಿ ಕೆಲಸ ಮಾಡಬೇಕು. ಈ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಲೀಡ್ ಕೊಡಬೇಕು” ಎಂದು ಖೂಬಾ ಮನವಿ ಮಾಡಿದರು.
ಮಾಜಿ ಸಚಿವ, ಜೆಡಿಎಸ್ ಪಕ್ಷದ ಹಿರಿಯ ನಾಯಕ ಬಂಡೆಪ್ಪ ಖಾಶೆಂಪುರ್ ಮಾತನಾಡಿ, “ಭಗವಂತ ಖೂಬಾ ಅವರು ಕೇಂದ್ರ ಸಚಿವರಾದ ಬಳಿಕ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರನ್ನು ಮತ್ತೊಮ್ಮೆ ಗೆಲ್ಲಿಸಲು ನಾವೆಲ್ಲರೂ ಪಣ ತೊಡಬೇಕಾಗಿದೆ. ಈ ಹಿಂದೆ ಜೆಡಿಎಸ್ ಪಕ್ಷ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಾಗ ನಮಗೆ ಹೆಚ್ಚಿನ ಬೆಂಬಲ ಇರಲಿಲ್ಲ. ಈಗ ನಾವು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಬಹುತೇಕರು ನಮಗೆ ಬೆಂಬಲ ಸೂಚಿಸಿದ್ದಾರೆ” ಎಂದರು.
“ರಾಜ್ಯ ಮತ್ತು ದೇಶದ ಒಳಿತಿಗಾಗಿ ಈ ಮೈತ್ರಿ ಅಗತ್ಯವಾಗಿದೆ. ರಾಜ್ಯದಲ್ಲಿನ ನೀರಾವರಿ ಯೋಜನೆಗಳಿಗೆ ಶಕ್ತಿ ಕೊಡುವ ಕೆಲಸ ಆಗಬೇಕಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವ್ಯಯಿಸುತ್ತಿದೆ. ಇದರಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಗೆ ಮೋಸ ಮಾಡುತ್ತಿದೆ. ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಸರ್ಕಾರ ದಿವಾಳಿಯಾಗುತ್ತಿದೆ. ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬರದಿದ್ದರೆ ಗ್ಯಾರಂಟಿ ಯೋಜನೆ ಬಂದ್ ಮಾಡ್ತಿವಿ ಅಂತ ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ” ಎಂದರು.
“ಲೋಕಸಭಾ ಚುನಾವಣೆಯಲ್ಲಿ ನಮ್ಮ ಎನ್‌ಡಿಎ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ ಲೀಡ್ ಕೊಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೀಫ್ ಕಂಪನಿಗಳಿಂದ ದೇಣಿಗೆ ಪಡೆದ ಬಿಜೆಪಿ; ದನದ ಹೆಸರಿನಲ್ಲಿ ಜನರನ್ನು ಕೊಲ್ಲುವುದು ಇನ್ನಾದರೂ ನಿಲ್ಲಲಿ
ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಾಪುರ, ಜೆಡಿಎಸ್ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂಜುರೆಡ್ಡಿ ನಿರ್ಣಾ, ರಾಜು ಕಾಡ್ಯಾಳ, ಶಾಂತಲಿಂಗ ಸಾವಳಗಿ, ದೇವೇಂದ್ರ ಸೋನಿ, ಸಜ್ಜದ್ ಸಾಹೇಬ್, ರಾಜಶೇಖರ ಜವಳೆ, ರಾಜು ಚಿಂತಾಮಣಿ, ಸಂತೋಷ ರಾಸೂರೆ, ವಿಜಯಕುಮಾರ್ ಖಾಶೆಂಪುರ್, ಬಸವರಾಜ ಹೆಡೆ, ಮಲ್ಲಿಕಾರ್ಜುನ ನೆಳ್ಗೆ, ಸಿದ್ರಾಮಪ್ಪ ಹೊಂಕೆ, ಶಿವರಾಜ ಹುಲಿ, ಜಗನಾಥರೆಡ್ಡಿ ನಿರ್ಣಾ, ಶಿವಕುಮಾರ್ ಪವಾರ್, ನಾರಾಯಣ್ ರೋಲ್ಯಾಕ್ಸ್ ಸೇರಿದಂತೆ ಅನೇಕರಿದ್ದರು,