ರಾಜ್ಯದ ಹಲವೆಡೆ ಭಾರೀ ಮಳೆ | ಸಿಡಿಲಿಗೆ ವಿಜಯಪುರದಲ್ಲಿ ಮಹಿಳೆ ಸಾವು: ಶಿವಮೊಗ್ಗ, ಗದಗದಲ್ಲಿ ಕುರಿಗಳು ಬಲಿ

Date:

Advertisements

ಬೆಳಗಾವಿ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಶಿವಮೊಗ್ಗ, ವಿಜಯಪುರ ಹಾಗೂ ಗದಗ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗಿದೆ. ವಿಜಯಪುರದಲ್ಲಿ ಮಹಿಳೆಯೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಗದಗ ಮತ್ತು ಶಿವಮೊಗ್ಗದಲ್ಲಿ ಸಿಡಿಲಿಗೆ ಕುರಿಗಳು ಬಲಿಯಾಗಿವೆ.

ಸಿಡಿಲು ಬಡಿದು 18 ಕುರಿಗಳು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರಿನ ಕೋಟೆ ಗ್ರಾಮದಲ್ಲಿ‌ ನಡೆದಿದೆ. ಗದಗ ಜಿಲ್ಲೆಯಲ್ಲಿಯೂ ಕೆಲವೆಡೆ ಮಳೆಯಾಗಿದ್ದು, ಕಿರಟಗೇರಿ ಗ್ರಾಮದಲ್ಲಿ ಸಿಡಿಲು ಬಡಿದು 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.

ಬಿಸಿಲಿನಿಂದ ಕಂಗೆಟ್ಟಿದ ಉತ್ತರ ಕರ್ನಾಟಕ, ಮಲೆನಾಡು ಸೇರಿ ರಾಜ್ಯದ 12 ಜಿಲ್ಲೆಗಳಲ್ಲಿ ಏ.12ರಂದು ಭಾರೀ ಮಳೆಯಾಗಿದೆ. ಶಿವಮೊಗ್ಗದಲ್ಲೂ ಮಳೆಯಾಗಿದ್ದು, ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಭಾರೀ ಮಳೆಯಾಗಿದೆ. ಬೆಣ್ಣೆ ನಗರಿ ದಾವಣಗೆರೆಯಲ್ಲಿಯೂ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಬಿಸಿಲಿನ ಬೇಗೆಗೆ ಬೆಂದು ಹೋಗಿದ್ದ ಜನರ ಮುಖದಲ್ಲಿ ಮಂದಹಾಸ ಮೂಡಿದೆ.

Advertisements

ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು, ಕೊಪ್ಪ ತಾಲೂಕಿನಾದ್ಯಂತ ಮಳೆಯಾಗಿದೆ. ಏ.12ರಂದು ಸಂಜೆ ಬೀದರ್ ಜಿಲ್ಲೆಯಾದ್ಯಂತ ಸುರಿದ ಬಿರುಗಾಳಿ ಸಹಿತ ಮಳೆಗೆ ಅಪಾರ ಹಾನಿಯಾಗಿದ್ದು, ಅವಾಂತರ ಸೃಷ್ಟಿಸಿದೆ.

ಬೀದರ್‌ನಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಕಮಲ ನಗರ ರೈಲ್ವೆ ನಿಲ್ದಾಣದಲ್ಲಿ ಬೃಹತ್ ಮರ ನೆಲಕ್ಕುರುಳಿದೆ. ಮದನೂರ ಗ್ರಾಮದಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿದೆ. ಅದೇ ಗ್ರಾಮದ ಮನೆಯ ಸೀಟ್ ಹಾರಿ ದಿನಬಳಕೆ ವಸ್ತುಗಳೆಲ್ಲ ಹಾನಿಯಾಗಿದ್ದು ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಪ್ರಿಲ್ 25ರವರೆಗೂ ಬೀದರ್ ಜಿಲ್ಲೆಯಲ್ಲಿ‌ ಮಳೆಯ ಮುನ್ಸೂಚನೆ ಇದೆ.

ಬೆಳಗಾವಿ ನಗರದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಅಬ್ಬರಿಸಿದೆ. ದಿಢೀರ್ ಮಳೆಯಿಂದ ಜನರು ವಾಹನ ಸವಾರರು ಕಂಗಾಲಾಗಿ ಪರದಾಡುವಂತಾಗಿತ್ತು. ಇನ್ನು ಬೋವಿ ಗಲ್ಲಿಯಲ್ಲಿ ಮಳಿಗೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿತ್ತು. ಜತೆಗೆ, ಬೆಳಗಾವಿ ಸುತ್ತಮುತ್ತಲಿನ ಪ್ರದೇಶದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.

ಸಿಡಿಲು ಬಡಿದು 18 ಕುರಿ ಸಾವು

ಶಿವಮೊಗ್ಗ ಜಿಲ್ಲೆಯ ನಾನಾಕಡೆ ಗುಡುಗು, ಗಾಳಿ ಸಹಿತ ಮಳೆಯಾಗಿದೆ. ಆಯನೂರು ಬಳಿ ಮರ ಬುಡಮೇಲಾಗಿ ಹೆದ್ದಾರಿಗೆ ಉರುಳಿತ್ತು. ಇದರಿಂದ ವಾಹನ ಸಂಚಾರ ವ್ಯತ್ಯಯವಾಗಿತ್ತು. ಇನ್ನು ಆಯನೂರು ಕೋಟೆ ಬಳಿ ಮೇಯಲು ಬಿಟ್ಟಿದ್ದ 18 ಕುರಿಗಳಿಗೆ ಸಿಡಿಲು ಬಡಿದು ಸಾವನ್ನಪ್ಪಿವೆ. ಸುಮಾರು ₹3 ಲಕ್ಷ ನಷ್ಟವಾಗಿದೆ ಎಂದು ಮಾಲೀಕ ಜಾಕೀರ್‌ ಹುಸೇನ್‌ ತಿಳಿಸಿದ್ದಾರೆ.

ಜಾಕಿರ್ ಹುಸೇನ್ ಕುರಿ ಸಾಕಾಣಿಕೆ ಮಾಡುತ್ತ ಜೀವನ ನಡೆಸುತ್ತಿದ್ದರು. ಶುಕ್ರವಾರ ಸಂಜೆ ಜಾಕಿರ್ ಅವರ ಮಕ್ಕಳು ಕುರಿಗಳನ್ನು ಮೇಯಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಮಕ್ಕಳಿಬ್ಬರಿಗೆ ಯಾವುದೇ ಗಾಯಗಳಾಗಿಲ್ಲ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಶು ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕುರಿ ಮತ್ತು ಉಣ್ಣೆ ವಿಭಾಗದ ಅಧಿಕಾರಿಗಳಿಗೂ ಜಾಕಿರ್ ಹುಸೇನ್ ಮಾಹಿತಿ ನೀಡಿದ್ದಾರೆ. ಕುರಿಗಳ ಸಾವಿನಿಂದ ಸುಮಾರು ₹3 ಲಕ್ಷ ನಷ್ಟವಾಗಿದ್ದು, ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ತಾಲೂಕಿನ ಕುಂಸಿ, ಆಯನೂರು, ಶಿವಮೊಗ್ಗ ಪಟ್ಟದ ವಿವಿಧೆಡೆ ಮಳೆಯಾಗಿದೆ.

ಹಿರೇಕೆರೂರು ಪಟ್ಟಣ ಮತ್ತು ರಟ್ಟಿಹಳ್ಳಿಯ ಸುತ್ತಮುತ್ತಲಿನ ಭಾಗದಲ್ಲಿ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ವರ್ಷಧಾರೆ ಸುರಿದಿದ್ದು, ಗಾಳಿಯ ಆರ್ಭಟಕ್ಕೆ ಕೆಲ ಮನೆಗಳ ಮೇಲ್ಛಾವಣಿ, ತಗಡಿನ ಶೀಟ್​​ಗಳು ಹಾರಿ ಹೋಗಿವೆ. ಕೆಲವೆಡೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಮೇಲ್ಛಾವಣಿಯ ತಗಡಿನ ಶೀಟ್ ಹಾರಿ ಹೋಗುವ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರು ಸುಮಾರು ಎರಡು ಗಂಟೆಗಳ ಕಾಲ ಸುರಿದ ವರುಣನ ಅಬ್ಬರದಿಂದ ಸಂತಸಗೊಂಡಿದ್ದಾರೆ.

ವಿಜಯಪುರದಲ್ಲಿ ಸಿಡಿಲು ಬಡಿದು ಒಟ್ಟು ನಾಲ್ವರು ಸಾವು

ವಿಜಯಪುರ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಭೀಕರ ಸಿಡಿಲಿಗೆ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಭಾರತಿ ಕೆಂಗನಾಳ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಈ ಮೂಲಕ ಬುಧವಾರ ರಾತ್ರಿಯಿಂದೀಚೆಗೆ ಜಿಲ್ಲೆಯಲ್ಲಿ ಸಿಡಿಲಬ್ಬರಕ್ಕೆ ಒಟ್ಟು ನಾಲ್ವರು ಬಲಿಯಾಗಿದ್ದಾರೆ.

ಮೊನ್ನೆ ಇಂಡಿ ತಾಲೂಕಿನಲ್ಲಿ ಸಿಡಿಲು ಬಡಿದು ಇಬ್ಬರು ಸಾವನಪ್ಪಿದ್ದರು. ಇಂಡಿ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಬೀರಪ್ಪ ಅವರಾಧಿ ಎಂಬ 16 ವರ್ಷದ ಬಾಲಕ ಮೃತಪಟ್ಟಿದ್ದರು. ಹೀರೇಮಸಳಿ ಗ್ರಾಮದಲ್ಲಿ ಸೋಮಶೇಖರ್ ಪಟ್ಟಣಶೆಟ್ಟಿ ಎಂಬ ರೈತ ಮೃತಪಟ್ಟಿದ್ದರು. ಚಡಚಣ ತಾಲೂಕಿನ ಹಾವಿನಾಳ ಗ್ರಾಮದಲ್ಲಿ ಸುನಂದಾ ಶ್ರೀಮಂತ ಡೊಳ್ಳಿ (50) ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ.

ಶುಕ್ರವಾರ ಇಂಡಿ ತಾಲೂಕಿನ ತಾಂಬಾದಲ್ಲಿ ದೇವರಿಗೆ ನೈವೇದ್ಯ ತೆಗೆದುಕೊಂಡು ಹೋಗುವಾಗ ಸಿಡಿಲು ಬಡಿದು ಭಾರತಿ ಹನುಮಂತ ಕೆಂಗನಾಳ (42) ಎಂಬ ಮಹಿಳೆ ಅಸುನೀಗಿದ್ದಾಳೆ.

ಧಾರವಾಡದಲ್ಲಿ ಧರೆಗುರುಳಿದ ಮರ

ಮಳೆ ಅಬ್ಬರಕ್ಕೆ 10 ವಿದ್ಯುತ್​ ಕಂಬಗಳು ಧರೆಗುರುಳಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುಳಿಕಟ್ಟಿಯಲ್ಲಿ ನಡೆದಿದೆ. ಶಿರಸಿ ಕಾವಲವಾಡ ಮಧ್ಯೆ ಇರುವ ಮೇನ್​ ವಿದ್ಯುತ್​ ಲೈನ್​ ಕಂಬಗಳು ಇದಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಹೊರವಲಯದಲ್ಲಿ ಚುನಾವಣೆ ಹಿನ್ನೆಲೆ ಸ್ಥಾಪಿಸಲಾಗಿದ್ದ ತಾತ್ಕಾಲಿಕ ಚೆಕ್‌ಪೋಸ್ಟ್‌ನ ತಗಡುಗಳು ಭಾರೀ ಗಾಳಿಗೆ ಹಾರಿ ಹೋಗಿದೆ.

ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ | ಮೂರು ದಿನ ಎನ್‌ಐಎ ಟ್ರಾನ್ಸಿಟ್ ರಿಮ್ಯಾಂಡ್​ಗೆ ಪ್ರಮುಖ ಆರೋಪಿಗಳು

ಗದಗದಲ್ಲಿ ಭಾರೀ ಮಳೆ

ಗದಗ ಜಿಲ್ಲೆಯಲ್ಲಿಯೂ ಕೆಲವೆಡೆ ಮಳೆಯಾಗಿದ್ದು, ಸಿಡಿಲು ಬಡಿದು 20 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಕಿರಟಗೇರಿ ಗ್ರಾಮದ ಹೊರ ವಲಯದಲ್ಲಿ ಶುಕ್ರವಾರ ನಡೆದಿದೆ.

ಮಳೆ ಹಿನ್ನೆಲೆಯಲ್ಲಿ ಕುರಿಗಾಹಿಗಳು ಮರದ ಕೆಳಗ 200 ಕ್ಕೂ ಹೆಚ್ಚು ಕುರಿಗಳನ್ನು ನಿಲ್ಲಿಸಿಕೊಂಡಿದ್ದರು. ಈ ವೇಳೆ ಮರದ ಬಳಿಯೇ ಸಿಡಿಲು ಬಡಿದಿದೆ. ಮುತ್ತಪ್ಪ ದೊಡ್ಡಮನಿ ಹಾಗೂ ಶಿವಪ್ಪ ಹರಿಜನ ಅವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ವಿಷಯ ತಿಳಿದು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದಿದ್ದಾರೆ.

ಮಳೆ ಮುನ್ಸೂಚನೆ

ರಾಜ್ಯದ ಕೆಲವೆಡೆ ಮುಂಗಾರು ಪೂರ್ವ ಮಳೆ ಆಗುತ್ತಿದ್ದು, ರಾಜ್ಯದಲ್ಲಿ ಇನ್ನೆರೆಡು ದಿನ ಇದೇ ರೀತಿ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇನ್ನೆರೆಡು ದಿನ ಹಗುರದಿಂದ ಸಾಧಾರಣ ಮಳೆಯಾಗಲಿದೆ. ರಾಜ್ಯದ ನಾನಾ ಜಿಲ್ಲೆಗಳಲ್ಲಿ ಏಪ್ರಿಲ್‌ 13ರಿಂದ 18ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದ ಕೆಲವು ದಿನದಿಂದ ಜಿಲ್ಲೆಯಲ್ಲಿ ತಾಪಮಾನ ಭಾರಿ ಏರಿಕೆಯಾಗಿತ್ತು. 40 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ತಲುಪಿತ್ತು. ಇದರಿಂದ ಜನರು ಕಂಗೆಟ್ಟಿದ್ದರು. ಜಿಲ್ಲೆಯ ವಿವಿಧೆಡೆ ಮಳೆಯಾಗಿದ್ದರಿಂದ ತಾಪಮಾನ ಇಳಿಕೆಯಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X