ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಂಕಿತರನ್ನು ವಿಚಾರಣೆಗಾಗಿ ಎನ್ಐಎ ಹತ್ತು ದಿನ ವಶಕ್ಕೆ ಪಡೆದಿದೆ.
ಎನ್‌ಐಎ ಇಬ್ಬರು ಪ್ರಮುಖ ಆರೋಪಿಗಳನ್ನು ಶುಕ್ರವಾರ (ಏ.12) ಪಶ್ಚಿಮ ಬಂಗಾಳದ ಮಿಡ್ನಾಪುರ್‌ದಲ್ಲಿ ಬಂಧಿಸಿದೆ. ವಶಕ್ಕೆ ಪಡೆದ ಇಬ್ಬರು ಶಂಕಿತರನ್ನು ಎನ್ಐಎ ಕೊಲ್ಕತ್ತಾದ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಿ ಇಬ್ಬರನ್ನು ಟ್ರಾನ್ಸಿಟ್ ರಿಮ್ಯಾಂಡ್ಗೆ ನೀಡುವಂತೆ ಮನವಿ ಮಾಡಿತ್ತು. ಅದರಂತೆ, ನ್ಯಾಯಾಲಯ 3 ದಿನಗಳ ಟ್ರಾನ್ಸಿಟ್ ರಿಮ್ಯಾಂಡ್ಗೆ ಅನುಮತಿ ನೀಡಿತ್ತು. ಬಳಿಕ, ಹೆಚ್ಚಿನ ತನಿಖೆಗಾಗಿ ಅವರನ್ನು ಬೆಂಗಳೂರಿಗೆ ಕರೆದೊಯ್ಯಲು ಎನ್‌ಐಎಗೆ ಅನುಮತಿ ನೀಡಿತ್ತು.
ಅದಂತೆ, ಎನ್‌ಐಎ ಅಧಿಕಾರಿಗಳು ಪ್ರಮುಖ ಆರೋಪಿ, ಬಂಧಿತ ಮತೀನ್ ತಾಹಾ ಮತ್ತು ಮುಸಾವಿರ್ ಹುಸೇನ್‌ನನ್ನು ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಕರೆತಂದಿದ್ದಾರೆ.. ಏ.13ರ ಶನಿವಾರ ಕೋರಮಂಗಲದ ನ್ಯಾಯಾಧೀಶರ ನಿವಾಸದಲ್ಲಿ ಶಂಕಿತರನ್ನು ಎನ್‌ಐಎ ಹಾಜರುಪಡಿಸಿದೆ. ಆರೋಪಿಗಳನ್ನು ವಿಚಾರಣೆಗಾಗಿ ಹತ್ತು ದಿನ ವಶಕ್ಕೆ ನೀಡುವಂತೆ ನ್ಯಾಯಾಧೀಶರ ಎದುರು ಎನ್‌ಐಎ ಅಧಿಕಾರಿಗಳು ಮನವಿ ಮಾಡಿದ್ದು, ಅಧಿಕಾರಿಗಳ ಮನವಿಗೆ ನ್ಯಾಯಾಧೀಶರು ಒಪ್ಪಿಗೆ ಸೂಚಿಸಿದ್ದಾರೆ. ಮಡಿವಾಳದ ಇಂಟರಾಗೇಷನ್ ಸೆಲ್‌ನಲ್ಲಿ ಆರೋಪಿಗಳ ವಿಚಾರಣೆ ನಡೆಯಲಿದೆ.
ನಕಲಿ ವಿಳಾಸ ನೀಡಿದ್ದ ಶಂಕಿತರು
ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿ ಪರಾರಿಯಾಗಿದ್ದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮದ್ ತಾಹಾ, ಪಶ್ಚಿಮ ಬಂಗಾಳದ ಹೋಟೆಲ್‌ವೊಂದರಲ್ಲಿ ಕೊಠಡಿ ಪಡೆಯಲು ಹಾಗೂ ತನಿಖಾ ಸಂಸ್ಥೆಯ ದಿಕ್ಕು ತಪ್ಪಿಸಲು ನಕಲಿ ಆಧಾರ್ ಕಾರ್ಡ್‌ಗೆ ಕಲಬುರಗಿ ವಿಳಾಸ ನಮೂದಿಸಿದ್ದರು ಎಂಬ ಮಾಹಿತಿ ತನಿಖೆಯಿಂದ ಪತ್ತೆಯಾಗಿದೆ.
ಕೋಲ್ಕತ್ತ ಮಹಾನಗರಕ್ಕೆ ಹೊಂದಿಕೊಂಡಿರುವ ಪೂರ್ವ ಮೇದಿನಿಪುರ ಜಿಲ್ಲೆಯ ಹೋಟೆಲ್‌ನಲ್ಲಿ ಮುಸಾವೀರ್ ಹಾಗೂ ಅಬ್ದುಲ್ ಮಥೀನ್ ತಂಗಿದ್ದರು. ಹೋಟೆಲ್ ಕೊಠಡಿಯಲ್ಲಿಯೇ ಇಬ್ಬರೂ ಎನ್‌ಐಎಗೆ ಸಿಕ್ಕಿಬಿದ್ದಿದ್ದರು.
ಶಂಕಿತ ಮತೀನ್ ಹಾಗೂ ಮುಸ್ಸಾವೀರ್ ಇಬ್ಬರೂ ನಕಲಿ ಆಧಾರ್ ಕಾರ್ಡ್ ತಯಾರಿಸಿಕೊಂಡಿದ್ದರು. ಕೋಲ್ಕತ್ತಾ, ಬೆಂಗಳೂರು, ಚೆನ್ನೈ ಸೇರಿದಂತೆ ಹೋದ ಕಡೆ ವಾಸಕ್ಕೆ ಕೊಠಡಿ ಬಾಡಿಗೆ ಪಡೆಯಲು ಈ ನಕಲಿ ಆಧಾರ್ ಕಾರ್ಡ್ ತೋರಿಸುತ್ತಿದ್ದರು.
ಕಲಬುರಗಿಯ ವರ್ದಾನಗರ ನಿವಾಸಿಯಾಗಿರುವ ಅನಮೂಲ ಕುಲಕರ್ಣಿ ಎಂಬ ಯುವಕನ ನಕಲಿ ಆಧಾರ ಕಾರ್ಡ್ ಆರೋಪಿಗಳ ಬಳಿ ಇತ್ತು. ಟೆಕ್ಕಿ ಅನಮೂಲ ಕುಲಕರ್ಣಿ ಸದ್ಯ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶಂಕಿತರಿಗೆ ಅನಮೂಲ ಕುಲಕರ್ಣಿ ಅವರ ಆಧಾರ ಕಾರ್ಡ್ ಸಿಕ್ಕಿದ್ದಾದರು ಹೇಗೆ? ಅನಮೂಲ ಕುಲಕರ್ಣಿ ಅವರ ಆಧಾರ ಕಾರ್ಡ್ ಅನ್ನು ಆರೋಪಿಗಳು ಹೇಗೆ ಪಡೆದರು? ಈ ಬಗ್ಗೆ ಹಲವು ಆಯಾಮಗಳಲ್ಲಿ ಎನ್‌ಐಎ ತನಿಖೆ ನಡೆಸುತ್ತಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯದ ಹಲವೆಡೆ ಭಾರೀ ಮಳೆ | ಸಿಡಿಲಿಗೆ ವಿಜಯಪುರದಲ್ಲಿ ಮಹಿಳೆ ಸಾವು: ಶಿವಮೊಗ್ಗ, ಗದಗದಲ್ಲಿ ಕುರಿಗಳು ಬಲಿ
ಬೆಂಗಳೂರಿನ ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ 43 ದಿನಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಶಂಕಿತರನ್ನು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾ ಸಮೀಪ ಎನ್‌ಐಎ ಕಾರ್ಯಾಚರಣೆ ನಡೆಸಿ ಶುಕ್ರವಾರ ಮುಂಜಾನೆ ಬಂಧಿಸಿತ್ತು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಸಾವೀರ್ ಹುಸೇನ್ ಶಾಜಿಬ್ ಹಾಗೂ ಅಬ್ದುಲ್ ಮತೀನ್ ತಾಹಾ ಬಂಧಿತರು. ಈ ಪೈಕಿ ಮುಸಾವೀರ್ ಕೆಫೆಯಲ್ಲಿ ಬಾಂಬ್ ಇಟ್ಟಿದ್ದರೆ, ಮತೀನ್ ಇಡೀ ಪ್ರಕರಣದ ಮಾಸ್ಟರ್‌ಮೈಂಡ್ ಎಂದು ಎನ್‌ಐಎ ಮಾಹಿತಿ ನೀಡಿದೆ.