ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿ ತಮ್ಮನ್ನು ಇಡಿ ಬಂಧಿಸಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.15) ವಿಚಾರಣೆ ನಡೆಸಲಿದೆ.
ದೆಹಲಿ ಅಬಕಾರಿ ನೀತಿ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿದೆ. ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 9ರಂದು (ಮಂಗಳವಾರ) ಸುದೀರ್ಘ ವಿಚಾರಣೆ ನಡೆಸಿದ ನ್ಯಾ. ಸ್ವರಣಾ ಕಾಂತ ಶರ್ಮಾ ಅವರು ಇಡಿ ಬಂಧನ ಕಾನೂನು ಬದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ಅಲ್ಲದೇ, ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದರು.
ಹೈಕೋರ್ಟ್ ಆದೇಶದ ವಿರುದ್ಧ ಕೇಜ್ರಿವಾಲ್ ಸುಪ್ರೀಂ ಕೋರ್ಟ್‌ಗೆ ಬುಧವಾರ ಮೇಲ್ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ತಮ್ಮ ಮೇಲ್ಮನವಿಯನ್ನು ಆದಷ್ಟು ಬೇಗ ವಿಚಾರಣೆಗೆ ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಏಪ್ರಿಲ್ 15ರಂದು ವಿಚಾರಣೆ ನಡೆಸಲಿದೆ.
ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿದ್ದು, ವಿಚಾರಣೆ ಬಳಿಕ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದೆ. ಏಪ್ರಿಲ್ 15 ರವರೆಗೆ ಕೇಜ್ರಿವಾಲ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅಪರಿಚಿತ ವಾಹನ ಡಿಕ್ಕಿ: ಫ್ಲೈ ಓವರ್‌ನಿಂದ ಬಿದ್ದು ಯುವಕ ಸಾವು
“ಸಾರ್ವತ್ರಿಕ ಲೋಕಸಭಾ ಚುನಾವಣೆ ಮುನ್ನ ಇಡಿ ನನ್ನನ್ನು ಬಂಧಿಸಿದೆ. ಇದು ಪ್ರಜಾಪ್ರಭುತ್ವದ ತತ್ವದ ಮೇಲಿನ ದಾಳಿ. ನನ್ನ ವಿರುದ್ಧ ಹಾಕಲಾಗಿರುವ ಪ್ರಕರಣ ಕಾನೂನುಬಾಹಿರವಾಗಿದೆ. ಹಾಗಾಗಿ, ನನ್ನನ್ನು ಬಿಡುಗಡೆ ಮಾಡಬೇಕು” ಎಂದು ಸುಪ್ರೀಂಕೋರ್ಟ್‌ಗೆ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಮಾರ್ಚ್ 21ರ ರಾತ್ರಿ ಕೇಜ್ರಿವಾಲ್ ಅವರನ್ನು ಬಂಧಿಸಿದ್ದರು. ಮಾರ್ಚ್ 22 ರಂದು ವಿಚಾರಣಾ ನ್ಯಾಯಾಲಯವು ಅವರನ್ನು ಆರು ದಿನ ಇಡಿ ಕಸ್ಟಡಿಗೆ ನೀಡಿತು. ಅದನ್ನು ಇನ್ನೂ ನಾಲ್ಕು ದಿನಗಳವರೆಗೆ ವಿಸ್ತರಿಸಲಾಯಿತು. ಏಪ್ರಿಲ್ 1 ರಂದು ಅವರನ್ನು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.