ದಾವಣಗೆರೆ ಜಿಲ್ಲೆಯ ಪಂಚಮಸಾಲಿ ನಾಯಕರು ಪ್ರಸ್ತುತ ಲೋಕಸ ಚುನಾವಣೆಯಲ್ಲಿ ತಟಸ್ಥವಾಗಿ ಇರಬೇಕು ಎಂದು ಪಂಚಮಸಾಲಿ ಸ್ವಾಭಿಮಾನ ಯುವಪಡೆ ಒತ್ತಾಯಿಸಿದೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಯುವಪಡೆಯ ಕಾರ್ಯದರ್ಶಿ ಮಂಜುನಾಥ್ ಸುಗ್ಗೇರ್ ಮಾತನಾಡಿ, “ದಾವಣಗೆರೆ ಜಿಲ್ಲೆ ಆದಾಗಿನಿಂದಲೂ ಸರ್ಕಾರಗಳು ಬದಲಿ ಆದರೂ ಒಂದು ಸಮುದಾಯದ್ದೇ ಆಡಳಿತವಿದೆ. ಪಂಚಮಸಾಲಿ ಸಮಾಜದ ಮಹಿಮಾ ಪಟೇಲ್, ಎಚ್ ಎಸ್ ಶಿವಶಂಕರ್, ತೇಜಸ್ವಿ ಪಟೇಲ್ ಹಾಗೂ ಎಚ್ ಎಸ್ ನಾಗರಾಜ್ ಅವರೊಂದಿಗೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಹೇಗೆ ನಡೆದುಕೊಂಡಿದ್ದಾರೆ ಎಂಬುದನ್ನು ಅವಲೋಕಿಸಬೇಕಾದ ಸುಸಂದರ್ಭ ಬಂದಿದೆ” ಎಂದರು.
“ಎಸ್ ಎಸ್ ಮಲ್ಲಿಕಾರ್ಜುನ ಅವರು ಸಚಿವರಾಗಿದ್ದರೂ 2014ರ ಲೋಕಸಭಾ ಚುನಾವಣೆಯಲ್ಲಿ ಮಹಿಮಾ ಪಟೇಲ್ ಅವರಿಗೆ ಟಿಕೆಟ್ ತಪ್ಪಿಸಲು ಸ್ಪರ್ಧಿಸಿದರು. ಜೆಡಿಎಸ್ ವರಿಷ್ಠರ ಮಾತಿನಂತೆ ನಡೆಯುವ ಶಿವಶಂಕರ್ ಒಂದು ಬಾರಿ ಕಾಂಗ್ರೆಸ್, ಒಂದು ಬಾರಿ ಬಿಜೆಪಿ ಬೆಂಬಲಿಸುತ್ತಾ ವೈಯಕ್ತಿಕ ವರ್ಚಸ್ಸನ್ನು ಕಳೆದುಕೊಳ್ಳುತ್ತಿದ್ದಾರೆ. ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಸಹಕಾರ ನೀಡಬೇಕೆಂಬ ಬೇಡಿಕೆಯೊಂದಿಗೆ ಜಿ ಎಂ ಸಿದ್ದೇಶ್ವರ ಅವರನ್ನು ಬೆಂಬಲಿಸುತ್ತಾ ಬಂದಿರುವ ಎಚ್ ಎಸ್ ನಾಗರಾಜ್ ಬರಿಗೈಯಲ್ಲಿ ಕೂತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕಾಂಗ್ರೆಸ್ನಲ್ಲಿ ಇಲ್ಲದಿದ್ದರೂ ಜಾತ್ಯತೀತ ನಿಲುವಿಗೆ ಬದ್ಧರಾಗಿ 2009ರಿಂದ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುತ್ತಾ ಬಂದ ತೇಜಸ್ವಿ ಪಟೇಲ್ ವಿಧಾನಸಭಾ ಚುನಾವಣೆಗೆ ಟಿಕೆಟ್ ತೆಗೆದುಕೊಳ್ಳುವುದು ಹಾಗಿರಲಿ, ಕನಿಷ್ಟ ಗೌರವವನ್ನೂ ಪಡೆಯಲಿಲ್ಲ. ಆದ್ದರಿಂದ ಈ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜ ತಟಸ್ಥವಾಗಿ, ಮತದಾನದಿಂದ ದೂರ ಉಳಿಯಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನಾಟಕ ಬಿಟ್ಟು ಪರಿಹಾರ ನೀಡಿ, ಇಲ್ಲವೇ ಮತ ಕೇಳಬೇಡಿ: ಕುರುಬೂರು ಶಾಂತಕುಮಾರ್
ಸುದ್ದಿಗೋಷ್ಟಿಯಲ್ಲಿ ಯುವ ಪಡೆಯ ಅಧ್ಯಕ್ಷ ಚನ್ನಬಸಪ್ಪ ಚಿಕ್ಕಮೇಗಳಗೆರೆ, ಶರಣಪ್ಪ ಸೇರಿದಂತೆ ಸಮಾಜದ ಇತರ ಬಾಂಧವರು ಇದ್ದರು.
