ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ದಾರಿತಪ್ಪಿದ ಮಗ ಎಂದು ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಮಂಡ್ಯದಲ್ಲಿ ಮಂಡ್ಯ ಜಿಲ್ಲಾ ಶ್ರಮಿಕನಗರ ನಿವಾಸಿಗಳ ಒಕ್ಕೂಟ ಆಯೋಜಿಸಿದ್ದ ‘ಶ್ರಮಿಕರ ಸ್ವಾಭಿಮಾನಿ ಗೆಲುವಿನ ಸಮಾವೇಶ’ದಲ್ಲಿ ಅವರು ಮಾತನಾಡಿದರು. “ಹೆಣ್ಣುಮಕ್ಕಳ ಬಗ್ಗೆ ಇಷ್ಟು ಕೆಳಮಟ್ಟಕ್ಕೆ ಇಳಿದು ಮಾತನಾಡಲು ಅವರಿಗೆ ನಾಚಿಕೆ, ಮಾನ ಮರ್ಯಾದೆ ಇಲ್ಲವೇ” ಎಂದು ಪ್ರಶ್ನಿಸಿದರು.
“ಕಳೆದ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರನ್ನು ‘ಗಂಡ ಸತ್ತ ಮುಂಡೆ’ ಎಂದು ಕರೆದಿದ್ದರು. ಆ ಕಾರಣಕ್ಕೆ, ಮಂಡ್ಯದ ಮಹಿಳೆಯರು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳಿಸಿದ್ದರು. ಈ ಬಾರಿಯ ಚುನಾವಣೆಯಲ್ಲೂ ಅಂತದ್ದೆ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ಈಗ ಮಹಿಳೆಯರು ಎಚ್ಚೆತ್ತುಕೊಳ್ಳಬೇಕು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ‘ಸರಿಯಾದ ಮಗ ಯಾರು, ಕಳ್ಳನನ್ನ ಮಗ ಯಾರು’ ಎಂಬುದನ್ನು ಮಂಡ್ಯದ ಜನರು ನಿರ್ಧರಿಸುತ್ತಾರೆ” ಎಂದರು.
“ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಮೈಸೂರಿನ ಮಹಾರಾಜರನ್ನು ನೋಡಲು ದಿಲ್ಲಿಯ ಮಹಾಪ್ರಭುಗಳು ಬಂದಿದ್ಧಾರೆ. ನಮ್ಮ ಮಹಾಪ್ರಭುಗಳು ಕೋವಿಡ್ ಕಾಲದಲ್ಲಿ ಯಾಕೆ ಬರಲಿಲ್ಲ. ಬರಗಾಲದಲ್ಲಿ ಯಾಕೆ ಬರಲಿಲ್ಲ” ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು.
“ಕಳೆದ ಸೆಪ್ಟಂಬರ್‌ನಲ್ಲಿ ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಆದರೆ, ಏಪ್ರಿಲ್ ಬಂದರೂ ಬರ ಪರಿಹಾರ ನೀಡಿಲ್ಲ. ಪರಿಹಾರ ಬಿಡುಗಡೆಗಾಗಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೋಗಿದೆ” ಎಂದು ತಿಳಿಸಿದರು.