ಭಾರತದ ಸಂವಿಧಾನ ಜಾತಿ, ಧರ್ಮ, ಬಡವ ಶ್ರೀಮಂತ ಎನ್ನದೆ ಎಲ್ಲರಿಗೂ ಸಮಾನತೆಯಿಂದ ಮತ ಚಲಾಯಿಸುವ ಹಕ್ಕು ನೀಡಿದೆ. ಆ ನಿಟ್ಟಿನಲ್ಲಿ ಮೇ 07ರಂದು ನಡೆಯುವ ಚುನಾವಣೆಯಲ್ಲಿ ಮತದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಿ ಎಂದು ಮುಂಡರಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವಿಶ್ವನಾಥ ಹೊಸಮನಿ ಅವರು ಕರೆ ನೀಡಿದರು.
ಮುಂಡರಗಿ ಪಟ್ಟಣದಲ್ಲಿ ಕಡ್ಡಾಯ ಮತದಾನ ಹಾಗೂ ಮತದಾನ ಜಾಗೃತಿಗಾಗಿ ತಾಲೂಕು ಸ್ವೀಪ್ ಸಮಿತಿ ಹಾಗೂ ಸರ್ಕಾರಿ ನೌಕರರ ವಿವಿಧ ವೃಂದಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೈಕ್ ಜಾಥಾ ಕಾರ್ಯಕ್ರಮಕ್ಕೆ ತಹಸೀಲ್ದಾರ ಧನಂಜಯ ಎಂ. ಅವರೊಂದಿಗೆ ಜಂಟಿಯಾಗಿ ಚಾಲನೆ ನೀಡಿ ಮಾತನಾಡಿದ ಅವರು, ಅರ್ಹ ಮತದಾರರು ತಪ್ಪದೇ ಮತ ಚಲಾಯಿಸುವುದರಿಂದ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ ಎಂದರು.
ಹಾಗಾಗಿ ಎಲ್ಲರೂ ತಪ್ಪದೇ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು. ಬೇರೆ ಸ್ಥಳಗಳಲ್ಲಿ ವಾಸವಿರುವ ನಿಮ್ಮ ಸಂಬಂಧಿಕರು, ನೆಂಟರ ಮತಗಳು ವ್ಯರ್ಥವಾಗದಂತೆ ಚಲಾಯಿಸಲು ಸ್ವಯಂಪ್ರೇರಣೆಯಿಂದ ತಿಳಿಸಿ ಮೇ ಏಳರಂದು ತಪ್ಪದೇ ಮತ ಚಲಾಯಿಸಲು ಮಾಹಿತಿ ನೀಡಿ ಎಂದರು.
ಇದೇ ವೇಳೆ ಮಾತನಾಡಿದ ತಹಸೀಲ್ದಾರ ಧನಂಜಯ. ಎಂ ಅವರು ನಾವೆಲ್ಲ ಭಾರತದ ಸಂವಿಧಾನದ ಅಡಿ ಮತದಾನದ ಹಕ್ಕನ್ನು ಬಳಸಿಕೊಳ್ಳುವ ಮೂಲಕ ಸದೃಢ ನಾಳೆಗಳಿಗಾಗಿ ಮತದಾನದ ಹಕ್ಕನ್ನು ತಪ್ಫದೇ ಚಲಾಯಿಸೋಣ. ಮೇ ಏಳರಂದು ಮತದಾನ ಮಾಡುವುದು ಅರ್ಹ ಮತದಾರರ ಜವಾಬ್ದಾರಿ ಹಬ್ಬ ಸಂಭ್ರಮದಂತಿರಲಿ. ಸಾರ್ವಜನಿಕರು ತಮ್ಮ ನೆರೆ ಹೊರೆಯಲ್ಲೂ ಉಳಿದವರಿಗೆ ಮತದಾನದ ಬಗೆಗೆ ಜಾಗೃತಿ ಮೂಡಿಸಿ ಮತ ಹಾಕಲು ತಿಳವಳಿಕೆ ಮೂಡಿಸಬೇಕು ಎಂದರು.
ತಾಲೂಕಿನ ಸರಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಸಂಘ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ, ದೈಹಿಕ ಶಿಕ್ಷಕರ ಸಂಘ, ಇನ್ನುಳಿದ ವೃಂದ ಸಂಘಗಳ ಸದಸ್ಯರು ಭಾಗವಹಿಸಿದ್ದ ಮತದಾನ ಜಾಗೃತಿ ಬೈಕ್ ಜಾಥಾ ತಾಲೂಕು ಪಂಚಾಯತಿ ಆವರಣದಿಂದ ಬಸ್ ನಿಲ್ದಾಣದ ಮಾರ್ಗವಾಗಿ ಅಂಬಾಭವಾನಿ ನಗರದಿಂದ ಹಾಯ್ದು ಮೇನ್ ಬಜಾರ್, ಕೋಟೆ ಭಾಗದ ಮೂಲಕ ಸಂಚರಿಸಿ ಕೊಪ್ಪಳ ಕ್ರಾಸ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾನದ ಘೋಷಣೆಗಳನ್ನು ಕೂಗಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಪಡ್ನೇಶ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ತಾಲೂಕು ಪಂಚಾಯತ್ ಸಿಬ್ಬಂದಿ, ತಾಲೂಕಿನ ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ, ದೈಹಿಕ ಶಿಕ್ಷಕರ ಸಂಘ, ಇನ್ನುಳಿದ ಶಿಕ್ಷಕರ ವೃಂದ ಸಂಘಗಳ ಸದಸ್ಯರು ಇದ್ದರು.
