ತುಮಕೂರು | ಅಧಿಕಾರಕ್ಕಾಗಿ ಊರೂರು ಅಲೆಯುವ ವಿ.ಸೋಮಣ್ಣ ಜಿಲ್ಲೆಗೆ ಬೇಕೆ? ಗೃಹ ಸಚಿವ ಪರಮೇಶ್ವರ್ ಪ್ರಶ್ನೆ

Date:

ರಾಜಕೀಯ ಅಧಿಕಾರಕ್ಕಾಗಿ ಗೋವಿಂದರಾಜ ನಗರ, ವರುಣ, ಚಾಮರಾಜನಗರ, ತುಮಕೂರು ಎಂದು ಅಲೆಯುತ್ತಿರುವ ವಿ.ಸೋಮಣ್ಣ, ಈ ಚುನಾವಣೆಯಲ್ಲಿ ಸೋತರೆ, ಮುಂದಿನ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಅವರ ವಿರುದ್ದ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡುತ್ತಾರೆ. ಅಧಿಕಾರಕ್ಕಾಗಿ ಈ ರೀತಿ ಊರೂರು ಅಲೆಯುವ ವ್ಯಕ್ತಿ ತುಮಕೂರು ಜಿಲ್ಲೆಗೆ ಬೇಕೆ? ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.

ತುಮಕೂರು ನಗರದ ಕುಣಿಗಲ್ ರಸ್ತೆಯ ಮಾರುತಿ ಮಹಾರಾಜ ಕನ್ವಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಕುರುಬ ಸಮಾಜದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಡೀ ದೇಶವೇ ಒಪ್ಪಿಕೊಳ್ಳುವಂತಹ ಸಿದ್ದರಾಮಯ್ಯನವರ ವಿರುದ್ದ ವರುಣಾದಲ್ಲಿ ಸ್ಪರ್ಧಿಸುವ ಇವರು, ಮುಂದೊಂದು ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ದವೇ ಶಿಕಾರಿಪುರದಲ್ಲಿ ಸ್ಪರ್ಧಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದರು.

ಇಂದು ನಡೆಯುತ್ತಿರುವ ಚುನಾವಣೆ ಸಂವಿಧಾನದ ಫಲದಿಂದ ರಾಜಕೀಯ ಅಧಿಕಾರ ದಕ್ಕಿಸಿಕೊಂಡಿರುವ ಅಹಿಂದ ಸಮುದಾಯ ಮತ್ತು ಜಾತಿಯ ಕಾರಣಕ್ಕೆ ನಿರಂತರ ಅಧಿಕಾರ ಅನುಭವಿಸುತ್ತಿರುವ ಮೇಲ್ವರ್ಗಗಳ ನಡುವೆ ನಡೆಯುತ್ತಿರುವ ಸಂಘರ್ಷವಾಗಿದೆ. ಈಗ ನಾವು ಎಚ್ಚೆತ್ತುಕೊಳ್ಳದೆ ಹೋದರೆ ಮುಂದೆಂದು ನಾವು ಅಧಿಕಾರದ ಹಂಚಿಗೂ ಬರಲು ಸಾಧ್ಯವಿಲ್ಲ. ಈ ಎಚ್ಚರಿಕೆಯನ್ನು ಎಲ್ಲ ಅಹಿಂದ ವರ್ಗಗಳು ಹೊಂದಿ, ಸಾಮಾಜಿಕ ನ್ಯಾಯ ಪ್ರತಿಪಾದಿಸುವ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವ ಮೂಲಕ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಿಂದುಳಿದ ವರ್ಗದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವುದು ಮತ್ತು ಅವರ ಜನಪರ ಆಡಳಿತ ವೈಖರಿಯನ್ನು ಬಹುತೇಕರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ, ಸಮಾಧಾನವಿಲ್ಲದೇ ಅವರ ವಿರುದ್ಧ ಅನವಶ್ಯಕ ಟೀಕೆಗಳನ್ನು ಮಾಡುತ್ತಿದ್ದಾರೆ. 15 ಬಾರಿ ಬಜೆಟ್ ಮಂಡಿಸಿದ್ದಾರೆ. ಯಾವ ಸಮುದಾಯಕ್ಕೆ, ಯಾವ ವಲಯಕ್ಕೆ ಎಷ್ಟು ಹಣ ಖರ್ಚು ಮಾಡಬೇಕು ಎಂಬ ಬುದ್ಧಿವಂತಿಕೆ ಇದೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ. ಹಿಂದುಳಿದ ವರ್ಗದ ವ್ಯಕ್ತಿ ಬುದ್ಧಿವಂತಿಕೆಯಿಂದ ಆಡಳಿತ ನಡೆಸುತ್ತಾನೆ ಎಂದರೆ ಹೇಗೆ ಸಹಿಸುತ್ತಾರೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕುರುಬ ಸಮುದಾಯದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಎಂಬ ಕಾರಣಕ್ಕೆ ಜಿಲ್ಲೆಯಲ್ಲಿ ಕುರುಬ ಸಮುದಾಯದ ಮುಖಂಡರಿಗೆ ಅಧಿಕಾರವನ್ನು ನಿರಾಕರಿಸಲಾಗದು. ಜಿಲ್ಲೆಯಲ್ಲಿಯೂ  ಕುರುಬ ಸಮುದಾಯದವರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಲ್ಲಿ 1ಅಥವಾ 2ರಲ್ಲಿ ಕುರುಬ ಸಮುದಾಯದ ಮುಖಂಡರಿಗೆ ಎಂ.ಎಲ್.ಎ ಟಿಕೆಟ್ ನೀಡಬೇಕೆಂಬ ಆಲೋಚನೆ ಇತ್ತು. ಮುಂದಿನ ದಿನಗಳಲ್ಲಿ ಪರಿಗಣಿಸುವ ಮೂಲಕ ಈ ಕೊರತೆಯನ್ನು ಸರಿಪಡಿಸಲಾಗುವುದು ಎಂದು ಡಾ.ಜಿ. ಪರಮೇಶ್ವರ್ ಭರವಸೆ ನೀಡಿದರು.

ಸ್ವಾತಂತ್ರ್ಯ, ಆಧುನಿಕತೆ ಬಂದು ಇಷ್ಟು ವರ್ಷವಾದರು ನಿಜವಾದ ಸಾಮಾಜಿಕ ಬದಲಾವಣೆ ಆಗಿದಿಯಾ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಜ್ಯೋತಿ ಬಾಫುಲೆ ಅವರು 1882ರಲ್ಲಿ ದೇಶದಲ್ಲಿ ವರ್ಣ ಪದ್ದತಿ ಮೇಲೆ ವರ್ಗೀಕರಣವಾಗಿರುವ ಕುರಿತು ಬ್ರಿಟಿಷರಿಗೆ ಪತ್ರ ಬರೆಯುತ್ತಾರೆ. ಅಧಿಕಾರ, ಆಸ್ತಿ, ಸಂಪತ್ತು ಕೆಲವರಿಗೆ ಸೀಮಿತವಾಗಿದೆ. ಸವಲತ್ತು ಸಿಗದ ಜನರಿಗೆ ಮೀಸಲಾತಿ ಮೂಲಕ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದರು.

ಇದನ್ನು ಅರಿತ ಬ್ರಿಟಿಷರು ಹಿಂದುಳಿದ ವರ್ಗಗಳ ಆಯೋಗ ರಚಿಸುತ್ತಾರೆ. ಅಂದಿನಿಂದ ಈವರೆಗೂ ಶೋಷಣೆಯ ವಿರುದ್ಧ ಹೋರಾಟ ನಡೆಯುತ್ತಲೇ ಇದೆ. ನಮ್ಮ ಮಕ್ಕಳು ಎಷ್ಟು ದಿನ ಈ ಶೋಷಣೆಯನ್ನು ಸಹಿಸಿಕೊಂಡು ಮುಂದುವರೆಯಬೇಕು ಎಂದು ಪ್ರಶ್ನಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ಎಲ್ಲ ಸಮುದಾಯಗಳಿಗೆ ಸಮಾನವಾಗಿ ಹಂಚಲಾಗುವುದು ಎಂದು ಡಾ. ಜಿ.ಪರಮೇಶ್ವರ್ ನುಡಿದರು.

ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಮಾತನಾಡಿ, 2014ರ ಲೋಕಸಭಾ ಚುನಾವಣೆಯಲ್ಲಿ ಅನೇಕ ಅಹಿಂದ ಸಮುದಾಯಗಳು ನನ್ನ ಬೆನ್ನಿಗೆ ನಿಂತು ಗೆಲುವು ಸಾಧಿಸಲು ಕಾರಣವಾಗಿವೆ. ಈ ಬಾರಿಯ ಚುನಾವಣೆಯಲ್ಲಿಯೂ ಕುರುಬ ಸಮುದಾಯ ನನ್ನ ಗೆಲುವಿನಲ್ಲಿ ಪಾತ್ರ ವಹಿಸಬೇಕು. ನಿಮ್ಮ ನಂಬಿಕೆಯನ್ನು ಹುಸಿಗೊಳಿಸದೆ, ರಾಜ್ಯದ, ಜಿಲ್ಲೆಯ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತೇನೆ. ಸಂಸತ್ತಿನಲ್ಲಿ ಜಿಲ್ಲೆಯ ಕೊಬ್ಬರಿ, ನೀರಾವರಿ, ರೈತರ ಆತ್ಮಹತ್ಯೆ, ಎಚ್.ಎಂ.ಟಿ, ಎಚ್.ಎ.ಎಲ್, ಮಹದಾಯಿ, ಮೇಕೆದಾಟು ಯೋಜನೆಗಳ ಕುರಿತು ಮಾತನಾಡಿದ್ದೇನೆ. ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿ ಮಾತನಾಡಿದ್ದೇನೆ. ತಮ್ಮ ಸಂಸದ ಜೀವನದಲ್ಲಿಯೇ ಒಮ್ಮೆಯೂ ಮಾತನಾಡಿದ ವ್ಯಕ್ತಿಯ ಮಾತು ಕೇಳಿ ಹೊರಗಿನವರಿಗೆ ಮತ ಹಾಕುವುದರಿಂದ ಜಿಲ್ಲೆಯ ಸ್ವಾಭಿಮಾನಕ್ಕೆ ಧಕ್ಕೆಯಾಗಲಿದೆ ಎಂದರು.

ಶಾಸಕ ಎಸ್.ಅರ್. ಶ್ರೀನಿವಾಸ್ ಮಾತನಾಡಿ, ಈ ದೇಶದ ಸಮರ್ಥ ಒಬಿಸಿ ನಾಯಕ ಎಂದರೆ, ಅದು ಸಿದ್ದರಾಮಯ್ಯ. ಮಹಾನ್ ಸುಳ್ಳುಗಾರ ಮೋದಿಯನ್ನು ಎದುರಿಸುವ ಸಾಮರ್ಥ್ಯ ಇರುವುದು ಸಿದ್ದರಾಮಯ್ಯ ಅವರಿಗೆ ಮಾತ್ರ. ಹಾಗಾಗಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಅವರ ಕೈ ಬಲಪಡಿಸಬೇಕಿದೆ. ನೇತ್ರಾವತಿ ತಿರುವಿನಲ್ಲಿಯೇ ಕಾಲ ಕಾಲದ ಜಿ.ಎಸ್. ಬಸವರಾಜು ಅವರ ಮಾತು ಕೇಳಿ ಬಿಜೆಪಿಗೆ ಮತ ನೀಡಿದರೆ, ಮೋದಿ ಹೇಳುವ ಸುಳ್ಳಿನ ರೈಲಿಗೆ ಮತ್ತೊಂದು ಬೋಗಿ ಸೇರ್ಪಡೆಯಾದಂತೆ ಸರಿ. ಜಿ.ಎಸ್.ಟಿ. ಪಾಲು ನೀಡುವಲ್ಲಿ, ಎನ್.ಡಿ.ಅರ್.ಎಫ್ ಪರಿಹಾರ ನೀಡದೆ ಕರ್ನಾಟಕದ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಬಿಜೆಪಿಯನ್ನು ಸೋಲಿಸಿ, ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂಬುದು ಮನವಿ ಮಾಡಿದರು.

ಅಹಿಂದ ಮುಖಂಡ ರಾಮಚಂದ್ರಪ್ಪ ಮಾತನಾಡಿ, ಈ ರಾಜ್ಯದ ಶೇ.80ರಷ್ಟು ಕುರುಬ ಸಮುದಾಯದ ಕಾಂಗ್ರೆಸ್ ಪಕ್ಷದೊಂದಿಗೆ ಇದೆ. ದೇಶದಲ್ಲಿ ಸಾಮಾಜಿಕ ನ್ಯಾಯ ಎಂಬುದು ಉಳಿದಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ. ಬಿಜೆಪಿ ಆರ್.ಎಸ್.ಎಸ್ ಅಜೆಂಡಾ ಜಾರಿ ಮಾಡುವ ಕೆಲಸವನ್ನಷ್ಟೇ ಮಾಡುತ್ತಿದೆ. ಜೆಡಿಎಸ್ ಪಕ್ಷ ಕೋಮುವಾದಿ ಪಕ್ಷದೊಂದಿಗೆ ಸೇರಿ, ಜಾತ್ಯಾತೀತ ಎಂಬ ಹೆಸರಿಗೆ ಕಳಂಕ ತಂದಿದೆ ಎಂದರು.

ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ಮುದ್ದಹನುಮೇಗೌಡರು ಸಂಸದರಾಗಿದ್ದ ಕಾಲದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ನಡೆದಿವೆ. ರಾಷ್ಟ್ರೀಯ ಹೆದ್ದಾರಿ 206ರ ಆಗಲೀಕರಣ, ಎಚ್.ಎ.ಎಲ್ ಸೇರಿದಂತೆ ಹಲವು ಕೆಲಸಗಳು ನಡೆದಿವೆ. ಮುಂದಿನ ದಿನಗಳಲ್ಲಿ ಕುರುಬ ಸಮಾಜದ ಮುಖಂಡರಿಗೆ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಪಕ್ಷದ ವರಿಷ್ಠರು ನೀಡಲಿದ್ದಾರೆ ಎಂದರು.

ರಾಜ್ಯ ವಕ್ತಾರ ನಿಕೇತರಾಜ್ ಮೌರ್ಯ ಮಾತನಾಡಿ, ಬಿಜೆಪಿ ತನ್ನ ವೈಫಲ್ಯಗಳು ಜನರಿಗೆ ತಿಳಿಯದಂತೆ ಮಾಧ್ಯಮಗಳ ಮೂಲಕ ಷಡ್ಯಂತ್ರ ರೂಪಿಸಿದೆ. ಒಂದು ಕಡೆಯಿಂದ ಚೀನಾ ಭಾರತದ ಭೂ ಭಾಗದಲ್ಲಿ ರಸ್ತೆ ನಿರ್ಮಿಸಿ, ಗ್ರಾಮಗಳನ್ನು ನಿರ್ಮಿಸಿದೆ.ಆದರೆ ಇದ್ಯಾವುದು ನಡೆದೇ ಇಲ್ಲವೆಂಬಂತೆ ಮಾಧ್ಯಮಗಳು ಬಿಂಬಿಸುತ್ತಿವೆ.ಇವುಗಳನ್ನು ಸಂಸತ್ತಿನಲ್ಲಿ ಸಮರ್ಥವಾಗಿ ಹೊರಗೆಳೆಯಲು ಕಾಂಗ್ರೆಸ್‌ನ ಮುದ್ದಹನುಮೇಗೌಡರಂತಹ ರಾಜಕಾರಣಿಗಳು ಸಂಸತ್ ಸದಸ್ಯರಾಗಬೇಕು. ಇದಕ್ಕಾಗಿ ಕುರುಬ ಸಮುದಾಯ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮತ ನೀಡುವಂತೆ ಮನವಿ ಮಾಡಿದರು.

ಕುರುಬ ಸಮುದಾಯದ ಮುಖಂಡ ಅನಿಲ್‌ಕುಮಾರ್, ಜಿಲ್ಲೆಯಲ್ಲಿ ಸುಮಾರು 2.50 ಲಕ್ಷ ಮತದಾರಿರುವ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 1.80ರಷ್ಟು ಮತದಾರರನ್ನು ಹೊಂದಿರುವ ಕುರುಬ ಸಮುದಾಯಕ್ಕೆ ಜಿಲ್ಲೆಯಲ್ಲಿ ರಾಜಕೀಯವಾಗಿ ಯಾವುದೇ ಪ್ರಾತಿನಿಧ್ಯ ಇಲ್ಲ.ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಸರಕಾರಿ ನೇಮಕಾತಿಗಳಲ್ಲಿ ಹೆಚ್ಚಿನ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ವೇದಿಕೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ್ ಹಾಲಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಇಕ್ಬಾಲ್ ಅಹಮದ್, ಕೆಪಿಸಿಸಿ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥ ನಿಕೇತ್‌ರಾಜ್ ಮೌರ್ಯ, ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರ, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಕುರುಬ ಸಂಘದ ಜಿಲ್ಲಾಧ್ಯಕ್ಷ ಸುರೇಶ್, ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹ್ಮದ್, ಸೋಮಶೇಖರ್, ರುದ್ರಪ್ಪ, ಟಿ.ಇ.ರಘುರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಆಗಸ್ಟ್ 15ರಂದು ಕೋರಮಂಗಲ ರಾಜಕಾಲುವೆ ಉದ್ಘಾಟನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೋರಮಂಗಲ ಕಣಿವೆ ಜಲಮಾರ್ಗ (ರಾಜಕಾಲುವೆ)...

ಬಿಬಿಎಂಪಿ | 3 ವರ್ಷಗಳ ಬಳಿಕ ಎಲ್‌ಇಡಿ ದೀಪ ಅಳವಡಿಕೆ ಯೋಜನೆಗೆ ಮರುಜೀವ

ಬೆಂಗಳೂರಿನಲ್ಲಿ 5 ಲಕ್ಷ ಎಲ್‌ಇಡಿ ಬೀದಿದೀಪ ಅಳವಡಿಸುವ ಯೋಜನೆಯನ್ನು ಮೂರು ವರ್ಷಗಳ...

ಬೆಂಗಳೂರು | ಡೆಲಿವರಿ ಎಕ್ಸಿಕ್ಯೂಟಿವ್ ಮೇಲೆ ಹಲ್ಲೆ ನಡೆಸಿದ ನಾಲ್ವರ ಬಂಧನ

ಡೆಲಿವರಿ ಬಾಯ್ ಮೇಲೆ ಬಿಯರ್ ಬಾಟಲ್ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ...

ಬೆಂಗಳೂರು | ಹೊಸ ಕಾರಿನ ಮೇಲೆ ಬಿದ್ದ ದೊಡ್ಡ ಮರ; ಕಾರು ಸಂಪೂರ್ಣ ಜಖಂ

ಹೊಚ್ಚ ಹೊಸ ಕಾರಿನ ಮೇಲೆ ದೊಡ್ಡ ಒಣಗಿದ ಮರ ಬಿದ್ದು, ಕಾರು...