ಋತುರಾಜ್ ಗಾಯಕ್ವಾಡ್ (69), ಶಿವಂ ದುವೆ (66) ಮತ್ತು ಎಂ ಎಸ್ ಧೋನಿ (ಅಜೇಯ 20) ಅವರ ಬ್ಯಾಟಿಂಗ್ ಕಲರವ ಮತ್ತು ಮತೀಶಾ ಪತಿರಾಣ ಅವರ (28/4) ಅದ್ಭುತ ಬೌಲಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.
ಪ್ರಸಕ್ತ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ತವರಿನಿಂದ ಹೊರಗೆ ಚೆನ್ನೈ ಜಯಗಳಿಸಿತು. ರೋಹಿತ್ ಶರ್ಮಾ ಸಿಡಿಸಿದ ಶತಕದ ಹೊರತಾಗಿಯೂ ಮುಂಬೈ 20 ರನ್‌ಗಳ ಅಂತರದಿಂದ ಸೋಲನುಭವಿಸಿದೆ. ಹಾರ್ದಿಕ್ ಪಡೆಗೆ ಇದು ಟೂರ್ನಿಯಲ್ಲಿ 4ನೇ ಸೋಲಾಗಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಆವೃತ್ತಿಯ 29ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್‌ಕೆ ಬೃಹತ್ ಮೊತ್ತ ದಾಖಲಿಸಿತು. ಋತುರಾಜ್ ಮತ್ತು ದುಬೆ ತಲಾ ಅರ್ಧಶತಕ ಸಿಡಿಸಿದರೆ, ಕೊನೆಯಲ್ಲಿ ಧೋನಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಅಂತಿಮವಾಗಿ ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿತು.
ಈ ಗುರಿ ಬೆನ್ನಟ್ಟಿದ ಮುಂಬೈ ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್ ಹೊರತಾಗಿಯೂ ಗೆಲುವು ತಂದುಕೊಡಲಾಗಲಿಲ್ಲ. ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೆ ಸಾಧ್ಯವಾಯಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ
ಮೊದಲು ಭರ್ಜರಿ ಆರಂಭ ಪಡೆದ ಮುಂಬೈ, 7 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 70 ರನ್ ಕಲೆ ಹಾಕಿತು. ಆರಂಭಿಕ ಆಟಗಾರ ಇಶಾನ್ ಕಿಶನ್ 23 ರನ್‌ಗಳಿಸಿ ಔಟಾದರು. ಕಳೆದ ಪಂದ್ಯದಲ್ಲಿ ಸ್ಪೋಟಕ ಆಟವಾಡಿದ್ದ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಶೂನ್ಯಕ್ಕೆ ಪೆವಿಲಿಯನ್‌ಗೆ ತೆರಳಿಸಿದರು.
ಒಂದೇ ಓವರ್‌ನಲ್ಲಿ ಇಬ್ಬರು ಆಟಗಾರರನ್ನು ಮತೀಶಾ ಪತಿರಾಣ ಶೂನ್ಯಕ್ಕೆ ಔಟ್ ಮಾಡಿದರು. ಇವೆಲ್ಲದರ ನಡುವೆಯೂ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಕೊನೆಯವರೆಗೂ ಭರ್ಜರಿ ಬ್ಯಾಟಿಂಗ್ ನಡೆಸಿದರು. ಐಪಿಎಲ್‌ನಲ್ಲಿ 2ನೇ ಶತಕ ಸಿಡಿಸಿದರೂ ಮುಂಬೈಗೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. 63 ಎಸೆತಗಳಲ್ಲಿ 13 ಬೌಂಡರಿ, 5 ಸಿಕ್ಸರ್ ಸಹಿತ 105 ನ್ ಗಳಿಸಿ ಅಜೇಯರಾಗಿ ಉಳಿದರು.
ಈ ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್‌ಕೆ, ಉತ್ತಮ ಆರಂಭ ಪಡೆಯಲಿಲ್ಲ. ಬಡ್ತಿ ಪಡೆದು ಆರಂಭಿಕನಾಗಿ ಕಣಕ್ಕಿಳಿದ ಅಜಿಂಕ್ಯ ರಹಾನೆ 5 ರನ್‌ಗೆ ವಿಕೆಟ್ ಒಪ್ಪಿಸಿದರು. ರಚಿನ್ ರವೀಂದ್ರ (21) ಕೂಡ ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲಿಲ್ಲ. ಜೆರಾಲ್ಡ್ ಕೊಯೆಟ್ಜಿ ಮತ್ತು ಶ್ರೇಯಸ್ ಗೋಪಾಲ್ ತಲಾ ಒಂದು ವಿಕೆಟ್ ಪಡೆದರು. ಬಳಿಕ ಜೊತೆಯಾದ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಶಿವಂ ದುಬೆ 3ನೇ ವಿಕೆಟ್‌ಗೆ 90 ರನ್‌ಗಳ ಜೊತೆಯಾಟವಾಡಿದರು.
ಅದ್ಭುತ ಅಟವಾಡಿದ ಈ ಜೋಡಿ, ತಲಾ ಅರ್ಧಶತಕ ಸಿಡಿಸಿ ಮಿಂಚಿದರು. ಋತುರಾಜ್ 40 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಿತ 69 ರನ್ ಬಾರಿಸಿದರೆ, ಶಿವಂ ದುಬೆ 38 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 66 ರನ್ ಚಚ್ಚಿದರು. ಕೊನೆಯಲ್ಲಿ ಬಂದ ಆಪತ್ಬಾಂಧವ ಧೋನಿ 4 ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಹಿತ 20 ರನ್ ಬಾರಿಸಿದರು. ಗೆಲುವಿಗೆ ಈ ರನ್ ಪ್ರಮುಖ ಕಾರಣವಾಯಿತು.
