ಕ್ಷತ್ರಿಯ ಸಮುದಾಯದ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ಕೇಂದ್ರ ಸಚಿವರೂ ಆಗಿರುವ ಬಿಜೆಪಿಯ ಹಿರಿಯ ನಾಯಕ ಪರ್ಷೋತ್ತಮ್ ರೂಪಾಲಾ ಅವರ ವಿರುದ್ಧ ಕ್ಷತ್ರಿಯರು ಬೃಹತ್ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಇದರಿಂದಾಗಿ ಬಿಜೆಪಿಗೆ ಗುಜರಾತ್‌ನಲ್ಲಿ ಭಾರೀ ಸಂಕಷ್ಟ ಉಂಟಾಗಿದೆ.
ಪರ್ಷೋತ್ತಮ್ ರೂಪಾಲಾ ಅವರ ಉಮೇದುವಾರಿಕೆಯನ್ನು ವಜಾಗೊಳಿಸುವಂತೆ ಒತ್ತಾಯಿಸಿ ಕ್ಷತ್ರಿಯ ಸಮುದಾಯವು ಬೃಹತ್ ಪ್ರತಿಭಟನೆಯನ್ನು ಭಾನುವಾರ ರಾಜ್‌ಕೋಟ್‌ನಲ್ಲಿ ನಡೆಸಿದ್ದು, ಎರಡು ಲಕ್ಷ ಜನರು ಈ ಬಿಜೆಪಿ ಸಚಿವರ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
Kshatriya agitation against BJP leader and minister in centre Parshottam Rupala has now turned in to a boycott of BJP. Massive protest happened in the BJP’s citadel Rajkot today. Tremors felt beyond the state boundry in Rajsthan too. https://t.co/1hxeNarls3
— Mehul Devkala (@MehulDevkala) April 14, 2024
ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕವಾದ ಏಪ್ರಿಲ್ 19 ರೊಳಗೆ ರೂಪಾಲಾ ಅವರನ್ನು ಪದಚ್ಯುತಗೊಳಿಸುವಂತೆ ಸಮುದಾಯದ ಮುಖಂಡರು ಆಡಳಿತಾರೂಢ ಬಿಜೆಪಿಗೆ ಗಡುವು ನೀಡಿದ್ದಾರೆ. ಅವರನ್ನು ಪದಚ್ಯುತಗೊಳಿಸದಿದ್ದರೆ ನಮ್ಮ ಈ ಪ್ರತಿಭಟನೆ ಇನ್ನಷ್ಟು ತೀವ್ರವಾಗಲಿದೆ ಎಂದು ಎಚ್ಚರಿಕೆಯನ್ನು ಕೂಡಾ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಗುಜರಾತ್| ಕ್ಷತ್ರಿಯ ಸಮುದಾಯದ ಪ್ರತಿಭಟನೆ; ಬಿಜೆಪಿಯಲ್ಲಿ ಮುಂದುವರಿದ ತಿಕ್ಕಾಟ
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜಕೋಟ್‌ನ ಅಭ್ಯರ್ಥಿ ಪರ್ಷೋತ್ತಮ್ ರೂಪಾಲಾ, “ಹಲವಾರು ರಜಪೂತ ಆಡಳಿತಗಾರರು ಬ್ರಿಟಿಷರಿಗೆ ಸಹಕಾರ ನೀಡಿದ್ದರು” ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆಯ ನಂತರ, ಕರ್ಣಿ ಸೇನಾದ ಮುಖ್ಯಸ್ಥ ರಾಜ್ ಶೆಖಾವತ್ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ರೂಪಾಲಾ ಅವರ ಹೇಳಿಕೆಯು ಕ್ಷತ್ರಿಯ ಸಮುದಾಯವನ್ನು ಕೆರಳಿಸಿದ್ದು ನಿರಂತರವಾಗಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ.
ರಾಜ್‌ಕೋಟ್ ಜಿಲ್ಲೆಯ ರತನ್‌ಪುರದಲ್ಲಿ 13 ಎಕರೆ ಕೃಷಿಭೂಮಿಯಲ್ಲಿ ವಿವಿಧ ರಜಪೂತ ಸಂಘಟನೆಗಳನ್ನು ಒಳಗೊಂಡ ಸಮನ್ವಯ ಸಮಿತಿಯು ಮೆಗಾ ರ್‍ಯಾಲಿಯನ್ನು ಆಯೋಜಿಸಿತ್ತು. ಸುಮಾರು ಎರಡು ಲಕ್ಷ ಜನ ಸೇರಿದ್ದರು ಎಂದು ವರದಿಯಾಗಿದೆ. ಕ್ಷತ್ರಿಯ ಸಮುದಾಯಕ್ಕೆ ಸೇರಿದ ಜನರು ಗುಜರಾತ್ ಮತ್ತು ನೆರೆಯ ರಾಜ್ಯಗಳಾದ ರಾಜಸ್ಥಾನ ಮತ್ತು ಮಹಾರಾಷ್ಟ್ರದಿಂದ ಬಂದು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಇದನ್ನು ಓದಿದ್ದೀರಾ? ಗುಜರಾತ್ ಬಿಜೆಪಿಯಲ್ಲಿ ಭಾರೀ ಕಲಹ; ಘರ್ಷಣೆಯಿಂದ ಆಸ್ಪತ್ರೆ ಸೇರಿದ ಕಾರ್ಯಕರ್ತರು
ತನ್ನ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ರೂಪಾಲಾ ಹಲವಾರು ಬಾರಿ ಕ್ಷಮೆಯಾಚಿಸಿದ್ದಾರೆ. ಆದರೆ ಸಮುದಾಯದ ಮುಖಂಡರು ಈ ಕ್ಷಮೆಯನ್ನು ಸ್ವೀಕರಿಸದೆ ಅವರನ್ನು ಪದಚ್ಯುತಗೊಳಿಸುವಂತೆ ಆಗ್ರಹಿಸಿದೆ. ಇತರೆ ಬಿಜೆಪಿ ಮುಖಂಡರೊಂದಿಗಿನ ಮಾತುಕತೆಯೂ ಕೂಡಾ ವಿಫಲವಾಗಿದೆ.
ರೂಪಾಲಾ ಅವರು ಏಪ್ರಿಲ್ 16 ರಂದು ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ. ರೂಪಾಲಾ ಅವರ ವಿರುದ್ಧ ಕ್ಷತ್ರೀಯರ ಆಕ್ರೋಶದಿಂದಾಗಿ ಆಡಳಿತಾರೂಢ ಬಿಜೆಪಿಯು ಮತ್ತಷ್ಟು ಸಂಕಷ್ಟದಲ್ಲಿ ಸಿಲುಕಿದೆ. ರಾಜಕೋಟ್‌ನಲ್ಲಿ ರೂಪಾಲಾ ಅವರೇ ಸ್ಪರ್ಧಿಸಿದರೆ ಪ್ರಭಾವಿ ಪಾಟಿದಾರ್ ಸಮುದಾಯದ ಕೆಂಗಣ್ಣಿಗೆ ಬಿಜೆಪಿ ಗುರಿಯಾಗಲಿದೆ.
ಗುಜರಾತ್‌ನಲ್ಲಿ 26 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ನಾಮಪತ್ರ ಸಲ್ಲಿಸಲು ಏಪ್ರಿಲ್ 19 ಕೊನೆಯ ದಿನಾಂಕವಾಗಿದ್ದು, 16 ರಂದು ರೂಪಾಲಾ ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ. 2002ರಲ್ಲಿ ರೂಪಾಲಾ ಅವರನ್ನು ಸೋಲಿಸಿದ್ದ ಮಾಜಿ ವಿರೋಧ ಪಕ್ಷದ ನಾಯಕ ಪರೇಶ್ ಧನಾನಿ ಅವರನ್ನೇ ಮತ್ತೆ ಕಾಂಗ್ರೆಸ್ ಕಣಕ್ಕಿಳಿಸಿದೆ. ಧನಾನಿ ಪಾಟಿದಾರ್ ಸಮುದಾಯದ ಲೆಯುವಾ ಬಣಕ್ಕೆ ಸೇರಿದವರಾಗಿದ್ದು ರೂಪಾಲಾ ಅವರ ಹೇಳಿಕೆಯಿಂದಾಗಿ ಪಾಟಿದಾರ್ ಸಮುದಾಯದ ಮತಗಳು ಬಿಜೆಪಿ ಕೈಜಾರಿ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ.