ಮಣಿಪುರದ ಜನರನ್ನು ವಿಭಜಿಸಲು ಪಿತೂರಿ ಮಾಡಲಾಗುತ್ತಿದೆ, ಆದರೆ ಬಿಜೆಪಿ ರಾಜ್ಯದ ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಹೇಳಿದರು.
ಮಣಿಪುರದಲ್ಲಿ ಬಿಜೆಪಿಯ ಅಭ್ಯರ್ಥಿ ತೌನೊಜಮ್ ಬಸಂತ ಕುಮಾರ್ ಸಿಂಗ್ ಪರವಾಗಿ ಇಂಫಾಲ್‌ನಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು, ಬಿಜೆಪಿ ರಾಜ್ಯವನ್ನು ಸುಭದ್ರಗೊಳಿಸಲಿದೆ ಎಂದು ಭರವಸೆ ನೀಡಿದರು.
“ಕಾಂಗ್ರೆಸ್ ಎಲ್ಲಿ ಹೋದರೂ ವಿಭಜನೆಯ ಬಗ್ಗೆ ಮಾತನಾಡುತ್ತದೆ. ಇದು ದೇಶವನ್ನು ವಿಭಜಿಸಿದೆ. ಈಗಲೂ ಕಾಂಗ್ರೆಸ್ಸಿಗರು ದೇಶವನ್ನು ಉತ್ತರ ಮತ್ತು ದಕ್ಷಿಣ ಭಾರತದ ರೀತಿಯಲ್ಲಿ ವಿಭಜಿಸಲು ಬಯಸುತ್ತಿದ್ದಾರೆ. ಮಣಿಪುರವನ್ನು ವಿಭಜಿಸಲೂ ಮುಂದಾಗಿದ್ದಾರೆ. ಆದರೆ ನಾನು ನಿಮಗೆ ಹೇಳುತ್ತೇನೆ, ನಾವು ಮಣಿಪುರವನ್ನು ವಿಭಜಿಸಲು ಬಿಡುವುದಿಲ್ಲ” ಎಂದು ಶಾ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆಗೂ ಮುನ್ನ ಮಣಿಪುರಕ್ಕೆ ಅಮಿತ್ ಶಾ ಭೇಟಿ ಸಾಧ್ಯತೆ
“ಒಳನುಸುಳುವಿಕೆ (ಅಕ್ರಮ ವಲಸೆ) ಮೂಲಕ ಸಣ್ಣ ರಾಜ್ಯದ ಜನಸಂಖ್ಯೆಯನ್ನು ಬದಲಾಯಿಸುವ ಪಿತೂರಿ ನಡೆಯುತ್ತಿದೆ ಎಂದು ನನಗೆ ತಿಳಿದಿದೆ. (ಭಾರತ-ಮ್ಯಾನ್ಮಾರ್) ಮುಕ್ತ ಚಲನೆಯ ಆಡಳಿತವನ್ನು ಮಾದಕ ದ್ರವ್ಯಗಳ ಕಳ್ಳಸಾಗಣೆಗಾಗಿ ದುರುಪಯೋಗ ಮಾಡಿಕೊಳ್ಳಲಾಗಿದೆ. ನಾವು ಮ್ಯಾನ್ಮಾರ್‌ಗೆ ಬೇಲಿ ಹಾಕಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದರು.
The Modi government ended the Free Movement Regime to thwart the conspiracy to change the demography of Manipur. pic.twitter.com/KwONIzjYDm
— Amit Shah (Modi Ka Parivar) (@AmitShah) April 15, 2024
“ಗಡಿಯಲ್ಲಿ ಈ ಕಾರ್ಯ ಆರಂಭವಾಗಿದೆ. ನಾವು ಮಣಿಪುರವನ್ನು ಸುಭದ್ರಗೊಳಿಸುತ್ತೇವೆ” ಎಂದ ಅಮಿತ್ ಶಾ ಮೈತಿಗಳು ಮತ್ತು ಕುಕಿಗಳನ್ನು ಒಳಗೊಂಡ ಜನಾಂಗೀಯ ಹಿಂಸಾಚಾರವನ್ನೂ ಉಲ್ಲೇಖಿಸಿದ್ದಾರೆ. “ಸಮಾಜದ ಎಲ್ಲಾ ವರ್ಗಗಳೊಂದಿಗೆ ಮಾತನಾಡುವ ಮೂಲಕ ರಾಜ್ಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವುದು ಮೋದಿ ಸರ್ಕಾರದ ಆದ್ಯತೆಯಾಗಿದೆ” ಎಂದು ಹೇಳಿದರು.
“ಆರು ವರ್ಷಗಳಿಂದ ಮಣಿಪುರದಲ್ಲಿ ಏನೂ ಆಗಿಲ್ಲ. ನಂತರ ಹಿಂಸಾಚಾರ ನಡೆದಿದೆ. ಮುಂದಿನ ದಿನಗಳಲ್ಲಿ ಶಾಂತಿ ಸ್ಥಾಪಿಸುವುದು ಮೋದಿ ಅವರ ಆದ್ಯತೆ ಎಂದು ನಾನು ಕಣಿವೆ ಮತ್ತು ಬೆಟ್ಟಗಳಲ್ಲಿ ಜೀವಿಸುವವರಿಗೆ ಹೇಳಲು ಬಯಸುತ್ತೇನೆ. ಯಾರು ಎಷ್ಟೇ ಪ್ರಯತ್ನಿಸಿದರೂ ಮಣಿಪುರವನ್ನು ವಿಘಟನೆ ಮಾಡಲು ಬಿಡುವುದಿಲ್ಲ. ಎರಡೂ ಸಮುದಾಯಗಳೊಂದಿಗೆ ಮಾತುಕತೆ ನಡೆಸುವ ಮೂಲಕ ಶಾಂತಿಯನ್ನು ತರಲು ಮೋದಿ ಸರ್ಕಾರ ಬದ್ಧವಾಗಿದೆ” ಎಂದರು.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ | ಜೂನ್ 24 ರಂದು ಸರ್ವಪಕ್ಷ ಸಭೆ ಕರೆದ ಗೃಹ ಸಚಿವ ಅಮಿತ್ ಶಾ
ಮೋದಿಯವರು ಪ್ರಧಾನಿಯಾದ ಬಳಿಕ ಈಶಾನ್ಯಕ್ಕೆ 70 ಬಾರಿ ಭೇಟಿ ನೀಡಿದ್ದಾರೆ ಎಂದು ಉಲ್ಲೇಖಿಸಿದ ಅಮಿತ್ ಶಾ, ಈ ಪ್ರದೇಶದ ಸಣ್ಣ ರಾಜ್ಯಗಳು ಭಾರತದ ಆತ್ಮ ಎಂಬ ಕಲ್ಪನೆ ಕಾಂಗ್ರೆಸ್‌ಗೆ ಇಲ್ಲ ಎಂದರು. “ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಣಿಪುರದಲ್ಲಿ ಬಂದ್‌ಗಳು ಮತ್ತು ದಿಗ್ಬಂಧನಗಳು ಸಾಮಾನ್ಯವಾಗಿದ್ದವು. ಇಬೋಬಿ ಸಿಂಗ್ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರವು ನೂರಾರು ಜನರ ಎನ್‌ಕೌಂಟರ್ ಮಾಡಿದೆ” ಎಂದು ಆರೋಪಿಸಿದರು.
ನಾಗಾ-ಕುಕಿ ಘರ್ಷಣೆಯಲ್ಲಿ ಒಟ್ಟು 750 ಜನರು, ಮೈತಿ-ಪಂಗಲ್ ಸಂಘರ್ಷದಲ್ಲಿ 100 ಮಂದಿ ಮತ್ತು ಕುಕಿ-ಪೈತೆ ಸಂಘರ್ಷದಲ್ಲಿ 325 ಮಂದಿ ಸಾವನ್ನಪ್ಪಿದ್ದಾರೆ ಎಂದು ಶಾ ತಿಳಿಸಿದರು.
“ಈ ಚುನಾವಣೆಯು ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಯನ್ನಾಗಿ ಮಾಡುವುದಾಗಿದೆ. ಮಣಿಪುರದ ಮತಗಳು ಜನರು ಯಾರೊಂದಿಗೆ ಇದ್ದಾರೆ ಎಂಬುದನ್ನು ತೋರಿಸುತ್ತವೆ. ಈ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಲ್ಲ. ಇದು ಮಣಿಪುರವನ್ನು ವಿಭಜಿಸುವ ಬಗ್ಗೆ ಮಾತನಾಡುವವರು ಮತ್ತು ರಾಜ್ಯವನ್ನು ಒಗ್ಗೂಡಿಸುವವರ ನಡುವೆ ಇದೆ” ಎಂದು ಶಾ ಹೇಳಿದರು.
2023 ರ ಮೇ 3 ರಂದು ಮಣಿಪುರದಲ್ಲಿ ಕುಕಿ ಮತ್ತು ಮೈತಿ ಜನಾಂಗದ ನಡುವೆ ಘರ್ಷಣೆಗಳು ಪ್ರಾರಂಭವಾಗಿದೆ. ಅದಾದ ಬಳಿಕ ಮೇ 29 ರಿಂದ ಜೂನ್ 2 ರವರೆಗೆ ಬಿಜೆಪಿ ಆಡಳಿತದ ಈ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಲ್ಕು ದಿನಗಳ ಭೇಟಿ ಮಾಡಿದ್ದರು. ಆದರೆ ಅದಾದ ಬಳಿಕ ಮತ್ತೆ ಭೇಟಿ ನೀಡಿಲ್ಲ. ಈಗ ಚುನಾವಣೆ ಸಂದರ್ಭದಲ್ಲಿ ಮತ್ತೆ ಮಣಿಪುರಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಿದ್ದು ಮಣಿಪುರದಲ್ಲಿ ಹಿಂಸಾಚಾರ ಆರಂಭವಾದ ಬಳಿಕ ಕೇಂದ್ರ ಸಚಿವರ ಎರಡನೇ ಭೇಟಿ ಇದಾಗಿದೆ.
ಇದನ್ನು ಓದಿದ್ದೀರಾ? ಮೋದಿ, ಶಾ ಓದಿರುವುದು ನಮ್ಮ ಶಾಲೆಗಳಲ್ಲಿ: ಪ್ರಧಾನಿ ಲೋಕಸಭೆ ಭಾಷಣದ ವಿರುದ್ಧ ಖರ್ಗೆ ಕಿಡಿ
ಅಮಿತ್ ಶಾ ಅವರಂತೆ ಪ್ರಧಾನಿ ನರೇಂದ್ರ ಮೋದಿ ಮಣಿಪುರದಲ್ಲಿ ಹಿಂಸಾಚಾರ ಆರಂಭವಾದ ಬಳಿಕ ಒಂದು ಬಾರಿಯೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಈ ಕಾರಣದಿಂದಾಗಿಯೇ ನರೇಂದ್ರ ಮೋದಿ ನಿರಂತರವಾಗಿ ವಿರೋಧ ಪಕ್ಷಗಳಿಂದ ಟೀಕೆಗೆ ಒಳಗಾಗಿದ್ದಾರೆ. ಹಿಂಸಾಚಾರವು ಮೇ ತಿಂಗಳಲ್ಲಿ ಆರಂಭವಾಗಿದ್ದರೂ ಯಾವುದೇ ಹೇಳಿಕೆಯನ್ನು ನೀಡದ ಪ್ರಧಾನಿ ಮೋದಿ 2023 ರ ಆಗಸ್ಟ್‌ನಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಮಾಡಿದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಭಾಷಣದಲ್ಲಿ ಮಣಿಪುರದ ಉಲ್ಲೇಖ ಮಾಡಿದ್ದರು. “ಭಾರತದ ಜನರು ಮಣಿಪುರದೊಂದಿಗೆ ನಿಂತಿದ್ದಾರೆ” ಎಂದು ಹೇಳಿದ್ದರು.
ಹಾಗೆಯೇ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಅಮಿತ್ ಶಾ ಮೈತೆ ಮತ್ತು ಕುಕಿಗಳ ನಡುವೆ ಶಾಂತಿ ಸಂವಾದಕ್ಕೆ ಕರೆ ನೀಡಿದ್ದರು. ತಮ್ಮ ಭೇಟಿ ವೇಳೆ ಕುಕಿ ಪ್ರಾಬಲ್ಯದ ಚುರಾಚಂದ್‌ಪುರ ಜಿಲ್ಲೆ ಮತ್ತು ಮ್ಯಾನ್ಮಾರ್‌ನ ಗಡಿಯಲ್ಲಿರುವ ಮೋರೆಹ್ ಪಟ್ಟಣಕ್ಕೆ ಭೇಟಿ ನೀಡಿದರು. ಆದರೆ ಪ್ರಧಾನಿ ಈವರೆಗೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಕೇವಲ ಒಂದು ಬಾರಿ ಮಾತ್ರ ಮಣಿಪುರದ ಬಗ್ಗೆ ಮಾತನಾಡಿದ್ದಾರೆ. ಅದನ್ನು ಹೊರತುಪಡಿಸಿ ಮಣಿಪುರ ರಾಜ್ಯೋತ್ಸವಕ್ಕೆ ಪ್ರಧಾನಿ ಶುಭಕೋರಿದ್ದಾರೆ. ಈ ಸಂದರ್ಭದಲ್ಲಿಯೂ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.