ತನ್ನ ವಿರುದ್ಧ ಧ್ವನಿ ಎತ್ತುವವರನ್ನು ಇಡಿ, ಐಟಿ, ಸಿಬಿಐ ಮೂಲಕ ದಾಳಿ ನಡೆಸಿ ಹತ್ತಿಕ್ಕುವ ಕೆಲಸವನ್ನು ಪ್ರಧಾನಿ ಮೋದಿ ನಡೆಸಿಕೊಂಡು ಬಂದಿದ್ದಾರೆ. ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವಕ್ಕೂ ಗಂಡಾತರ ಎದುರಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೆಪಿಸಿಸಿ ವಾರ್ ರೂಂ ಮತ್ತು ಕಮ್ಯುನಿಕೇಶನ್ ಸೆಂಟರ್‌ನ ಮುಖ್ಯ ಸಂಯೋಜಕ ಅಶ್ವಿನ್ ಕುಮಾರ್ ರೈ ಹೇಳಿದರು.
ಮಂಗಳೂರು ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, “ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೋದಿ ಧಕ್ಕೆ ತಂದಿದ್ದಾರೆ. ಪ್ರತಿಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಯನ್ನೇ ಬಂಧಿಸಿ ಜೈಲಿಗೆ ತಳ್ಳುತ್ತಿದ್ದಾರೆ” ಎಂದು ಅಶ್ವಿನ್ ರೈ ಟೀಕಿಸಿದರು.
“ಬಿಜೆಪಿಯು ದೇಶದಲ್ಲಿ ಪಾರ್ಲಿಮೆಂಟ್ ಹಾಗೂ ವಿಧಾನಸಭೆಗೆ ಒಂದೇ ಚುನಾವಣೆ ಎನ್ನುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡುವ ಉದ್ದೇಶದಿಂದ ಮೋದಿ ಸರ್ಕಾರ ಸಂಚು ರೂಪಿಸುತ್ತಿದೆ” ಎಂದು ಆರೋಪಿಸಿದರು.
“ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಘೋಷಣೆ ಮಾಡಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಕಳೆದ 10 ವರ್ಷಗಳಲ್ಲಿ ಭ್ರಷ್ಟಾಚಾರವನ್ನೇ ತನ್ನ ಅಜೆಂಡವಾಗಿರಿಸಿಕೊಂಡು ಕೆಲಸ ಮಾಡಿದೆ. ಇತರ ಪಕ್ಷದವರು ಭ್ರಷ್ಟಾಚಾರದ ಆರೋಪದ ಮೇರೆಗೆ ಇಡಿ, ಐಟಿ ದಾಳಿಗೊಳಗಾದ ಸಂದರ್ಭಗಳಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡು ಪರಿಶುದ್ಧರಾಗುತ್ತಾರೆ. ಮೋದಿಯ ಭ್ರಷ್ಟಾಚಾರ ನಿರ್ಮೂಲನದ ಮಾದರಿ” ಎಂದು ಅಶ್ವಿನ್ ರೈ ಟೀಕಿಸಿದರು.
“ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಕೆದಕಿ ಮತದಾರರನ್ನು ವಂಚಿಸುತ್ತಿದೆ. ಯಾವುದೇ ಅಭಿವೃದ್ಧಿ ವಿಚಾರಗಳನ್ನು ಬಿಜೆಪಿ ಮುನ್ನೆಲೆಗೆ ತರುವುದಿಲ್ಲ, ಅವರಲ್ಲಿ ಅಭಿವೃದ್ಧಿಯ ಚಿಂತನೆ ಎಂಬುದೇ ಇಲ್ಲ. ದ್ವೇಷ ಬಿತ್ತುವುದೇ ಅವರ ಅಜೆಂಡಾ ಆಗಿದೆ” ಎಂದು ಅಶ್ವಿನ್ ರೈ ಹೇಳಿದರು.
“ಕಳೆದ ಬಾರಿ ಬಿಜೆಪಿ ಘೋಷಿಸಿದ 550 ಪ್ರಣಾಳಿಕೆಗಳ ಪೈಕಿ ಶೇ.10ರಷ್ಟು ಕೂಡ ಜಾರಿಯಾಗಿಲ್ಲ. ಹಾಗಾಗಿ ಬಿಜೆಪಿಯ ಹೊಸ ಪ್ರಣಾಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಹಳೆಯ ಭರವಸೆಗಳನ್ನು ಜಾರಿಗೊಳಿಸಿದ ಬಳಿಕ ಹೊಸ ಪ್ರಣಾಳಿಕೆ ಘೋಷಣೆ ಮಾಡಿದ್ದರೆ ಅದಕ್ಕೆ ಅರ್ಥವಿರುತ್ತಿತ್ತು ಎಂದ ಅಶ್ವಿನ್ ಕುಮಾರ್ ರೈ, ಜಿಎಸ್‌ಟಿ ಸಂದಾಯದಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ, ರಾಜ್ಯಕ್ಕೆ ಸಿಗಬೇಕಾದ ಅನುದಾನವನ್ನು ಸಮರ್ಪಕವಾಗಿ ಬಿಡುಗಡೆಗೊಳಿಸುತ್ತಿಲ್ಲ. ಸದ್ಯ ನಮಗೆ ಶೇ.12-13ರಷ್ಟು ಅನುದಾನ ಬರುತ್ತಿದೆ. ಅದು ಸಾಲದು, ನಮಗೆ ಶೇ.30ರಷ್ಟು ಅನುದಾನ ಬರಬೇಕಾಗಿದೆ” ಎಂದರು.
“ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಯುವ ವಕೀಲರು, ಸಂಘಟನಾ ಶಕ್ತಿಯುಳ್ಳವರು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅವರನ್ನು ಈ ಬಾರಿ ಗೆಲ್ಲಿಸುವ ಅನಿವಾರ್ಯತೆ ಇದೆ” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಾವಿರಾರು ಬೆಂಬಲಿಗರೊಂದಿಗೆ ರಾಜು ಆಲಗೂರು ನಾಮಪತ್ರ ಸಲ್ಲಿಕೆ; ಬಿಸಿಲನ್ನೂ ಲೆಕ್ಕಿಸದೆ ಮೊಳಗಿದ ಕಾಂಗ್ರೆಸ್ ಜೈಕಾರ
ಸುದ್ದಿಗೋಷ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪಕ್ಷದ ಮುಖಂಡರಾದ ನವೀನ್ ಡಿಸೋಜ, ಶುಭೋದಯ ಆಳ್ವ, ಮುಹಮ್ಮದ್ ವಳವೂರ್, ನೀರಜ್‌ಪಾಲ್, ಟಿ ಕೆ ಸುಧೀರ್, ಶಬ್ಬಿರ್ ಎಸ್, ಮೊಹಶೀರ್ ಸಾಮಣಿಗ, ದುರ್ಗ ಪ್ರಸಾದ್ ಸೇರಿದಂತೆ ಇತರರು ಇದ್ದರು.
