ಸನಾತನ ಪರಂಪರೆಯ ವಿವಾಹಗಳು ಅಸ್ಪೃಶ್ಯತೆಯಿಂದ ಕೂಡಿವೆ. ಮೂಢನಂಬಿಕೆ, ಅಂಧಶ್ರದ್ದೆ ಗಾಢವಾಗಿ ಬೇರೂರಿರುತ್ತದೆ. ಬೌದ್ಧ ಧರ್ಮದ ವಿವಾಹ ಪದ್ಧತಿಯಲ್ಲಿ ನಿಯಮ, ಮಡಿ, ಮೈಲಿಗೆ ಇಲ್ಲ ಎಂದು ಭಾಲ್ಕಿಯ ನೌಪಾಲ ಬಂತೇಜಿ ಹೇಳಿದರು.
ಯಾದಗಿರಿ ಜಿಲ್ಲೆಯ ಸುರಪುರ ನಗರದ ದರ್ಶನ ಭೂಮಿ ಬುದ್ಧ ವಿಹಾರದಲ್ಲಿ ಬಿ ಆರ್ ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವದ ಅಂಗವಾಗಿ ಭಾನುವಾರ (ಏ.14) ವಾಗಣಗೇರಾ ಗ್ರಾಮದ ಮಲ್ಲಿಕಾರ್ಜುನ ಕಟ್ಟಿಮನಿ, ಸಾಹೇಬಗೌಡ ಟಣಕೇದಾರ ಆಯೋಜಿಸಿದ್ದ ಸರಳ ಸಾಮೂಹಿಕ ವಿವಾಹದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬೌದ್ಧ ಧರ್ಮ ಸಮಾನತೆಯನ್ನು ಬೋಧಿಸುತ್ತದೆ. ಇಲ್ಲಿ ಮೇಲು, ಕೀಳು ಇಲ್ಲ. ವೇದ, ಉಪನಿಷತ್ತು, ಮಂತ್ರೋಪದೇಶಗಳ ಜಂಜಾಟವಿಲ್ಲ. ವೈಚಾರಿಕವಾಗಿ ಸರಳ ಬದುಕು ಕಟ್ಟಿಕೊಳ್ಳುವ ಬುದ್ಧನ ಸಂದೇಶಗಳಿವೆ. ಆಡಂಬರವಿಲ್ಲದೇ ಸರಳ ಮದುವೆಯಿಂದ ದುಂದು ವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ದಂಪತಿ ಸುಖಕರವಾದ ಜೀವನ ನಡೆಸಬಹುದು ಎಂದರು.
ಸಾಮೂಹಿಕ ವಿವಾಹದಲ್ಲಿ 25 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬೌದ್ಧ ಧರ್ಮದ ಸಂಪ್ರದಾಯದಂತೆ ಸಾಮೂಹಿಕ ವಿವಾಹ ನಡೆಯಿತು.
ಮಾನಪ್ಪ ಕಟ್ಟಿಮನಿ ಧ್ವಜಾರೋಹಣ ಮಾಡಿದರು. ಮಲ್ಲಿಕಾರ್ಜುನ ಕ್ರಾಂತಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ದುರ್ಗಪ್ಪ ಗೋಗಿಕರ್, ಚಂದ್ರಶೇಖರ ಜಡಿಮರಳ, ಮಾನು ಗುರಿಕಾರ, ಶಿವಪ್ಪ ಸದಬ, ವೇಣುಗೋಪಾಲ ಜೇವರ್ಗಿ, ದೇವಿಂದ್ರಪ್ಪ ಪತ್ತಾರ ಮಲ್ಲಯ್ಯ ಕಮತಗಿ, ಬಸವರಾಜ ಗೋನಾಲ, ನಿಂಗಣ್ಣ ಗೋನಾಲ, ಶಿವಲಿಂಗ ಚಲುವಾದಿ, ಮಲ್ಲಿಕಾರ್ಜುನ ತಳಳ್ಳಿ, ರಾಮಚಂದ್ರ, ಶರಣಪ್ಪ ವಾಗಣಗೇರಾ, ಗೋಪಾಲ ತಳವಾರ, ಅಪ್ಪಣ್ಣ ಗಾಯಕವಾಡ, ಅಂಬಲಪ್ಪ ಹಳ್ಳಿ, ಮಲ್ಕಯ್ಯ ಶೇಲ್ಕರ್, ಭೀಮಣ್ಣ ನಾಟೀಕಾರ, ಮಹಾದೇವ, ವೀರಭದ್ರ ತಳವಾರಗೇರಾ, ಖಾಜಾ ಮೂರ್ತಿ ಬೊಮ್ಮನಳ್ಳಿ, ಹುಲಗಪ್ಪ ಅಜೀರ, ಎಂ. ಪಟೇಲ ಸೇರಿದಂತೆ ಬೈಲಕುಂಟಿ, ಚಂದಪ್ಪ ಪಂಚಮ ಸೇರಿದಂತೆ ಅನೇಕರು ಹಾಜರಿದ್ದರು.