ದಾರಿತಪ್ಪಿಸುವ ಜಾಹೀರಾತುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಆಯುರ್ವೇದ ಸಹ ಸಂಸ್ಥಾಪಕ ರಾಮ್‌ದೇವ್ ಮತ್ತು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ “ನೀವು ಅಷ್ಟೊಂದು ಮುಗ್ಧರೇನಲ್ಲ” ಎಂದು ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪತಂಜಲಿ ಆಯುರ್ವೇದದ ಪ್ರವರ್ತಕರಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ಜೊತೆ ಸುಪ್ರೀಂ ಕೋರ್ಟ್ ಇಂದು ನೇರವಾಗಿ ಸಂವಾದ ನಡೆಸಿದೆ. ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿದೆ.
Supreme Court posts Patanjali’s misleading advertisements case for hearing on April 23.
They have to be present on the next date of hearing. https://t.co/uQx4CaRSr0
— ANI (@ANI) April 16, 2024
“ಕೋವಿಡ್ ಸಂದರ್ಭದಲ್ಲಿ ದಾರಿ ತಪ್ಪಿಸುವ ಜಾಹೀರಾತು ನೀಡಿದ ಕಾರಣ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ನಾನು ಸಿದ್ಧ” ಎಂದು ರಾಮ್‌ದೇವ್ ಸುಪ್ರೀಂ ಕೋರ್ಟ್‌ಗೆ ಹೇಳಿದ್ದು, “ನಮ್ಮಲ್ಲಿ ಪರ್ಯಾಯ ಔಷಧ ವ್ಯವಸ್ಥೆ ಇದೆ ಎಂದು ಹೇಳಿಕೊಳ್ಳುತ್ತೇವೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಬಾಬಾ ರಾಮ್‌ದೇವ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದರೂ ಪ್ರಧಾನಿ ಮೋದಿ ಮೌನವಾಗಿರುವುದೇಕೆ?
“ನಿಮಗೆ ದೊಡ್ಡ ಘನತೆ ಇದೆ. ನೀವು ಯೋಗಕ್ಕಾಗಿ ಸಾಕಷ್ಟು ಕಾರ್ಯವನ್ನು ಮಾಡಿದ್ದೀರಿ ಮತ್ತು ಅದರ ಪ್ರಚಾರಕ್ಕಾಗಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಪ್ರಾರಂಭಿಸಿದ್ದೀರಿ. ನೀವು ಈ ವ್ಯವಹಾರವನ್ನು ಸಹ ಪ್ರಾರಂಭಿಸಿದ್ದೀರಿ” ಎಂದು ಸುಪ್ರೀಂ ಕೋರ್ಟ್ ಈ ಸಂದರ್ಭದಲ್ಲೇ ಹೇಳಿದ್ದು, “ನಾವು ಮಾಡಿದ ಯಾವುದೇ ತಪ್ಪಿಗೆ ನಾನು ಬೇಷರತ್ ಕ್ಷಮೆಯಾಚಿಸುತ್ತೇನೆ ಎಂದು ನಾನು ಹೇಳಲು ಬಯಸುತ್ತೇನೆ” ರಾಮ್‌ದೇವ್ ಹೇಳಿದ್ದಾರೆ.
“ನ್ಯಾಯಾಲಯದ ಆದೇಶದ ಹೊರತಾಗಿಯೂ, ನೀವು ಜಾಹೀರಾತು ಪ್ರಕಟಿಸಿ ಆ ವಿಷಯಗಳನ್ನು ಹೇಳಿದ್ದೀರಿ. ಆಯುರ್ವೇದವು ಮಹರ್ಷಿ ಚರಕರ ಕಾಲದಿಂದಲೂ ಇದೆ, ನಿಮ್ಮ ಸ್ವಂತ ವಿಧಾನವನ್ನು ಪ್ರಚಾರ ಮಾಡಲು ನೀವು ಇತರ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಏಕೆ ಕಳಪೆಯಾಗಿ ಮಾತನಾಡಿದ್ದೀರಿ” ಎಂದು ಕೋರ್ಟ್ ಪ್ರಶ್ನಿಸಿದೆ.
ಈ ಸಂದರ್ಭದಲ್ಲಿ, “ನಮಗೆ ಅಂತಹ ಉದ್ದೇಶ ಇರಲಿಲ್ಲ. ನಾವು 5,000ಕ್ಕೂ ಹೆಚ್ಚು ಪ್ರಕ್ರಿಯೆಗಳನ್ನು ಸಂಶೋಧಿಸಿದ್ದೇವೆ” ಎಂದು ರಾಮ್‌ದೇವ್ ಹೇಳಿದ್ದು, “ನಾವು ನಿಮ್ಮ ವರ್ತನೆ ಬಗ್ಗೆ ಮಾತನಾಡುತ್ತಿದ್ದೇವೆ. ನೀವು ನಮ್ಮ ಆದೇಶವನ್ನು ಪಾಲಿಸದ ಕಾರಣ ನಾವು ನಿಮ್ಮನ್ನು ಕರೆದಿದ್ದೇವೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನು ಓದಿದ್ದೀರಾ? ‘ಕ್ರಮಕ್ಕೆ ಸಿದ್ಧರಾಗಿ’ ರಾಮ್‌ದೇವ್‌ಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ
“ನೀವು ಬೇಜವಾಬ್ದಾರಿಯಿಂದ ವರ್ತಿಸಿದ್ದೀರಿ. ವಾಸಿಯಾಗದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಾಗಿ ಹೇಳಿಕೊಳ್ಳುವ ಔಷಧಗಳನ್ನು ಯಾರೂ ಸಿದ್ಧಪಡಿಸಿಲ್ಲ. ಇದನ್ನು ಯಾರೂ ಮಾಡಲು ಸಾಧ್ಯವಿಲ್ಲ, ಯಾರೂ ಮಾಡಿಲ್ಲ. ಪತ್ರಿಕಾಗೋಷ್ಠಿ ನಡೆಸಿ ಸಂಪೂರ್ಣ ಬೇಜವಾಬ್ದಾರಿಯಿಂದ ವರ್ತಿಸಿದ್ದೀರಿ” ಎಂದು ಕೋರ್ಟ್ ತಪರಾಕಿ ಹಾಕಿದೆ.
“ನಾವು ಇನ್ನೂ ನಿಮ್ಮನ್ನು ಕ್ಷಮಿಸಿಲ್ಲ. ಅದರ ಬಗ್ಗೆ ಆಲೋಚಿಸುತ್ತೇವೆ. ನಿಮ್ಮ ಇತಿಹಾಸವು ಅದನ್ನೇ ಹೇಳುತ್ತದೆ. ನಾವು ನಿಮ್ಮ ಕ್ಷಮಿಸಲ್ಲ. ನಿಮ್ಮ ಈ ಹಿಂದಿನ ನಡೆಯನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳುತ್ತಿದ್ದೇವೆ. ಕೊನೆಯ ಆದೇಶವು ನಮ್ಮ ಗಮನದಲ್ಲಿದೆ. ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎಂದು ನಿಮಗೆ ತಿಳಿಯದಂತಹ ಮುಗ್ಧರು ನೀವು ಅಲ್ಲ” ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಜೊತೆಗೆ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿದೆ.