ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮಹಿಳೆಯರ ಕುರಿತಾಗಿ ಅವಮಾನಿಸಿ ಮಾತನಾಡಿರುವದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಗರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಜೆಡಿಎಸ್ ನಾಯಕ ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಘೋಷಣೆ ಕೂಗಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ, ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿಯವರು ಗ್ಯಾರಂಟಿ ಯೋಜನೆಗಳ ಜಾರಿಯನ್ನು ಸಹಿಸದೇ ಮಹಿಳೆಯರಿಗೆ ಅಗೌರವವಾಗಿ ಮಾತನಾಡಿದ್ದು ಕೂಡಲೇ ಮಹಿಳೆಯರ ಕ್ಷಮೆಯಾಚಿಸಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಮೈತ್ರಿ ಪಕ್ಷದ ನಾಯಕರೊಬ್ಬರ ಹೇಳಿಕೆಯನ್ನು ಖಂಡಿಸಬೇಕೆಂದರು.
ಕಾಂಗ್ರೆಸ್ ಪಕ್ಷ ಕಾರ್ಯಾಧ್ಯಕ್ಷ ಎ.ವಸಂತಕುಮಾರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮಹಿಳೆಯರನ್ನು ಸಬಲೀಕರಣಗೊಳಿಸಲು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಕಾಂಗ್ರೆಸ್ ಪಕ್ಷ ಮಹಿಳೆಯರನ್ನು ಗೌರವಿಸುತ್ತಲೇ ಬಂದಿದೆ. ಆದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಹಿಳೆಯರು ದಾರಿತಪ್ಪುತ್ತಿದ್ದಾರೆ ಎಂದು ಹೇಳುವ ಮೂಲಕ ಅವಮಾನ ಮಾಡಿದ್ದಾರೆ. ಕೂಡಲೇ ಕ್ಷಮೆಕೋರಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಮಾತನಾಡಿ ಗ್ಯಾರಂಟಿ ಯೋಜನೆಗಳಿಗೆ ಜನತೆ ನೀಡುತ್ತಿರುವ ಬೆಂಬಲ ಸಹಿಸಿಕೊಳ್ಳಲಾಗದೆ ಎಚ್.ಡಿ. ಕುಮಾರಸ್ವಾಮಿ ಮಹಿಳೆಯರನ್ನು ಅವಮಾನಿಸಿದ್ದಾರೆ. ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದೇ ಹೋದಲ್ಲಿ ಮಹಿಳೆಯರೇ ಬುದ್ದಿ ಕಲಿಸಲಿದ್ದಾರೆ ಎಂದರು.
ಕೆಪಿಸಿಸಿ ಮಹಿಳಾ ನಾಯಕಿ ಶಶಿಕಲಾ ಭೀಮರಾಯ ಮಾತನಾಡಿ ಮಹಿಳೆಯರು ದಾರಿತಪ್ಪುವ ಕುರಿತು ಮಾತನಾಡಿರುವುದು ಖಂಡನೀಯ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿತಪ್ಪುವ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು. ಇಲ್ಲದೇ ಹೋದರೆ ಮಹಿಳೆಯರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಬ್ಯರ್ಥಿಗಳನ್ನು ತಿರಸ್ಕರಿಸುತ್ತಾರೆ ಎಂದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ.ಶಾಂತಪ್ಪ, ಜಿ.ಬಸವರಾಜರೆಡ್ಡಿ, ಜಯಣ್ಣ, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿ.ಸುರೇಶ, ಈಶಪ್ಪ, ರುದ್ರಪ್ಪ ಅಂಗಡಿ, ಯೂಸೂಫ್ ಖಾನ್, ಭಾರತಿ ವೆಂಕಣ್ಣ, ರಾಣ ರಿಚರ್ಡ್ಸ, ಮಾಲಾ ಭಜಂತ್ರಿ, ಮಂಜುಳಾ, ರಜಿಯಾ ಪಾಟೀಲ್, ಪ್ರೇಮಲತಾ ಸೇರಿದಂತೆ ಅನೇಕ ಮುಖಂಡರುಗಳು, ಕಾರ್ಯಕರ್ತರು ಭಾಗಿಯಾದರು.
