ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು, ಮೋದಿ ದೇಶದ ಕೆಲವು ‘ ಶ್ರೀಮಂತ ಉದ್ಯಮಿಗಳ ಸಾಧನ’ ಎಂದು ಕರೆದಿದ್ದಾರೆ.
ಕೇರಳದ ಕೊಡಿಯತ್ತೂರಿನಿಂದ ತಮ್ಮ ರೋಡ್‌ಶೋ ವೇಳೆ ಮಾತನಾಡಿದ ರಾಹುಲ್ ಗಾಂಧಿ ಅವರು, “ದೇಶದ ನೈಜ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ಸೆಳೆಯುವುದು, ಭಾರತದ ಶ್ರೀಮಂತ ಉದ್ಯಮಿಗಳನ್ನು ರಕ್ಷಿಸುವುದು ಮತ್ತು ಅವರ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡುವುದು ಪ್ರಧಾನಿ ಮೋದಿಯವರ ಕೆಲಸವಾಗಿದೆ” ಎಂದು ಆರೋಪಿಸಿದರು.
“ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಐದಾರು ದೊಡ್ಡ, ಶ್ರೀಮಂತ ಉದ್ಯಮಿಗಳ ಸಾಧನ” ಎಂದು ಟೀಕಿಸಿದ ವಯನಾಡಿನ ಹಾಲಿ ಸಂಸದರು, “ಮೋದಿಯವರು ದೇಶದ 20-25 ಜನರಿಗೆ ಸುಮಾರು 16 ಲಕ್ಷ ಕೋಟಿ ರೂಪಾಯಿಗಳನ್ನು ನೀಡಿದ್ದಾರೆ” ಎಂದು ದೂರಿದರು.
ಇದನ್ನು ಓದಿದ್ದೀರಾ? ತಮಿಳುನಾಡಿನಲ್ಲಿ ರಾಹುಲ್ ಗಾಂಧಿ ಹೆಲಿಕಾಪ್ಟರ್ ತಪಾಸಣೆ
“ಶ್ರೀಮಂತರಿಗೆ ಸಹಾಯ ಮಾಡುವ ಪ್ರಧಾನಿ ಮೋದಿ ಅವರು ದೇಶದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು, ನಿರುದ್ಯೋಗ ಅಥವಾ ಬೆಲೆ ಏರಿಕೆಯ ಬಗ್ಗೆ ಮಾತನಾಡುವುದಿಲ್ಲ” ಎಂದು ರಾಹುಲ್ ಗಾಂಧಿ ಟೀಕಿಸಿದರು. ಹಾಗೆಯೇ “ಬಾಂಡ್‌ಗಳು ಪಿಎಂ ಮೋದಿ ನಡೆಸಿದ ಸುಲಿಗೆಯ ಒಂದು ರೂಪವಾಗಿದೆ” ಎಂದು ಹೇಳಿದರು.
“ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನವನ್ನು ನಾಶಪಡಿಸಲು ಮತ್ತು ಬದಲಾಯಿಸಲು ಪ್ರಯತ್ನಿಸುತ್ತಿವೆ” ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದರು.
ಇದನ್ನು ಓದಿದ್ದೀರಾ? ಬಿಜೆಪಿ ಪ್ರಣಾಳಿಕೆಯಲ್ಲಿ ಹಣದುಬ್ಬರ, ನಿರುದ್ಯೋಗದ ಪ್ರಸ್ತಾಪವಿಲ್ಲ: ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ಈ ತಿಂಗಳ ಆರಂಭದಲ್ಲಿ ವಯನಾಡಿನಲ್ಲಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದು ಬೃಹತ್ ರೋಡ್ ಶೋ ನಡೆಸುವ ಮೂಲಕ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದರು.
2019 ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ವಯನಾಡಿನಲ್ಲಿ 4,31,770 ಮತಗಳ ದಾಖಲೆಯ ಅಂತರದಿಂದ ಗೆದ್ದಿದ್ದರು. ಕೇರಳದ 20 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ.