ತುಮಕೂರು | ವಲಸಿಗ ಅಸ್ತ್ರಕ್ಕೆ ಬೆಚ್ಚಿದ ಮೈತ್ರಿ; ದೇವೇಗೌಡರನ್ನು ಸೋಲಿಸಿದ್ದ ಸೋಮಣ್ಣ ಈ ಬಾರಿ ಗೆಲ್ತಾರಾ?

Date:

Advertisements

ಹತ್ತೇ ತಿಂಗಳಲ್ಲಿ ಮೂರನೇ ಚುನಾವಣೆಯ ಅದೃಷ್ಟ ಪರೀಕ್ಷೆಗೆ ಇಳಿದಿರುವ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡ, ಈ ಇಬ್ಬರಿಗೂ ರಾಜಕೀಯ ಭವಿಷ್ಯದ ದೃಷ್ಠಿಯಿಂದ ತುಮಕೂರು ಲೋಕಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ. ಜಟ್ಟಿ ಕಾಳಗಕ್ಕೆ ವೇದಿಕೆ ಸಜ್ಜಾಗಿದೆ.

ಹಠಕ್ಕೆ ಬಿದ್ದವರಂತೆ ಇಬ್ಬರು ಹುರಿಯಾಳುಗಳು ಟಿಕೆಟ್ ಗಿಟ್ಟಿಸಿಕೊಂಡು ರಾಜಕೀಯ ಭವಿಷ್ಯ ಭದ್ರ ಪಡಿಸಿಕೊಳ್ಳಲು ಜೀವಮಾನದಲ್ಲಿ ಕಲಿತಿರುವ ಸಕಲ ರಾಜಕೀಯ ಪಟ್ಟುಗಳನ್ನು ಪ್ರಯೋಗಿಸುತ್ತಾ ಶತಾಯಗತಾಯ ಗೆಲ್ಲುವ ಪಣ ತೊಟ್ಟಿದ್ದಾರೆ. 2019ರಲ್ಲಿ ತುಮಕೂರು ಲೋಕಸಭೆ ಗೆಲ್ಲಿಸುವ ಉಸ್ತುವಾರಿ ಹೊಂದಿದ್ದ ಈಗಿನ ಎನ್‌ಡಿಎ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ವಲಸಿಗ ಮತ್ತು ಹೇಮೆ ಶಾಪದ ಅಸ್ತ್ರ ಬಳಸಿ ಮಾಜಿ ಪ್ರಧಾನಿ ದೇವೇಗೌಡರನ್ನೇ ಮಣಿಸಿ ಬಿಜೆಪಿ ಅಭ್ಯರ್ಥಿ ಬಸವರಾಜುಗೆ ವಿಜಯದ ಮಾಲೆ ಹಾಕಿಸಿ ಬಿಜೆಪಿ ಹೈಕಮಾಂಡ್‌ನಿಂದ ಶಹಬ್ಬಾಷ್ ಗಿರಿ ಪಡೆದಿದ್ದ ಸೋಮಣ್ಣಗೆ 2024ರ ಚುನಾವಣೆಯಲ್ಲಿ ವಲಸಿಗ ಅಸ್ತ್ರವೆ ತಿರುಗುಬಾಣವಾಗಿದೆ.

ಎದುರಾಗಳಿರಲಿ, ಸ್ವಪಕ್ಷೀಯರೇ ಸೋಮಣ್ಣನ ವಿರುದ್ದ ವಲಸಿಗ ಅಸ್ತ್ರ ಪ್ರಯೋಗಿಸಿದ್ದು ಕಮಲ ಕಲಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಮಾಜಿ ಕ್ಯಾಬಿನೆಟ್ ಸ್ನೇಹಿತ ಜೆ.ಸಿ.ಮಾಧುಸ್ವಾಮಿ ತುಮಕೂರಿನಲ್ಲಿ ವಲಸಿಗರು ಗೆದ್ದ ಇತಿಹಾಸವಿಲ್ಲ ಎನ್ನುವ ಮೂಲಕ ಸ್ಥಳೀಯರಿಗೆ ಟಿಕೆಟ್ ನೀಡಿದ್ದರೆ ಉಸಿರೆತ್ತದೆ ಕೆಲಸ ಮಾಡುತಿದ್ದೆ, ಅದರೆ ಹೊರಗಿನವರಿಗೆ ಟಿಕೆಟ್ ನೀಡಿರುವುದರಿಂದ ನಾವು ಸಪೋರ್ಟ್ ಮಾಡೋದಿಲ್ಲ ಎಂದು ಕಡ್ಡಿತುಂಡಾದಂತೆ ಹೇಳುವ ಮೂಲಕ ಸೋಮಣ್ಣ ಎಂಟರ್‌ಟೈನ್‌ಮಂಟ್‌ಗೆ ಬಂದಿದ್ದಾರೆ. ಸೋತರು, ಗೆದ್ದರು ಬೆಂಗಳೂರಿಲ್ಲಿರುತ್ತಾರೆ. ತುಮಕೂರಿನ ಸಮರ್ಥರು ಇರಲಿಲ್ವ ಎನ್ನುವ ಅರ್ಥದಲ್ಲಿ ನೇರ ವಾಗ್ದಾಳಿ ನಡೆಸಿದ್ದರು. ಯಡಯೂರಪ್ಪನವರ ಸಂಧಾನದ ಬಳಿಕ ಅವರ ಬೆಂಬಲಿಗರು ಸೋಮಣ್ಣನ ಜೋತೆ ಕಾಣಿಸಿಕೊಂಡಿದ್ದಾರೆ, ಅದರೆ ಮಾಧುಸ್ವಾಮಿ ಮಾತ್ರ ಸೋಮಣ್ಣನ ಪರವಾಗಿ ಎಲ್ಲಿಯೂ ಕಾಣಿಸಿಕೊಳ್ಳದೆ ತಟಸ್ಥವಾಗಿದ್ದಾರೆ.  ಇದರ ನಡುವೆ ವಲಸಿಗ ಅಸ್ತ್ರವನ್ನು ಕಾಂಗ್ರೆಸ್‌ನಲ್ಲಿ ಸಿಎಂಯಿಂದ ಕಾಂಗ್ರೆಸ್‌ನ ಹಿರಿ,ಕಿರಿ,ಮರಿ ನಾಯಕರೆಲ್ಲ ಪ್ರಬಲವಾಗಿ ಪ್ರಯೋಗಿಸುತ್ತಿರುವುದು ಸೋಮಣ್ಣನಿಗೆ ತಲೆನೋವು ತರಿಸಿದೆ.

Advertisements

ತುಮಕೂರಿನಲ್ಲಿ ಮತ ಶಿಕಾರಿಗೆ ಇಳಿದಿದ್ದ ಸಿ.ಎಂ.ಸಿದ್ದರಾಮಯ್ಯ, ‘ಸೋಮಣ್ಣನನ್ನು ಮೈಸೂರಿನಿಂದ ಓಡಿಸಿದ್ದೇವೆ. ನೀವು ತುಮಕೂರಿನಿಂದ ಓಡಿಸಿ ಎಂದು ಕರೆ ನೀಡಿದ್ದಾರೆ. ಅಧಿಕಾರಕ್ಕಾಗಿ ಊರೂರು ಅಲೆಯುವ ಸೋಮಣ್ಣನ್ನು ತುಮಕೂರಿನಲ್ಲಿ ಗೆಲ್ಲಿಸಬೇಕೇ? ಎಂದು ಗೃಹ ಸಚಿವ ಪರಮೇಶ್ವರ್ ಪ್ರಶ್ನಿಸುತಿದ್ದಾರೆ. ವಲಸಿಗರು  ಇಲ್ಲಿಯವರೆಗೂ ಕ್ಷೇತ್ರದಲ್ಲಿ ಯಾರು ಗೆದ್ದಿಲ್ಲ ಎಂದು ಸಹಕಾರ ಸಚಿವ ಕೆ. ಎನ್. ರಾಜಣ್ಣ ಹೇಳುತ್ತಿದ್ದಾರೆ. ಸ್ಥಳೀಯರು ಗೆಲ್ಲಿಸಬೇಕು, ಇದು ಸ್ವಾಭಿಮಾನದ ಪ್ರಶ್ನೆ ಎನ್ನುತ್ತಿದ್ದಾರೆ ಗುಬ್ಬಿ ಶಾಸಕ  ಶ್ರೀನಿವಾಸ್. ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಜಿಯೋಗ್ರಾಫಿಕಲಿ ನಾನು ಸ್ಟ್ರಾಂಗ್ ಇದ್ದೇನೆ ಎನ್ನುವ ಮೂಲಕ ಸೋಮಣ್ಣನಿಗೆ ಜಿಲ್ಲೆಯ ಗಾಳಿ ಗಂಧ ತಿಳಿದಿಲ್ಲ ಎನ್ನುವ ಅರ್ಥದಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ. ಈ ಎಲ್ಲದರ ನಡುವೆ ವಿ. ಸೋಮಣ್ಣ ಗೃಹ ಸಚಿವ ಪರಮೇಶ್ವರ್, ರಾಜಣ್ಣ, ಮುದ್ದಹನುಮೇಗೌಡರು ಹೊರಗಿನವರೆ ಎಂದು ಹೇಳುವ ಮೂಲಕ ವಲಸಿಗ ಅಸ್ತ್ರಕ್ಕೆ ಚೆಕ್ ಮೇಟ್ ಇಡಲು ಪ್ರಯತ್ನಿಸಿದ್ದರು. ಅದು ಅಷ್ಟು ಫಲಪ್ರದವಾಗಿಲ್ಲ.

2014ರಲ್ಲಿ ಗುಜರಾತ್ ಮಾಡೆಲ್ ಹೆಸರಿನಲ್ಲಿ ದೇಶದಾದ್ಯಂತ ಲಗ್ಗೆ ಇಟ್ಟ ಮೋದಿ ಅಲೆಯನ್ನು ಬದಿಗೆ ಸರಿಸಿ ಎಸ್.ಪಿ. ಮುದ್ದಹನುಮೇಗೌಡ ಗೆಲುವು ಸಾಧಿಸಿದ್ದರು. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಕೈ ತಪ್ಪಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪರ್ಧಿಸಿ ಸೋಲುಂಡರು. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಮತ್ತು ವಲಸಿಗ ಚರ್ಚೆ ಶುರುವಾಗಿದೆ. ಜಿಲ್ಲೆಯಲ್ಲಿ ವಲಸಿಗರು ಗೆದ್ದ ಉದಾಹರಣೆಯಿಲ್ಲ ಎಂಬ ಮಾತನ್ನು ಬಿಜೆಪಿಯವರೇ ಆದ ಮಾಧುಸ್ವಾಮಿ ಹೇಳಿರುವುದು ಸೋಮಣ್ಣನವರಿಗೆ ಆತಂಕವನ್ನು ತಂದೊಡ್ಡಿದೆ. ಆದರೂ ಎದೆಗುಂದದೆ ಕ್ಷೇತ್ರ ಸಂಚಾರ, ಕಾರ್ಯಕರ್ತರು, ಮುಖಂಡರ ಮನೆಗಳಿಗೆ ಭೇಟಿ ನೀಡುವ ಮೂಲಕ ಅವರು ತಮ್ಮ ಕಾರ್ಯ ಕ್ಷಮತೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ನಾನು ಗೆದ್ದರೆ ಜಿಲ್ಲೆಗೆ 10 ಸಾವಿರ ಕೋಟಿ ಅನುದಾನದ ಪ್ಯಾಕೇಜ್ ಎನ್ನುತ್ತಿದ್ದು, ಈ ಮುಖಾಂತರ ಕಾರ್ಯಕರ್ತರಲ್ಲೂ ಹೊಸ ಹುರುಪನ್ನು ತುಂಬುತ್ತಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಹಾಗೂ ಜೆಡಿಎಸ್ ಮತ್ತು ಬಿಜೆಪಿ ಘಟಾನುಘಟಿ ನಾಯಕರೊಂದಿಗೆ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿ ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟಿಸುವ ಕೆಲಸ ಮಾಡಿದ್ದಾರೆ. ಆದರೆ, ವಲಸಿಗ ಎಂಬ ಅಸ್ತ್ರಕ್ಕೆ ಬೆಚ್ಚಿದಂತೆ ಕಾಣುತ್ತಿದೆ. ಹೋದಲ್ಲಿ ಬಂದಲ್ಲಿ ಸ್ಥಳೀಯ ವರ್ಸಸ್ ವಲಸಿಗ ಎಂಬ ಚರ್ಚೆಯನ್ನೇ ಪ್ರಧಾನ ವಾಗಿಟ್ಟುಕೊಂಡು ಕಾಂಗ್ರೆಸ್ ನಾಯಕರು ಚುನಾವಣೆ ನಡೆಸಲು ಸಜ್ಜಾಗಿದ್ದಾರೆ. ಮುದ್ದಹನುಮೇಗೌಡ ಸ್ಥಳೀಯ, ಕೈಗೆ ಸಿಗುತ್ತಾರೆ, ಗೆದ್ದರೂ ಸೋತರೂ ನಮ್ಮೂರಲ್ಲೇ ಇರುತ್ತಾರೆ ಎನ್ನುವ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವುದು ಬದಲಾದ ರಾಜಕೀಯ ಸನ್ನಿವೇಶಕ್ಕೆ ಕಾರಣವಾಗಿದೆ. ಮೈತ್ರಿ ಅಭ್ಯರ್ಥಿಗೆ ಗೋ ಬ್ಯಾಕ್ ಬಿಸಿ ತಟ್ಟುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿಗೆ ಪಕ್ಷದ ಒಳ ಹೊಡೆತದ ಭೀತಿ ಶುರುವಾಗಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ (ಎನ್‌ಡಿಎ) ಹಾಗೂ ಕಾಂಗ್ರೆಸ್(ಇಂಡಿಯಾ)ಪರಸ್ಪರ ಪ್ರಬಲ ಎದುರಾಳಿಗಳಾಗಿದ್ದರೂ ತುಮಕೂರಿನಲ್ಲಿ ಅಂತಹ ಪೈಪೋಟಿಯೇನೂ ಕಂಡು ಬಂದಿಲ್ಲ.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ತನ್ನದೇ ಆದ ವೋಟ್ ಬ್ಯಾಂಕ್ ಇದ್ದು, ಬಡವರ ಪರ ಯೋಜನೆಗಳಿಂದ ಜನರಿಗೆ ಮತ್ತಷ್ಟು ಆಪ್ತವಾಗಿದೆ. ಎಸ್ಸಿ, ಎಸ್ಟಿ, ಕುರುಬ, ಅಲ್ಪಸಂಖ್ಯಾತರ ಮತಗಳು ಬಹುಪಾಲು ಕಾಂಗ್ರೆಸ್‌ನತ್ತ ವಾಲಿರುವುದು ಕ್ಷೇತ್ರದಲ್ಲಿ ಕಂಡು ಬರುತ್ತಿದೆ. ಇದನ್ನು ಗಮನಿಸಿದರೆ ಕಾಂಗ್ರೆಸ್‌ಗೆ ಬೇಸಿಕ್ ಮತಗಳು 4.5 ಲಕ್ಷಗಳಿಂದಲೇ ಶುರುವಾಗಲಿವೆ. ಇದಕ್ಕೆ ಒಕ್ಕಲಿಗ ಮತಗಳು ಸೇರ್ಪಡೆಯಾದರೆ ಇನ್ನುಳಿದ ಮತಗಳು ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರಲ್ಲೂ ವಿಂಗಡಣೆಯಾಗಲಿದ್ದು, ಕಾಂಗ್ರೆಸ್ ಗೆ ಗೆಲುವಿನ ದಡ ತಲುಪುವುದು ಕಷ್ಟವಾಗುವುದಿಲ್ಲ ಎಂದು ವಿಶ್ಲೇಸಲಾಗುತ್ತಿದೆ.

ನಿಕೇತ್‌ರಾಜ್ ಮೌರ್ಯ ಅವರಂತಹ ಅಹಿಂದ ಪ್ರತಿನಿಧಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಹಾಗೂ ಮುದ್ದಹನಮೇಗೌಡರ ಬೆಂಬಲಿಗರಾದ ಮತ್ತು ಗೊಲ್ಲ ಸಮುದಾಯದಲ್ಲಿ ತನ್ನದೇ ಆದ ಹಿಡಿತ ಹೊಂದಿರುವ ಮುಖಂಡ ಸಾಸಲು ಸತೀಶ್, ಪೂರ್ಣಿಮಾ ಶ್ರೀನಿವಾಸ್, ಗುಬ್ಬಿ ಬಾಲಾಜಿ ಕೆ.ಕುಮಾರ್, ಟೂಡಾ ಶಶಿಧರ್ ಬೆಂಬಲವಾಗಿ ನಿಂತಿದ್ದಾರೆ. ಹೈ ರಿಸ್ಕ್ ತೆಗೆದುಕೊಂಡು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿಸಿ ಕರೆತಂದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಮ್ಮ ಸಚಿವಗಿರಿಗಳನ್ನು ಪಣಕ್ಕಿಟ್ಟು ನಿಂತಿರುವುದು ಮತ್ತು ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ಸಿದ್ದರಾಮಯ್ಯರ ಕೈ ಬಲಪಡಿಸಬೇಕು ಎಂಬ ಪಟ್ಟು ಮುದ್ದಹನುಮೇಗೌಡರಿಗೆ ಲಾಭ ತಂದುಕೊಡುವ ಸಾಧ್ಯತೆ ಇದೆ.

ಗ್ರಾಮೀಣ ಪ್ರದೇಶಗಳಲ್ಲಿ ಸಂಸದ ಜಿ.ಎಸ್.ಬಸವರಾಜು ಅವರ ಪರಿಚಯವೇ ಇಲ್ಲ. ಅವರ ಅಭಿವೃದ್ಧಿ ಕಾರ್ಯಗಳೇನೆಂಬುದು ಜನರಿಗೆ ತಿಳಿದಿಲ್ಲ ಎಂದು ಕ್ಷೇತ್ರ ಸರ್ವೆಗಳಿಂದ ಗೊತ್ತಾಗಿದೆ. ಇದರ ನಡುವೆ ಹಾಲಿ ಸಂಸದ ಜಿ.ಎಸ್.ಬಸವಾಜು ಅವರಿಗೂ ಮಧುಗಿರಿಯಲ್ಲಿ ಗೋ ಬ್ಯಾಕ್ ಬಿಸಿ ತಗುಲಿದೆ. ಜಿಲ್ಲೆಯಲ್ಲಿ ಆಡಳಿತ ವಿರೋಧಿ ಅಲೆಯಿದ್ದು, ಮಾಧುಸ್ವಾಮಿ ಬಣದವರೇ ಆದ ಗುಬ್ಬಿಯ ಬಿಜೆಪಿ ಮುಖಂಡ ದಿಲೀಪ್ ಕುಮಾರ್, ತುರುವೇಕೆರೆ ಮಾಜಿ ಶಾಸಕ ಮಸಾಲೆ ಜಯರಾಂ ಹಾಗೂ ತಿಪಟೂರು ಭಾಗದ ಮುಖಂಡರು ಒಲ್ಲದ ಮನಸ್ಸಿನಿಂದ ಮೈತ್ರಿ ಅಭ್ಯರ್ಥಿಯ ಜೊತೆಗಿದ್ದಾರೆ ಎಂಬ ದೂರು ಬಿಜೆಪಿ ಕಾರ್ಯಕರ್ತರಲ್ಲೇ ಮಾತುಗಳು ಕೇಳಿಬರುತ್ತಿವೆ.

ಬಿಜೆಪಿ ಅಭ್ಯರ್ಥಿಗೆ ತಮ್ಮ ಸಮುದಾಯದ ಮತಗಳೇ ಕೈ ಕೊಡುವ ಸಾಧ್ಯತೆ ಇದ್ದು, ಇದನ್ನು ಅರಿತಿರುವ ಸೋಮಣ್ಣ ಮೋದಿ ಮುಖ ನೋಡಿ ವೋಟ್ ಕೊಡಿ, ಮೋದಿ ಮತ್ತೊಮ್ಮೆ ಪ್ರಧಾನಿಯಾಬೇಕು ಎಂಬ ಮಾತುಗಳನ್ನಾಡುವ ಮೂಲಕ ದೇಶ ಭಕ್ತಿಯನ್ನು ಮತಗಳನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿದ್ದಾರೆ. ಆದರೆ, ಬೆಲೆ ಏರಿಕೆ, ನಿರುದ್ಯೋಗ, ಪ್ರೆಸ್ ಮೀಟ್ ಮಾಡದ ಪ್ರಧಾನಿ, ಸರ್ಕಾರಿ ಸಂಸ್ಥೆಗಳ ಖಾಸಗೀಕರಣ, ಗ್ಯಾಸ್, ಪೆಟ್ರೋಲ್, ಡೀಸಲ್‌ನ ಗಗನ ಬೆಲೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಚೀನಾ ಆಕ್ರಮಿಸಿದ ಭಾರತ ಭೂ ಪ್ರದೇಶ, ರಾಜ್ಯಕ್ಕೆ ತೆರಿಗೆ ಅನ್ಯಾಯ  ಸೇರಿ ಈ ಎಲ್ಲಾ ಅಂಶಗಳು ಬಿಜೆಪಿಗೆ ಹಿನ್ನಡೆಯನ್ನು ತಂದೊಡ್ಡಲಿದೆ ಎನ್ನುವ ವಿಶ್ಲೇಷಣೆ ಮಾಡಲಾಗುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಗೆಲ್ಲಿಸಲು ಹುಮಸ್ಸಿನಿಂದ ಓಡಾಡಿದ್ದ ಜೆಡಿಎಸ್ ಕಾರ್ಯಕರ್ತರಿಗೆ ಈ ಬಾರಿ ಮೖತ್ರಿಯಿಂದ ಕಣದಲ್ಲಿ ಜೆಡಿಎಸ್ ಅಭ್ಯಾರ್ಥಿ ಇಲ್ಲದೆ ಅನಾಥಭಾವ ಕಾಡುತ್ತಿದೆ. ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈಗಾಲೇ ಹಲವರು ಕಾಂಗ್ರೆಸ್ ಗೆ ಸೇರಿದ್ದಾರೆ.

2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡರಿಗೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಎಸ್.ಪಿ.ಮುದ್ದಹನುಮೇಗೌಡ 74241 ಮತಗಳ ಅಂತರದಿಂದ ಗೆದ್ದು ಬೀಗಿದ್ದರು. ಚಿ.ನಾ.ಹಳ್ಳಿ, ತುರುವೇಕೆರೆ, ಕೊರಟಗೆರೆ ಮತ್ತು ಮಧುಗಿರಿ ಕ್ಷೇತ್ರಗಳ ಜನರು ಅತಿಹೆಚ್ಚು ಮತಗಳನ್ನು ನೀಡುವ ಮೂಲಕ ಗೌಡರ ಗೆಲುವಿಗೆ ಕಾರಣವಾಗಿದ್ದರು. ಇನ್ನು ಸಹಜವಾಗಿ ಜಿ.ಎಸ್.ಬಸವರಾಜು ಅವರಿಗೆ ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ ಹಾಗೂ ತಿಪಟೂರು ಕ್ಷೇತ್ರಗಳು ಲೀಡ್ ಕೊಟ್ಟಿದ್ದವು. ಬಿಜೆಪಿಗೆ ಲೀಡ್ ಕೊಟ್ಟಿದ್ದ ಕ್ಷೇತ್ರಗಳಾದ ತುಮಕೂರು ಗ್ರಾಮಾಂತರದಿಂದ ಮಾಜಿ ಶಾಸಕ ಗೌರಿಶಂಕರ್, ಗುಬ್ಬಿಯಿಂದ ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ತುಮಕೂರು ನಗರದಿಂದ ಜೆಡಿಎಸ್ ನ ಎನ್.ಗೋವಿಂದರಾಜು ಅವರನ್ನು ಕಾಂಗ್ರೆಸ್ ಸೇರ್ಪಡೆ ಮಾಡಿಕೊಂಡಿರುವುದು ಮುದ್ದಹನುಮೇಗೌಡರ ಗೆಲುವಿನ ಹಾದಿ ಸುಗಮವಾಗಿದೆ.

?s=150&d=mp&r=g
ಚಂದನ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X